ಪ್ರಚಾರದ ವೇಳೆ ಕ್ಷೇತ್ರದ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವ ಕಾಲ ಸನ್ನಿಹಿತ| ಹಿರೇಕೆರೂರು ಮತ್ತು ರಟ್ಟೀಹಳ್ಳಿ ತಾಲೂಕುಗಳ ಹಲವು ಸವಾಲುಗಳನ್ನು ಜೋಡೆತ್ತುಗಳು ಎದುರಿಸಬೇಕಿದೆ| ರಟ್ಟೀಹಳ್ಳಿ ಅಭಿವೃದ್ಧಿ ಮಲೆನಾಡು ಜಿಲ್ಲೆಗಳಿಗೆ ಹೊಂದಿಕೊಂಡಿರುವ ಕೃಷಿ ಪ್ರಧಾನವಾಗಿರುವ ಕ್ಷೇತ್ರ ಹಿರೇಕೆರೂರು ಮತ್ತು ರಟ್ಟೀಹಳ್ಳಿ ತಾಲೂಕುಗಳನ್ನು ಒಳಗೊಂಡಿದೆ|
ನಾರಾಯಣ ಹೆಗಡೆ
ಹಾವೇರಿ(ಡಿ.18): ಸ್ಥಿರ ಸರ್ಕಾರ, ಕ್ಷೇತ್ರದ ಅಭಿವೃದ್ಧಿ ಕಾರಣಕ್ಕಾಗಿ ಹಿರೇಕೆರೂರು ಕ್ಷೇತ್ರಕ್ಕೆ ಎದುರಾಗಿದ್ದ ಉಪಚುನಾವಣೆಯಲ್ಲಿ ಜೋಡೆತ್ತುಗಳು ನೀಡಿದ ಭರವಸೆಯನ್ನು ನಂಬಿ ಮತದಾರರು ಬಿ.ಸಿ.ಪಾಟೀಲರನ್ನು ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸಿದ್ದಾರೆ.
ಹಿರೇಕೆರೂರು ಮತ್ತು ರಟ್ಟೀಹಳ್ಳಿ ತಾಲೂಕುಗಳ ಒಳಗೊಂಡು ಕ್ಷೇತ್ರದ ಅಭಿವೃದ್ಧಿಯ ಸವಾಲುಗಳು ಇವರ ಮುಂದಿದೆ. ಮುಂದಿನ ಮೂರುವರೆ ವರ್ಷಗಳಲ್ಲಿ ಮಾದರಿ ಕ್ಷೇತ್ರವನ್ನಾಗಿಸುವ ಭರವಸೆ ಈಡೇರಿಸಬೇಕಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಸ್ಥಾನವನ್ನೇ ತ್ಯಜಿಸಿ ಮತ್ತೆ ಜನರ ಮುಂದೆ ಬಂದು ನಿಲ್ಲುವುದು ಸುಲಭದ ಮಾತಲ್ಲ. ಆದರೆ, ಹಿರೇಕೆರೂರು ಕ್ಷೇತ್ರದಲ್ಲಿ ಕೇವಲ ಒಂದೂವರೆ ವರ್ಷಗಳ ಹಿಂದೆ ಶಾಸಕರಾಗಿ ಆಯ್ಕೆಯಾಗಿದ್ದ ಬಿ.ಸಿ.ಪಾಟೀಲ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಮತ್ತೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಇತಿಹಾಸ ನಿರ್ಮಾಣ ಮಾಡಿದ್ದಾರೆ.
