ನಮ್ಮ ಬೆಂಗಳೂರು ಅವಾರ್ಡ್‌: ಜೀವಮಾನ ಸಾಧನೆ ಪ್ರಶಸ್ತಿಗೆ ದೊರೆಸ್ವಾಮಿ ಭಾಜನ

By Kannadaprabha NewsFirst Published Sep 20, 2020, 9:10 AM IST
Highlights

ಚೇತನ್‌ಗೌಡ, ಮಂಜುನಾಥ್‌ ಹೆಬ್ಬಾರ್‌, ಕುಮಾರಿ ಇಂದಿರಾ, ನಳಿನಿ, ಸ್ಮಿತಾ ಕುಲಕರ್ಣಿಗೆ ಆನ್‌ಲೈನ್‌ನಲ್ಲಿ ಪ್ರಶಸ್ತಿ ಪ್ರದಾನ| ಬೆಂಗಳೂರಿನ ಏಳಿಗೆಗಾಗಿ ದುಡಿದ ಪ್ರತಿಯೊಬ್ಬರೂ ಹೀರೋಗಳೇ| ನಿಜವಾದ ಹೀರೋಗಳಿಗೆ ತಕ್ಕ ಮನ್ನಣೆ| 

ಬೆಂಗಳೂರು(ಸೆ.20): ತಮ್ಮ ಜೀವಿತಾವಧಿಯಲ್ಲಿ ಬೆಂಗಳೂರಿಗೆ ಅತಿ ವಿಶಿಷ್ಟ ಸೇವೆ ಸಲ್ಲಿಸಿದವರನ್ನು ಗುರುತಿಸಲು ಇದೇ ಮೊದಲ ಬಾರಿಗೆ ನಮ್ಮ ಬೆಂಗಳೂರು ಅವಾರ್ಡ್ಸ್ ಟ್ರಸ್ಟ್‌ ಸೇರ್ಪಡೆಗೊಳಿಸಿರುವ ಜೀವಮಾನ ಸಾಧನೆ ಪ್ರಶಸ್ತಿ ಸ್ವಾತಂತ್ರ್ಯ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ ಎಚ್‌.ಎಸ್‌.ದೊರೆಸ್ವಾಮಿ ಅವರಿಗೆ ಲಭಿಸಿದೆ.

ಶನಿವಾರ ನಮ್ಮ ಬೆಂಗಳೂರು ಅವಾರ್ಡ್ಸ್ ಟ್ರಸ್ಟ್‌ ಆಯೋಜಿಸಿದ್ದ 11ನೇ ವರ್ಷದ ನಮ್ಮ ಬೆಂಗಳೂರು ಪ್ರಶಸ್ತಿ ವಿತರಣೆ ಸಮಾರಂಭ ಆನ್‌ಲೈನ್‌ ಮೂಲಕ ನಡೆಯಿತು. ಈವರೆಗೆ ಬೆಂಗಳೂರಿನ ನಿಜವಾದ ಹೀರೋಗಳನ್ನು ಗುರುತಿಸುವ ಉದ್ದೇಶ ಹೊಂದಿರುವ ಈ ಪ್ರಶಸ್ತಿಗಳನ್ನು ಬೆಂಗಳೂರನ್ನು ವಾಸಿಸಲು ಯೋಗ್ಯ ನಗರವನ್ನಾಗಿ ಮಾಡಲು ಅಸಾಮಾನ್ಯ ಕೊಡುಗೆ ನೀಡಿದ ಐದು ಮಂದಿಗೆ ಪ್ರಶಸ್ತಿ ನೀಡಲಾಗುತ್ತಿತ್ತು. 2020ನೇ ಸಾಲಿನಲ್ಲಿ ಮೊದಲ ಬಾರಿಗೆ ಜೀವಮಾನ ಪ್ರಶಸ್ತಿ ಸೇರ್ಪಡೆಗೊಳಿಸಲಾಗಿದೆ.

