ಕೆ.ಎಂ.ಮಂಜುನಾಥ್
ಬಳ್ಳಾರಿ (ಜ.21) : ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಪ್ರತಿಬಿಂಬ ಎನಿಸಿದ ‘ಬಳ್ಳಾರಿ ಉತ್ಸವ’ಕ್ಕೆ ಕ್ಷಣಗಣನೆ ಶುರುವಾಗಿದೆ. ಎರಡು ದಿನಗಳ ಉತ್ಸವ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದು ನಗರದೆಲ್ಲೆಡೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
undefined
ಉತ್ಸವದ ಮುನ್ನುಡಿ ಎಂಬಂತೆ ಕಳೆದ ಎರಡು ದಿನಗಳಿಂದ ಗಾಳಿಪಟ ಸ್ಪರ್ಧೆ, ಸಿರಿಧಾನ್ಯ ನಡಿಗೆ ಆರೋಗ್ಯದ ಕಡೆ, ಬಳ್ಳಾರಿ ಬೈಸ್ಕೈ, ಚಿತ್ರಕಲಾ ಶಿಬಿರ, ಅಲಂಕೃತ ಎತ್ತಿನಬಂಡಿ ಮೆರವಣಿಗೆ, ವೈವಿಧ್ಯಮಯ ದೀಪಾಲಂಕಾರ, ರಂಗೋಲಿ ಸ್ಪರ್ಧೆ, ಸೈಕಲ್ ಜಾಥಾ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಸ್ವಯಂ ಆಸಕ್ತಿಯಿಂದ ಭಾಗವಹಿಸಿದ್ದಾರೆ. ಜ.21ರಿಂದ ಅಧಿಕೃತವಾಗಿ ಚಾಲನೆಗೊಳ್ಳುವ ‘ಬಳ್ಳಾರಿ ಉತ್ಸವ’ ಜಿಲ್ಲೆಯ ಜನರು ಎದುರು ನೋಡುತ್ತಿದ್ದಾರೆ.
ಬಳ್ಳಾರಿ ಉತ್ಸವಕ್ಕೆ ಕ್ಷಣಗಣನೆ, ಮುಖ್ಯ ಬೀದಿಗಳಲ್ಲಿ ರಂಗೋಲಿ ಚಿತ್ತಾರ
ವಿದ್ಯುತ್ ದೀಪಗಳ ಅಲಂಕಾರ; ಸ್ವಚ್ಛಗೊಂಡ ರಸ್ತೆಗಳು:
ಉತ್ಸವ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ರಾಯಲ್ ವೃತ್ತ, ಗವಿಯಪ್ಪ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ವಿದ್ಯುತ್ ದೀಪಗಳು ಝಗಮಗಿಸುತ್ತಿವೆ. ಇಲ್ಲಿನ ಡಾ.ರಾಜಕುಮಾರ ರಸ್ತೆಯಲ್ಲಿನ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸುಸಜ್ಜಿತ ವೇದಿಕೆ ನಿರ್ಮಾಣ ಮಾಡಲಾಗಿದೆ. 120 ಅಡಿ ಉದ್ದ, 40 ಅಡಿ ಅಗಲ ವಿಶಾಲವಾದ ವೇದಿಕೆ ಇದಾಗಿದ್ದು, ಪ್ರಮುಖ ಸಂಗೀತ ಕಾರ್ಯಕ್ರಮಗಳು ಇಲ್ಲಿ ಜರುಗಲಿವೆ. ವೇದಿಕೆ ಮುಂಭಾಗದಲ್ಲಿ 40 ಸಾವಿರಕ್ಕೂ ಹೆಚ್ಚಿನ ಆಸನಗಳ ವ್ಯವಸ್ಥೆ ಮಾಡಲಾಗಿದೆ. ದೂರದಿಂದ ನೋಡುವ ವೀಕ್ಷಕರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ವಿಶಾಲವಾದ ಎಲ್‌ಇಡಿ ಪರದೆಗಳನ್ನು ನಿರ್ಮಿಸಲಾಗಿದೆ.