ಈ ಅಭೂತಪೂರ್ವ ಗೆಲುವಿನ ಹಿಂದೆ ಮಾಜಿ ಶಾಸಕ ಯು.ಬಿ.ಬಣಕಾರ ಅವರ ಶ್ರಮವೂ ಇದೆ. ಇವರಿಬ್ಬರೂ ಜೋಡೆತ್ತಿನಂತೆ ಪ್ರಚಾರ ಮಾಡಿ ಕ್ಷೇತ್ರದ ಜನರ ಮನಗೆದ್ದಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ತಾವಿಬ್ಬರೂ ಒಂದಾಗಿರುವುದಾಗಿ ಹೇಳಿದ್ದಾರೆ. ಈಗ ಇವೆಲ್ಲವೂ ಮುಗಿದ ಅಧ್ಯಾಯ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಘೋಷಿಸಿದಂತೆ ಶೀಘ್ರದಲ್ಲಿ ಬಿ.ಸಿ.ಪಾಟೀಲ ಮಂತ್ರಿಯೂ ಆಗಲಿದ್ದಾರೆ. ಯು.ಬಿ.ಬಣಕಾರ ಈಗಾಗಲೇ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದಾರೆ. ಪ್ರಚಾರದ ವೇಳೆ ಕ್ಷೇತ್ರದ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವ ಕಾಲ ಸನ್ನಿಹಿತವಾಗಿದೆ. ಹಿರೇಕೆರೂರು ಮತ್ತು ರಟ್ಟೀಹಳ್ಳಿ ತಾಲೂಕುಗಳ ಹಲವು ಸವಾಲುಗಳನ್ನು ಜೋಡೆತ್ತುಗಳು ಎದುರಿಸಬೇಕಿದೆ. ರಟ್ಟೀಹಳ್ಳಿ ಅಭಿವೃದ್ಧಿ ಮಲೆನಾಡು ಜಿಲ್ಲೆಗಳಿಗೆ ಹೊಂದಿಕೊಂಡಿರುವ ಕೃಷಿ ಪ್ರಧಾನವಾಗಿರುವ ಕ್ಷೇತ್ರ ಹಿರೇಕೆರೂರು ಮತ್ತು ರಟ್ಟೀಹಳ್ಳಿ ತಾಲೂಕುಗಳನ್ನು ಒಳಗೊಂಡಿದೆ.
ಎರಡು ವರ್ಷಗಳ ಹಿಂದೆ ಹಿರೇಕೆರೂರು ತಾಲೂಕಿನ ಭಾಗವಾಗಿದ್ದ ರಟ್ಟೀಹಳ್ಳಿಯನ್ನು ಪ್ರತ್ಯೇಕ ತಾಲೂಕಾಗಿ ರಚನೆ ಮಾಡಲಾಗಿದೆ. ಆದರೆ, ಇದುವರೆಗೆ ತಹಸೀಲ್ದಾರ ಕಚೇರಿ ಹೊರತುಪಡಿಸಿದರೆ ಪ್ರಮುಖ ಇಲಾಖೆಗಳ ಕಚೇರಿಗಳು ಆರಂಭವಾಗಿಲ್ಲ. ಎಲ್ಲ ಇಲಾಖೆಗಳಿಗೆ ಸುಸಜ್ಜಿತ ಕಟ್ಟಡದ ಅಗತ್ಯವಿದೆ. ಹೊಸ ತಾಲೂಕು ರಚನೆಯೊಂದಿಗೆ ರಟ್ಟೀಹಳ್ಳಿ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದೆ. ನೂತನ ರಟ್ಟೀಹಳ್ಳಿ ತಾಲೂಕಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಅಗತ್ಯವಾಗಿದೆ.
ಶೀಘ್ರಗತಿಯಲ್ಲಿ ಎಲ್ಲ ಸರ್ಕಾರಿ ಕಚೇರಿಗಳನ್ನು ಪ್ರಾರಂಭಿಸಿ ಸ್ಥಳೀಯರಿಗೆ ಅನುಕೂಲ ಕಲ್ಪಿಸುವುದು ಆದ್ಯತೆಯಾಗಬೇಕಿದೆ. ಕಳೆದ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸರ್ವಜ್ಞ ಪ್ರಾಧಿಕಾರಕ್ಕೆ ಜೀವ ತುಂಬಬೇಕಿದೆ. ಪ್ರಾಧಿಕಾರ ಅನುಷ್ಠಾನಕ್ಕೆ ತಂದು ಸರ್ವಜ್ಞನ ಅಬಲೂರು ಹಾಗೂ ಮಾಸೂರು ಗ್ರಾಮಗಳ ಅಭಿವೃದ್ಧಿ ಕಾರ್ಯ, ಅಧ್ಯಯನ ಪೀಠವನ್ನು ಸ್ಥಾಪಿಸಲು ಮುಂದಾಗಬೇಕಿದೆ.