2020ನೇ ಸಾಲಿನ ವರ್ಷದ ಉದಯೋನ್ಮುಖ ತಾರೆ ವಿಭಾಗದಲ್ಲಿ ಚೇತನ್‌ಗೌಡ, ವರ್ಷದ ಮಾಧ್ಯಮ ವ್ಯಕ್ತಿ ವಿಭಾಗದಲ್ಲಿ ಪತ್ರಕರ್ತ ಮಂಜುನಾಥ ಹೆಬ್ಬಾರ್‌, ವರ್ಷದ ಸರ್ಕಾರಿ ಅಧಿಕಾರಿ ವಿಭಾಗದಲ್ಲಿ ಕುಮಾರಿ ಇಂದಿರಾ, ವರ್ಷದ ನಮ್ಮ ಬೆಂಗಳೂರಿಗರು ವಿಭಾಗದಲ್ಲಿ ನಳಿನಿ ಶೇಖರ್‌, ವರ್ಷದ ಸಮಾಜಿಕ ಉದ್ಯಮಿ ವಿಭಾಗದಲ್ಲಿ ಸ್ಮಿತಾ ಕುಲಕರ್ಣಿ ಅವರು ಪ್ರಶಸ್ತಿಗೆ ಭಾಜನರಾದರು.

ದೇಶದಲ್ಲಿ ಪ್ರಜಾಪ್ರಭುತ್ವ ಅತಂತ್ರವಾಗಿದೆ: ದೊರೆಸ್ವಾಮಿ

ತೀರ್ಪುಗಾರರ ಸಮಿತಿ ಅಧ್ಯಕ್ಷ, ಬೆಂಗಳೂರು ಅವಾರ್ಡ್‌ ಟ್ರಸ್ಟಿನ ಪ್ರದೀಪ್‌ ಕರ್‌ ಮಾತನಾಡಿ, ತಮ್ಮ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೆಲಸ ಮಾಡಿ ಅಂತಿಮ ಸುತ್ತು ತಲುಪಿದ ಎಲ್ಲ 26 ಮಂದಿಯೂ ವಿಜಯಿಗಳೇ. ಅಂತಿಮ ವಿಜಯಿಗಳನ್ನು ಗುರುತಿಸುವುದು ಸಮಿತಿಗೆ ಸವಾಲಿನ ಕೆಲಸವಾಗಿತ್ತು. ಹಲವು ಸುತ್ತಿನ ಚರ್ಚೆಗಳನ್ನು ನಡೆಸಬೇಕಾಯಿತು. ಇಂಥ ವಿಶಿಷ್ಟವ್ಯಕ್ತಿಗಳನ್ನು ನಾಮ ನಿರ್ದೇಶನ ಮಾಡಿದ ಬೆಂಗಳೂರಿನ ನಾಗರಿಕರಿಗೆ ನಾವು ಅಭಾರಿಯಾಗಿದ್ದೇವೆ ಎಂದರು.
ರಂಗಭೂಮಿ ಹಿರಿಯ ಕಲಾವಿದೆ ಆರುಂಧತಿ ನಾಗ್‌ ಮಾತನಾಡಿ, ಸಹಾಯದ ಅಗತ್ಯವಿರುವಾಗ ಆ ಸಹಾಯವನ್ನು ನೀಡುವುದೇ ನಿಜವಾದ ಸೇವೆಯ ತಿರುಳು. ಇಂಥ ಪರೀಕ್ಷೆಯ ಸಮಯದಲ್ಲಿಯೂ ಬೆಂಗಳೂರು ಅವಾರ್ಡ್‌ ಟ್ರಸ್ಟ್‌ ನಿಸ್ವಾರ್ಥವಾಗಿ ಕೆಲಸ ಮಾಡುವವರನ್ನು ಗುರುತಿಸುತ್ತಿರುವುದು ಹೊಸ ಭರವಸೆಯನ್ನು ಮೂಡಿಸಿದೆ ಎಂದು ಹೇಳಿದರು.

