ಒಂದೇ ಸ್ಥಳದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಹೆಬ್ಬಾವುಗಳು ಪತ್ತೆಯಾಗಿದ್ದು, ಸ್ಥಳೀಯರು ಗಾಬರಿಯಾಗಿದ್ದಾರೆ.
ಉಡುಪಿ, ಡಿ.08): ನಗರದ ಹೃದಯಭಾಗದಲ್ಲಿ ಮಂಗಳವಾರ ಒಂದೇ ಕಡೆಯಲ್ಲಿ 4 ಭಾರೀ ಗಾತ್ರದ ಹೆಬ್ಬಾವುಗಳು ಪತ್ತೆಯಾಗಿವೆ. ಅಲ್ಲದೇ ಈ ಹಾವು ಹಿಡಿಯಲೆತ್ನಿದ ಒಬ್ಬರಿಗೆ ಕಚ್ಚಿರುವ ಘಟನೆ ನಡೆದಿದೆ.
ನಗರದ ಪೂರ್ಣಪ್ರಜ್ಞಾ ಕಾಲೇಜಿನ ಬಳಿಯ ಖಾಲಿ ನಿವೇಶನದಲ್ಲಿ ಮಂಗಳವಾರ ಸಂಜೆ ಹಲ್ಲು ಕತ್ತರಿಸುವಾಗ ಒಂದು ಹೆಬ್ಬಾವು ಪತ್ತೆಯಾಗಿತ್ತು. ಬಳಿಕ ಅಲ್ಲಿಯೇ ಹುಲ್ಲು ಪೊದೆಯಲ್ಲಿ ಇನ್ನೊಂದು ಹೆಬ್ಬಾವು ಕಂಡುಬಂದಿದೆ.
undefined
ವಿಷಯ ತಿಳಿದು ಸ್ಥಳಿಯ ಯುವಕರು ಸೇರಿ ಅವುಗಳನ್ನು ಹಿಡಿದು ಚೀಲದೊಳಗೆ ಹಾಕಿದರು. ಹುಲ್ಲಿನಲ್ಲಿ ಹುಡುಕಿದಾಗ ಇನ್ನೂ ಎರಡು ಮಧ್ಯಮ ಗಾತ್ರ ಹೆಬ್ಬಾವುಗಳೂ ಪತ್ತೆಯಾಗಿದ್ದು ಅವುಗಳನ್ನು ಸಹ ಹಿಡಿದು ಚೀಲಕ್ಕೆ ತುಂಬಿದರು.
ಮನೆಯಂಗಳದಲ್ಲಿತ್ತು 13 ಹೆಬ್ಬಾವು ಮರಿಗಳು: ಇಲ್ಲಿವೆ ಫೋಟೋಸ್
ಇಲ್ಲಿ ಇನ್ನೂ ಹಾವುಗಳಿರುವ ಸಾದ್ಯತೆಗಳಿದ್ದರೂ, ಅಷ್ಟರಲ್ಲಿ ಮಳೆ ಸುರಿಯಲಾರಂಭಿಸಿ, ಹಾವುಗಳನ್ನು ಹುಡುಕುವ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು.
ಈ ಮಧ್ಯೆ ಒಂದು ಹೆಬ್ಬಾವು ಗಣೇಶ ಆಚಾರ್ಯ ಎಂಬವರಿಗೆ ಕಚ್ಚಿದ್ದು, ಹಾವಿನ ಒಂದು ಹಲ್ಲು ಮುರಿದು ಅವರ ಕೈಯಲ್ಲಿಯೇ ಉಳಿದುಬಿಟ್ಟಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹಾವಿನ ಹಲ್ಲು ತೆಗೆದು ಚಿಕಿತ್ಸೆ ಕೊಡಿಸಲಾಗಿದೆ.
ಒಂದು ಹಾವು 8 ಅಡಿ, 2 ಹಾವು ತಲಾ 5 ಅಡಿ ಮತ್ತು ಇನ್ನೊಂದಿ ಹಾವು 4 ಅಡಿ ಉದ್ದವಿದ್ದವು. ಸ್ಥಳೀಯ ನ್ಯಾಯವಾದಿ ಲಕ್ಷ್ಮಣ ಶೆಣೈ, ಸುಧೀರ್ ನಾಯಕ್, ರಾಜ್ ಕುಮಾರ್, ಅಶ್ವತ್ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಉರಗತಜ್ಞರ ಅಭಿಪ್ರಾಯ
ಡಿಸೆಂಬರ್ ನಿಂದ ಫೆಬ್ರುವರಿ ತನಕ ಶೇ 70ರಷ್ಟು ಪ್ರಬೇಧದ ಹಾವುಗಳ ಸಂತಾನೋತ್ಪತ್ತಿಗಾಗಿ ಲೈಂಗಿಕ ಕ್ರಿಯೆಯ ಋತು. ಅವುಗಳಲ್ಲಿ ಹೆಬ್ಬಾವು ಕೂಡ ಒಂದು, ಒಂದು ಹೆಣ್ಣು ಹೆಬ್ಬಾವಿನೊಂದಿಗೆ 5 - 6 ಗಂಡು ಹೆಬ್ಬಾವುಗಳು ಸರದಿಯಲ್ಲಿ ಲೈಂಗಿಕ ಕ್ರಿಯೆ ನಡೆಸುತ್ತವೆ. ಈ ಗಂಡು ಹಾವುಗಳ ಮಧ್ಯೆ ಸ್ಪರ್ಧೆ - ಜಗಳ ಇರುವುದಿಲ್ಲ, ತಾಳ್ಮೆಯಿಂದ ಕಾದು ತಮ್ಮ ಆಸೆಯನ್ನು ಪೂರೈಸಿಕೊಳ್ಳುತ್ತವೆ. ಹೆಣ್ಣು ಹಾವು ಗಾತ್ರದಲ್ಲಿ ದೊಡ್ಡದಿರುತ್ತವೆ, ಗಂಡು ಹಾವುಗಳು ಚಿಕ್ಕದಿರುತ್ತವೆ. ಹೆಬ್ಬಾವುಗಳು ವಿಷಕಾರಿಯಲ್ಲ ಎಂದು ಉರಗತಜ್ಞ ಗುರುರಾಜ್ ಸನಿಲ್ ತಿಳಿಸಿದ್ದಾರೆ.