ಮಂದಗತಿಯಲ್ಲಿ ಸಾಗುತ್ತಿರುವ ಗುಡ್ಡದ ಮಾದಾಪುರ, ಮಡ್ಲೂರು ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕಿದೆ. ಸರ್ವಜ್ಞ ಏತ ನೀರಾವರಿ ಯೋಜನೆಯನ್ನು ಪ್ರಾರಂಭಿಸುವ ಮೂಲಕ ತಾಲೂಕಿನ ಬಹುತೇಕ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಮಾಡಲು ಕ್ರಮ ಕೈಗೊಳ್ಳಬೇಕು. ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸಲು ಗಾರ್ಮೆಂಟ್ಸ್ ಸ್ಥಾಪನೆ ಅಗತ್ಯವಾಗಿದೆ. ಆ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಗೋವಿನ ಜೋಳಕ್ಕೆ ಸಂಬಂಧಿಸಿದ ಕಾರ್ಖಾನೆಯನ್ನು ಸ್ಥಾಪಿಸಿ ಉತ್ತೇಜನ ನೀಡಬೇಕು.
ಎರಡು ತಾಲೂಕುಗಳ ಹದಗೆಟ್ಟ ರಸ್ತೆಗಳನ್ನು ಮೆಲ್ದೆರ್ಜೆಗೆ ಏರಿಸುವುದು ಹಾಗೂ ಮರು ನಿರ್ಮಾಣ ಮಾಡುವುದು, ದುರ್ಗಾದೇವಿ ಕೆರೆಯಲ್ಲಿ ನಿರ್ಮಾಣವಾಗುತ್ತಿರುವ ಉದ್ಯಾನವನವನ್ನು ಪೂರ್ಣಗೊಳಿಸುವುದು, ಇತಿಹಾಸ ಪ್ರಸಿದ್ಧ ಮದಗ ಮಾಸೂರು ಕೆರ ಅಭಿವೃದ್ಧಿ ಹಾಗೂ ಅದನ್ನು ಪ್ರವಾಸಿ ತಾಣವನ್ನಾಗಿ ರೂಪಿಸಲು ಗಮನ ನೀಡಬೇಕಿದೆ.
ಪ್ರಸಕ್ತ ವರ್ಷ ಉತ್ತಮವಾಗಿ ಮಳೆಯಾಗಿರುವುದರಿಂದ ಕೆರೆಕಟ್ಟೆಗಳು ಭರ್ತಿಯಾಗಿವೆ. ಯುಟಿಪಿ ಕಾಲುವೆಯಲ್ಲೂ ನೀರು ಹರಿಯುತ್ತಿದೆ. ಈಗಲೇ ಇನ್ನುಳಿದ ಕೆರೆಗಳ ಭರ್ತಿಗೆ ಆದ್ಯತೆ ನೀಡಿ ಅಂತರ್ಜಲ ಮಟ್ಟ ಏರಿಕೆಗೂ ಗಮನ ನೀಡಿ ರೈತರಿಗೆ ಅನುಕೂಲ ಕಲ್ಪಿಸಬೇಕಿದೆ. ಸರ್ಕಾರಿ ಶಾಲಾ ಕಾಲೇಜುಗಳಿಗೆ ಮೂಲಸೌಲಭ್ಯ ಕಲ್ಪಿಸುವುದು, ಉತ್ತಮ ಆರೋಗ್ಯ ಸೇವೆ ದೊರೆಯುವಂತೆ ಮಾಡುವ ಸವಾಲು ನೂತನ ಶಾಸಕರ ಮುಂದಿದೆ. 250 ಕೋಟಿ ಅನುದಾನ ಉಪಚುನಾವಣೆಗೂ ಕೆಲ ದಿನಗಳ ಮುನ್ನ ಹಿರೇಕೆರೂರು ಕ್ಷೇತ್ರಕ್ಕೆ ಸರ್ಕಾರ ಸುಮಾರು 250 ಕೋಟಿಗಳ ಅನುದಾನದ ಕೊಡುಗೆಯನ್ನು ಘೋಷಿಸಿದೆ.