ನಗರದ ಆರಾದ್ಯದೈವ ಶ್ರೀಕೋಟೆ ಮಲ್ಲೇಶ್ವರಸ್ವಾಮಿ ದೇವಸ್ಥಾನ ಬಳಿ ಮತ್ತೊಂದು ವೇದಿಕೆ ನಿರ್ಮಿಸಲಾಗಿದ್ದು, ಅಲ್ಲಿ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಇನ್ನು ವೇದಿಕೆಯ ಬಳಿಯೇ ವ್ಯಾಪಾರಿ ಮಳಿಗೆಗಳನ್ನು ತೆರೆಯಲಾಗಿದೆ. ಫಲಪುಷ್ಪ ಪ್ರದರ್ಶನ ಇರಲಿದೆ. ಬಳ್ಳಾರಿ ನಗರದಲ್ಲಿ ಸಿಗುವ ಪ್ರಮುಖ ಖಾದ್ಯಗಳು ಒಂದೇ ಕಡೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯವರು ಸಹ ಮಳಿಗೆ ಹಾಕಿದ್ದು, ತಮ್ಮ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿಯನ್ನು ಈ ಮಳಿಗೆಯಲ್ಲಿ ಒದಗಿಸಲಿದ್ದಾರೆ. ವಿಶೇಷವಾಗಿ ಸಿರಿ ಧಾನ್ಯಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ.
ಪೊಲೀಸ್ ಇಲಾಖೆಯಿಂದಲೂ ಸಹ ಮಳಿಗೆ ತೆರೆಯಲಾಗಿದೆ. ಇಲ್ಲಿ ಕಾನೂನು ಅರಿವಿನ ಜೊತೆಗೆ ವಿಶೇಷವಾಗಿ ಸೈಬರ್ ಅಪರಾಧಗಳ ಕುರಿತು ವಿಸ್ಕೃತ ಮಾಹಿತಿ ಒದಗಿಸುವ ಗುರಿ ಹೊಂದಲಾಗಿದೆ.
ಉತ್ಸವಕ್ಕೆ ಬರುವವರಿಗೆ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಇನ್ನು ಉತ್ಸವದ ಭಾಗವಾಗಿ ಗುರುವಾರದಿಂದ ಬಳ್ಳಾರಿ ಬೈ ಸ್ಕೈ ಶೀರ್ಷಿಕೆ ಅಡಿ ಬಳ್ಳಾರಿಯನ್ನು ಆಗಸದ ಕಡೆಯಿಂದ ನೋಡಲು ಅವಕಾಶ ಕಲ್ಪಿಸಲಾಗಿದೆ. 6 ರಿಂದ 8 ನಿಮಿಷಗಳ ಹೆಲಿಕಾಪ್ಟರ್ ಹಾರಾಟದಲ್ಲಿ ಬಳ್ಳಾರಿ ಕೋಟೆ, ನಗರ ಪ್ರದೇಶವನ್ನು ಆಗಸದ ಕಡೆಯಿಂದ ನೋಡಬಹುದಾಗಿದೆ. ಇದರ ಜೊತೆಗೆ ಪ್ಯಾರಾ ಗ್ಲೈಡಿಂಗ್ ವ್ಯವಸ್ಥೆ ಸಹ ಮಾಡಲಾಗಿದೆ. ಉತ್ಸವಕ್ಕೆ ಬರುವವರಿಗೆ ಉಚಿತ ಬಸ್, ಬಂದ ವಾಹನಗಳಿಗೆ ನಿಲ್ಲಲು ಸ್ಥಳ ನಿಗದಿ ಮಾಡಲಾಗಿದೆ.
ವೇದಿಕೆ ಪರಿಶೀಲಿಸಿದ ಡಿಸಿ,ಎಸ್ಪಿ:
ಬಳ್ಳಾರಿ ಉತ್ಸವದ ಮುಖ್ಯ ವೇದಿಕೆಯ ಅಂತಿಮ ಹಂತದ ಸಿದ್ಧತೆಯನ್ನು ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಪರಿಶೀಲಿಸಿದರು. ಇದೇ ಪ್ರಥಮ ಬಾರಿಗೆ ಬಳ್ಳಾರಿ ಉತ್ಸವವನ್ನು ಆಯೋಜಿಸಲಾಗಿದ್ದು, ಉತ್ಸವದಲ್ಲಿ ಈಗಾಗಲೇ ಚಕ್ಕಡಿ ಬಂಡಿ, ಚಿತ್ರಕಲೆ, ಗಾಳಿಪಟ, ಮ್ಯಾರಥಾನ್ ಓಟ, ರಂಗೋಲಿ ಪ್ರದರ್ಶನಗಳನ್ನು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮೂಲಕ ಯಶಸ್ವಿಯಾಗಿ ನಡೆಸಲಾಗಿದೆ. ಅದರಂತೆ ಶನಿವಾರ, ಭಾನುವಾರ ಉತ್ಸವವನ್ನು ಇನ್ನಷ್ಟುವ್ಯವಸ್ಥಿತವಾಗಿ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಡಿಸಿ ಪಾಲಮಾಟಿ ಇದೇ ವೇಳೆ ತಿಳಿಸಿದರು.
