Tumakur : ನಯಾ ಪೈಸೆ ಪಡೆಯದೆ ಬಡವರಿಗೆ ನೇತ್ರ ಚಿಕಿತ್ಸೆ

By Kannadaprabha News  |  First Published Dec 8, 2022, 4:45 AM IST

 ಬಡವರಿಂದ ಒಂದು ನಯಾಪೈಸೆಯನ್ನು ಪಡೆಯದೆ ನೇತ್ರ ದೋಷ ನಿವಾರಣೆಗಾಗಿ ತುಮಕೂರಿನಲ್ಲಿ ನೂತನವಾಗಿ ಆರಂಭವಾಗಿರುವ ನಾರಾಯಣ ನೇತ್ರಾಲಯ ಸಂಕಲ್ಪ ಮಾಡಿದೆ.


  ತುಮಕೂರು (ಡಿ.08) :  ಬಡವರಿಂದ ಒಂದು ನಯಾಪೈಸೆಯನ್ನು ಪಡೆಯದೆ ನೇತ್ರ ದೋಷ ನಿವಾರಣೆಗಾಗಿ ತುಮಕೂರಿನಲ್ಲಿ ನೂತನವಾಗಿ ಆರಂಭವಾಗಿರುವ ನಾರಾಯಣ ನೇತ್ರಾಲಯ ಸಂಕಲ್ಪ ಮಾಡಿದೆ.

ತುಮಕೂರಿನ ಶೆಟ್ಟಿಹಳ್ಳಿ ರಿಂಗ್‌ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಈ ಉಚಿತ ನೇತ್ರ ಚಿಕಿತ್ಸಾ ಕೇಂದ್ರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಆರೋಗ್ಯ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದ್ದು, ರಾಜ್ಯವನ್ನು ಆರೋಗ್ಯ ಕರ್ನಾಟಕವನ್ನಾಗಿಸುವ ಗುರಿಯನ್ನು ಹೊಂದಲಾಗಿದೆ. ಇದಕ್ಕೆ ಪೂರಕವಾಗಿ ಖಾಸಗಿ ಆಸ್ಪತ್ರೆಗಳ ವೈದ್ಯರು ಬಡವರಿಗೆ ಉಚಿತ ಆರೋಗ್ಯ ಸೇವೆ ನೀಡಲು ಮುಂದಾಗಬೇಕು. ಶ್ರೀಮಂತರು ಹಣ ಕೊಟ್ಟು ಚಿಕಿತ್ಸೆ ಪಡೆಯುತ್ತಾರೆ. ಆದರೆ ಬಡವರು ದೇವರಿಗೆ ಪ್ರಾರ್ಥನೆ ಮಾಡುತ್ತಾರೆ. ಸಮಾಜದ ಒಳಿತಿಗೆ ಬಡವರ ಪ್ರಾರ್ಥನೆ ಸಲ್ಲುತ್ತದೆ. ಇಂತಹ ಬಡವರಿಗಾಗಿ ಉಚಿತ ಆರೋಗ್ಯ ಸೇವೆ ನೀಡಲು ಖಾಸಗಿ ಆಸ್ಪತ್ರೆಗಳನ್ನು ನಡೆಸುತ್ತಿರುವ ವೈದ್ಯರು ಮತ್ತು ಆಡಳಿತ ಮಂಡಳಿಯವರು ಸಂಕಲ್ಪ ಮಾಡಬೇಕು ಎಂದರು.

Tap to resize

Latest Videos

ಸಚಿವರಾದ ಗೋವಿಂದ ಕಾರಜೋಳ, ಬಿ.ಸಿ.ನಾಗೇಶ್‌, ಶಾಸಕರಾದ ಡಾ

ರಾಜೇಶ್‌ಗೌಡ, ಶಾಸಕ ಜ್ಯೋತಿ ಗಣೇಶ್‌, ಡಾ. ಭುಜಂಗಶೆಟ್ಟಿ, ಡಾ. ನರೇಶ್‌ ಶೆಟ್ಟಿ, ಡಾ. ರೋಹಿತ್‌ ಶೆಟ್ಟಿ, ನಿವೃತ್ತ ಐಎಎಸ್‌ ಅಧಿಕಾರಿ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ್‌ ಉಪಸ್ಥಿತರಿದ್ದರು.

‘30 ಜಿಲ್ಲೆಯಲ್ಲಿ ಉಚಿತ ನೇತ್ರ ಚಿಕಿತ್ಸಾ ಕೇಂದ್ರ’

ನಾರಾಯಣ ನೇತ್ರಾಲಯ ಡಾ .ಭುಜಂಗಶೆಟ್ಟಿಮಾತನಾಡಿ, ಮುಂದಿನ ದಿನಗಳಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಉಚಿತ ನೇತ್ರ ಚಿಕಿತ್ಸಾ ಕೇಂದ್ರ ಸ್ಥಾಪಿಸುವ ಗುರಿ ಹೊಂದಲಾಗಿದೆ. ಕರ್ನಾಟಕವನ್ನು ನೇತ್ರ ದೋಷ ಮುಕ್ತವನ್ನಾಗಿ ಮಾಡಬೇಕು ಎಂಬ ಹಂಬಲ ತಮ್ಮದಾಗಿದ್ದು, ಈ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲಿ ಉಚಿತ ಚಿಕಿತ್ಸಾ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ. ಇದು ಆಸ್ಪತ್ರೆಯಲ್ಲ, ಕಣ್ಣಿನ ದೇವಾಲಯ ಎಂದು ಬಣ್ಣಿಸಿದರು.

ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಹೃದಯದಷ್ಟೇ ಕಣ್ಣು ಸಹ ಮುಖ್ಯ. ಇಂತಹ ಕಣ್ಣಿನ ಆರೋಗ್ಯ ಸೇವೆ ಮಾಡುತ್ತಿರುವ ಡಾ. ಭುಜಂಗ ಶೆಟ್ಟಿಯವರ ಕಾರ್ಯ ಶ್ಲಾಘನೀಯ. ಕಣ್ಣಿನ ಆರೋಗ್ಯ ಸೇವೆಯಲ್ಲಿ ಬಹುದೊಡ್ಡ ಸೇವೆಯನ್ನು ಡಾ. ಎಂ.ಸಿ.ಮೋದಿ ಅವರು ಮಾಡಿದ್ದಾರೆ. ಅವರ ಹಾದಿಯಲ್ಲೇ ಡಾ . ಭುಜಂಗಶೆಟ್ಟಿಅವರು ಸಾಗುತ್ತಿದ್ದು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಡವರಿಗೆ ಉಚಿತ ನೇತ್ರ ಚಿಕಿತ್ಸಾ ಕೇಂದ್ರ ತೆರೆದಿದ್ದಾರೆ. ಇದು ತುಮಕೂರು ಜಿಲ್ಲೆಯ ಬಡ ಜನರಿಗೆ ವರದಾನವಾಗಿದೆ ಎಂದರು.

click me!