185 ಕೋಟಿ ವೆಚ್ಚದಲ್ಲಿ 80ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಸರ್ವಜ್ಞ ಏತ ನೀರಾವರಿ ಯೋಜನೆ, 17 ಕೋಟಿ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ, ಮದಗ ಮಾಸೂರು ಕೆರೆ ಅಭಿವೃದ್ಧಿಗೆ 25 ಕೋಟಿ, ರಟ್ಟೀಹಳ್ಳಿ ತಾಲೂಕಿನ ಕಡೂರ ಗ್ರಾಮದಲ್ಲಿ ಯುಟಿಪಿ ಕಾಮಗಾರಿಗೆ 25 ಕೋಟಿ, 85 ಕೋಟಿಗಳಲ್ಲಿ ಲೋಕೋಪಯೋಗಿ ಇಲಾಖೆ ಕಾಮಗಾರಿ, 15 ಕೋಟಿಗಳಲ್ಲಿ ರಸ್ತೆ ಅಭಿವೃದ್ಧಿಗೆ ಸರ್ಕಾರ ಅನುದಾನ ಘೋಷಿಸಿದೆ. ಈ ಎಲ್ಲ ಕಾಮಗಾರಿಗಳು ಆದಷ್ಟು ಬೇಗ ಅನುಷ್ಠಾನಕ್ಕೆ ಬರಬೇಕಿದೆ. ಜನರಿಗೆ ನೀಡಿದ ಭರವಸೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಮೂಲಕ ಜೋಡೆತ್ತು ಖ್ಯಾತಿಯ ಬಿ.ಸಿ.ಪಾಟೀಲ ಮತ್ತು ಬಣಕಾರ ಕ್ಷೇತ್ರದ ಜನರಿಗೆ ಸ್ಪಂದಿಸಬೇಕಿದೆ.
ಈ ಬಗ್ಗೆ ಮಾತನಾಡಿದ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ ಅವರು, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರಗತಿಯಲ್ಲಿ ಕೈಗೊಳ್ಳಲಾಗುವುದು. ಈಗಾಗಲೇ ಘೋಷಣೆಆಗಿರುವ 250 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಟೆಂಡರ್ ಕರೆಯಲಾಗುತ್ತಿದೆ. ಚುನಾವಣೆಗಿಂತ ಮೊದಲು ನೀಡಿದ ಭರವಸೆಗಳನ್ನು ಈಡೇರಿಸಲು ಬದ್ಧವಾಗಿದ್ದೇನೆ. ನೀರಾವರಿ, ಕೆರೆ ಭರ್ತಿ, ರಸ್ತೆ ಇತ್ಯಾದಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕ್ಷೇತ್ರ ಮಾದರಿಯಾಗಿ ಮಾಡುವುದಾಗಿ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ. ಈ ವಿಷಯದಲ್ಲಿ ನಾವು ರಾಜಿಯಾಗುವ ಪ್ರಶ್ನೆಯೇ ಇಲ್ಲ. ಕುಡಿವ ನೀರು, ಕೃಷಿ, ಮೂಲಸೌಲಭ್ಯ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಹೇಳಿದ್ದಾರೆ.
ಈ ಚುನಾವಣೆ ಅಭಿವೃದ್ಧಿ ವಿಷಯದ ಮೇಲೆ ನಡೆದಿದೆ. ನೂತನ ಶಾಸಕರು ದೂರದೃಷ್ಟಿಯುಳ್ಳ ನೀರಾವರಿ ಯೋಜನೆಗಳನ್ನು ಕ್ಷೇತ್ರಕ್ಕೆ ನೀಡಲಿ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗುವ ನಿಟ್ಟಿನಲ್ಲಿ ಕ್ರಮ, ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಮುಂದಿನ ಚುನಾವಣೆ ಒಳಗಾಗಿ ಈಡೇರಿಸುವ ಮೂಲಕ ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದು ದೂದಿಹಳ್ಳಿ ವಕೀಲ ರವಿಕುಮಾರ್ ಖಂಡಿಬಾಗೂರ ಅವರು ತಿಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದ ಶಾಸಕರೇ ಹಿರೇಕೆರೂರು ಕ್ಷೇತ್ರದಲ್ಲೂ ಇರುವುದು ಇತಿಹಾಸದಲ್ಲಿ ಮೊದಲು. ಅದರಲ್ಲೂ ಬಣಕಾರ ಮತ್ತು ಪಾಟೀಲ ಒಂದಾಗಿರುವುದು ವಿಶೇಷ. ಇಬ್ಬರೂ ಸೇರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂಬ ಭರವಸೆಯಿದೆ. ಸರ್ಕಾರದಿಂದ ಅನುದಾನ ತಂದು ಯೋಜನೆ ಅನುಷ್ಠಾನಗೊಳಿಸಿ ಜನರ ನಿರೀಕ್ಷೆ ಉಳಿಸಿಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕುಮಾರ ಪ್ಯಾಟೇರ ತಿಳಿಸಿದ್ದಾರೆ.