ಉತ್ಸವದ ಮುಖ್ಯ ವೇದಿಕೆಯನ್ನು ಮುನ್ಸಿಪಲ್ ಮೈದಾನದಲ್ಲಿ ಸಿದ್ದಪಡಿಸಲಾಗಿದೆ, ಶನಿವಾರ ಸಂಜೆ 6 ಗಂಟೆಗೆ ಉದ್ಘಾಟನೆ ನಡೆಯಲಿದ್ದು, ಅತಿಥಿಗಳಿಗೆ, ಸಾರ್ವಜನಿಕರಿಗೆ ಮುಖ್ಯ ವೇದಿಕೆಯಲ್ಲಿ 50 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ಆಗಮನದ ಅನುಗುಣವಾಗಿ ಆಸನಗಳನ್ನು ಹಾಕಲಾಗುವುದು ಎಂದರು.
ಸಾರಿಗೆ ವ್ಯವಸ್ಥೆ ..
ಜಿಲ್ಲೆಯ ವಿವಿಧೆಡೆಯಿಂದ ಬಳ್ಳಾರಿ ಉತ್ಸವಕ್ಕೆ ಬರುವವರಿಗಾಗಿ ಪ್ರತಿ ಗ್ರಾಮ ಪಂಚಾಯತ್‌ನಿಂದ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಹಾಗೂ ತಾಲೂಕು ಕೇಂದ್ರಗಳಿಂದ ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ ಹೆಚ್ಚುವರಿ ಬಸ್ ಓಡಿಸಲು ಸಾರಿಗೆ ಸಂಸ್ಥೆಗೆ ಜಿಲ್ಲಾಡಳಿತ ಸೂಚಿಸಿದೆ. ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ದುರ್ಗಮ್ಮ ದೇವಸ್ಥಾನ ಆವರಣ, ನೂತನ ಡಿಸಿ ಕಚೇರಿ ಆವರಣ, ಕಮ್ಮಭವನ ಹಾಗೂ ಪುಟ್ಬಾಲ್ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಸಿಎಂ ಬೊಮ್ಮಾಯಿ ಚಾಲನೆ
2 ದಿನದ ಜಿಲ್ಲಾ ಉತ್ಸವಕ್ಕೆ ಜ.21ರಂದು ಸಂಜೆ 6 ಗಂಟೆಗೆ ಮುನಿಸಿಪಲ್ ಮೈದಾನದಲ್ಲಿನ ಬಳ್ಳಾರಿ ರಾಘವ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಕನ್ನಡ ಮತ್ತು ಸಂಸ್ಕೃತಿ, ಇಂಧನ ಇಲಾಖೆ ಸಚಿವ ವಿ. ಸುನೀಲಕುಮಾರ, ಪ್ರವಾಸೊದ್ಯಮ, ಪರಿಸರ, ಜೀವಿಶಾಸ್ತ್ರ ಇಲಾಖೆ ಸಚಿವ ಆನಂದ್ ಸಿಂಗ್ ಭಾಗಿಯಾಗಲಿದ್ದಾರೆ.
Bellary Utsav: ₹20 ಕೋಟಿಯ ಶ್ವಾನ ಪ್ರದರ್ಶನಕ್ಕೆ ವೇದಿಕೆಯಾಗ್ತಿರೋ ಬಳ್ಳಾರಿ ಉತ್ಸವ!
ಜನ್ಯ-ಮಂಗ್ಲಿ- ಪ್ರಾಣೀಶ್ ಆಕರ್ಷಣೆ:
ಮೊದಲ ದಿನ ಮುನಿಸಿಪಲ್ ಮೈದಾನದಲ್ಲಿನ ಬಳ್ಳಾರಿ ರಾಘವ ವೇದಿಕೆಯಲ್ಲಿ ಉದ್ಘಾಟನಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬರಲಿವೆ. ಟಾಲಿವುಡ್‌ನ ಖ್ಯಾತ ಗಾಯಕಿ ಮಂಗ್ಲಿ, ಸುಗಮ ಸಂಗೀತ ಗಾಯಕಿ ಎಂ.ಡಿ. ಪಲ್ಲವಿ ಅವರ ಗೀತ ಗಾಯನ ಲಹರಿ ಮೂಡಿಬರಲಿದೆ. ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ಅರ್ಜುನ ಜನ್ಯಾರ ತಂಡ ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದೆ. ಜ.22ರಂದು ಇದೇ ವೇದಿಕೆಯಲ್ಲಿ ಬಾಲಿವುಡ್ ಖ್ಯಾತನಟಿ ಸುನಿಧಿ ಚೌಹಾಣ್ ಮತ್ತು ತಂಡ ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದೆ. ನೂರಾರು ಕಲಾವಿದರು ವಿವಿಧ ವೇದಿಕೆಗಳಲ್ಲಿ ಕಲಾ ಪ್ರದರ್ಶನ ನೀಡಲಿದ್ದಾರೆ