ತೀರ್ಪುಗಾರರ ಸಮಿತಿ

ಮೈಕ್ರೋಲ್ಯಾಂಡ್‌ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಕರ್‌, ಮ್ಯಾಪ್‌ಯೂನಿಟಿ ಸ್ಥಾಪಕಿ ಡಾ. ಅಶ್ವಿನ್‌ ಮಹೇಶ್‌, ಆಂಕಾಲಜಿ ಸರ್ಜನ್‌ ಡಾ. ವಿಶಾಲ್‌ರಾವ್‌, ಎಎನ್‌ಎಂಇಎಲ್‌ ನಿರ್ದೇಶಕ ಸಂಜಯ ಪ್ರಭು, ಫೀಡ್‌ಬ್ಯಾಕ್‌ ಕನ್ಸಲ್ಟಿಂಗ್‌ ಅಧ್ಯಕ್ಷ ವಿ.ರವಿಚಂದರ್‌, ಆವಾಸ್‌ ಸ್ಥಾಪಕ ಟ್ರಸ್ಟಿಅನಿತಾ ರೆಡ್ಡಿ, ಜಲ ಸಂರಕ್ಷಣೆ ತಜ್ಞ ಎಸ್‌.ವಿಶ್ವನಾಥ್‌, ಮಣಿಪಾಲ್‌ ಗ್ರೂಪ್‌ ಆಫ್‌ ಹಾಸ್ಟಿಟಲ್ಸ್‌ ಅಧ್ಯಕ್ಷ ಡಾ. ಸುದರ್ಶನ್‌ ಬಲ್ಲಾಳ್‌, ಪಾರಂಪರಿಕ ಸಂರಕ್ಷಣಾ ತಜ್ಞ ಉದಯಕುಮಾರ್‌, ಪ್ಲುಮಾ ನಿರ್ದೇಶಕ ಪಿ.ಜಿ.ಭಟ್‌, ಸಿವಿಕ್‌ ಕಾರ್ಯನಿರ್ವಾಹಕ ಟ್ರಸ್ಟಿಕಾತ್ಯಾಯಿನಿ ಚಾಮರಾಜ್‌, ಅಕ್ಷರ ಫೌಂಡೇಷನ್‌ ಅಧ್ಯಕ್ಷ ಅಶೋಕ್‌ ಕಾಮತ್‌, ಸಿಟಿಜನ್‌ ಆಕ್ಷನ್‌ ಫೋರಂ ಮಾಜಿ ಅಧ್ಯಕ್ಷ ಡಿ.ಎಸ್‌.ರಾಜಶೇಖರ್‌, ಮಾಧ್ಯಮ ವೃತ್ತಿಪರರಾದ ವಾಸಂತಿ ಹರಿಪ್ರಕಾಶ್‌, ಸಂಗೀತಗಾರ ಜಿಷ್ಣು ದಾಸ್‌ಗುಪ್ತಾ, ಅಡ್ವಾಂಟೇಜ್‌ ಆಫ್‌ ಶೋರ್‌ ನಾಲೆಜ್‌ ಸವೀರ್‍ಸಸ್‌ ಸ್ಥಾಪಕ ಅಧ್ಯಕ್ಷ ಸಿ.ಎನ್‌.ಕುಮಾರ್‌ ಅವರು ಬೆಂಗಳೂರು ಪ್ರಶಸ್ತಿಗಳ ತೀರ್ಪುಗಾರರಾಗಿದ್ದರು.

‘ನಗರದ ಏಳಿಗೆಗಾಗಿ ದುಡಿದ ಪ್ರತಿಯೊಬ್ಬರೂ ಹೀರೋಗಳು’

ನಮ್ಮ ಬೆಂಗಳೂರು ಪ್ರಶಸ್ತಿಗಳ ಬ್ರಾಂಡ್‌ ರಾಯಭಾರಿ ಚಿತ್ರನಟ ರಮೇಶ್‌ ಅರವಿಂದ್‌ ಮಾತನಾಡಿ, ಬೆಂಗಳೂರು ನಗರದ ಏಳಿಗೆಗಾಗಿ ನಿಸ್ವಾರ್ಥವಾಗಿ ದುಡಿದ ಪ್ರತಿಯೊಬ್ಬರೂ ನಮ್ಮ ಹೀರೋಗಳು. ಈ ಪ್ರಶಸ್ತಿಗಳೊಂದಿಗೆ ಗುರುತಿಸಿಕೊಳ್ಳುವುದು ನನಗೆ ಹೆಮ್ಮೆಯ ವಿಷಯ. ನಿಜವಾದ ಹೀರೋಗಳಿಗೆ ತಕ್ಕ ಮನ್ನಣೆ ದೊರೆಯುವಂತಾಗಲು ನಾನು ಎಚ್ಚರಿಕೆಯಿಂದ ನೋಡಿದ್ದೇನೆ. ತೆರೆಯ ಮರೆಯಲ್ಲಿಯೇ ಇದ್ದು ಅಡೆತಡೆಗಳ ನಡುವೆಯೂ ನಮ್ಮ ನಗರವನ್ನು ಉತ್ತಮ ಸ್ಥಳವನ್ನಾಗಿ ಮಾಡುತ್ತಿರುವ ಅನಾಮಧೇಯ ಹೀರೋಗಳ ಹುಡುಕಾಟವೇ ಈ ಪ್ರಶಸ್ತಿ ಎಂದು ಹೇಳಿದರು.
 

click me!