
ಬೆಂಗಳೂರು (ಫೆ.20): ಪ್ರತಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ವೈದ್ಯಕೀಯ ಸೇವೆ ಇರುವ ಹಾಗೇ ಕಾನೂನು ಪ್ರಾಥಮಿಕ ಸೇವೆ ಸೀಗಬೇಕೆನ್ನುವ ಉದ್ದೇಶದಿಂದ 'ಉಚಿತ ಕಾನೂನು ಸೇವೆಗಳ ಕೇಂದ್ರ'ವನ್ನು ತೆರೆಯಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಂ.ಎಲ್ ರಘುನಾಥ್ ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸೌತ್ ವೆಸ್ಟರ್ನ್ ರೈಲ್ವೆ ಸಹಯೋಗದಲ್ಲಿ ಫೆ.19ರಂದು ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ 'ಉಚಿತ ಕಾನೂನು ಸೇವೆಗಳ ಕೇಂದ್ರ'ವನ್ನು ಉದ್ಘಾಟಿಸಿ ಮಾತನಾಡಿದರು.
ನಾಸಾ ಯೋಜನೆಯಡಿ ಯಲ್ಲಿ ಕಾನೂನು ನೆರವು ಕೇಂದ್ರವನ್ನು ಸ್ಥಾಪಿಸಲಾಗಿದ್ದು. ಈ ಕೇಂದ್ರದಲ್ಲಿ ಉಚಿತ ಕಾನೂನು ಸಲಹೆ ಮತ್ತು ಸೇವೆ ಹಾಗೂ ಕಾನೂನು ಅರಿವು ನೆರವು, ಜನತಾ ನ್ಯಾಯಾಲಯದ ಮೂಲಕ ಇತ್ಯರ್ಥಕ್ಕೆ ಸಂಬಂಧಪಟ್ಟ ಪ್ರಕರಣಗಳ ಮಾಹಿತಿಯನ್ನು ಪಡೆಯಬಹುದು ಎಂದು ತಿಳಿಸಿದರು.
ಇದನ್ನೂ ಓದಿ: ಒಂದೇ ದಿನ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 35.84 ಲಕ್ಷ ಪ್ರಕರಣಗಳ ಇತ್ಯರ್ಥ: ನ್ಯಾ.ವಿ.ಕಾಮೇಶ್ವರ್ ರಾವ್
ಈಗಾಗಲೇ ನ್ಯಾಯಾಲಯ ಮತ್ತು ಸರ್ಕಾರಿ ಕಚೇರಿಗಳಲ್ಲಿ ಕಾನೂನು ಸೇವಾ ಕೇಂದ್ರಗಳನ್ನು ತೆರೆಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳವಾದ ರೈಲ್ವೆ ನಿಲ್ದಾಣಗಳಲ್ಲಿ 'ಉಚಿತ ಕಾನೂನು ಸೇವೆಗಳ ಕೇಂದ್ರ' ಸ್ಥಾಪಿಸಲಾಗಿದೆ. ಪ್ರತಿ ಬುಧವಾರದಂದು ಇಲ್ಲಿ ಕಾನೂನು ಸೇವೆ ಲಭ್ಯವಿದ್ದು, ಸಾರ್ವಜನಿಕರು ಭೇಟಿ ನೀಡಿ ಸಲಹೆ ಪಡೆಯಬಹುದು ಹಾಗೂ ಸಹಾಯವಾಣಿ 15100 ಮೂಲಕವೂ ಕಾನೂನು ಸಲಹೆ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದ ಪ್ರಧಾನ ನಗರ ಸಿವಿಲ್ ಮತ್ತು ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮುರಳೀಧರ ಪೈ ಬಿ, ಬೆಂಗಳೂರು ರೈಲ್ವೆ ಕ್ಲೈಮ್ಸ್ ಟ್ರಿಬ್ಯೂನಲ್, ನ್ಯಾಯಾಂಗ ಸದಸ್ಯೆ ಶ್ರೀಮತಿ ಚಾರ್ಲ್ಸ್ ಐವಿ ಡಿ'ಕ್ರೂಜ್, ಬೆಂಗಳೂರು ರೈಲ್ವೆ ಕ್ಲೈಮ್ಸ್ ಟ್ರಿಬ್ಯೂನಲ್ ತಾಂತ್ರಿಕ ಸದಸ್ಯ ಹಾಗೂ ಪ್ರೆಸೆಂಟಿಂಗ್ ಆಫೀಸರ್ (IRTS) ಡಾ.ಯತೀಶ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.