ಮೃತದೇಹಗಳನ್ನು ಆಲೂರು ತಾಲೂಕು ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆಲೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ
ಹಾಸನ(ಜು.21): ಇನ್ನೋವಾ ಕಾರಿಗೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿಗೆ ಬಳಿ ಇಂದು(ಶುಕ್ರವಾರ) ಸಂಜೆ ನಡೆದಿದೆ.
undefined
ಇನ್ನೋವಾ ಕಾರಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ. ಮೃತರನ್ನು ಕುಪ್ಪಳ್ಳಿಯ ಚೇತನ್(23), ತಟ್ಟೆಕೆರೆಯ ಪುರುಷೋತ್ತಮ್(28), ಗುಡ್ಡೇನ ಹಳ್ಳಿಯ ಅಶೋಕ್(35) ಹಾಗೂ ಚಿಗಳೂರು ಪಾಳ್ಯದ ದಿನೇಶ್(30) ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಆಲೂರು ತಾಲೂಕು ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆಲೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಮೃತರಲ್ಲಿ ಅಶೋಕ ವರ್ಕ್ ಶಾಪ್ ನಡೆಸುತ್ತಿದ್ದ. ಎಂಟು ವರ್ಷದ ಹಿಂದೆ ಈತನ ಸಹೋದರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನು ದಿನೇಶ್ ಬೆಂಗಳೂರಿನಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
ಮಕ್ಕಳ ಓದಿಗೆ ದುಡ್ಡಿಲ್ಲದೇ ಹೆತ್ತವಳ ಪರದಾಟ: ಪರಿಹಾರದ ಹಣಕ್ಕಾಗಿ ಬಸ್‌ಗೆ ಸಿಕ್ಕಿ ಜೀವ ಬಿಟ್ಟ ತಾಯಿ..!!
ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಕೆಎ-01-ಎಂಎಫ್-3445 ನಂಬರಿನ ಇನ್ನೋವಾ ಕಾರು ಸಕಲೇಶಪುರ ಕಡೆಯಿಂದ ಹಾಸನ ಕಡೆಗೆ ಬರುತ್ತಿತ್ತು. ಅದೇ ವೇಳೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಗೆ ಸೇರಿದ ಕೆಎ-11-ಬಿ-1751 ನಂಬರಿನ ಟಿಪ್ಪರ್ ಲಾರಿ ಎದುರು ಕಡೆಯಿಂದ ಬರುತ್ತಿತು. ಈ ವೇಳೆ ಇನ್ನೋವಾ ಚಾಲಕ ಓವರ್‌ಟೇಕ್ ಮಾಡಲು ಹೋಗಿ ಟಿಪ್ಪರ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಡಿಕ್ಕಿ ರಭಸಕ್ಕೆ ಇನ್ನೋವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಗುಜರಿ ಸೇರುವ ವಸ್ತುವಿನಂತಾಗಿದೆ. ಹೀಗಾಗಿ ಕಾರಿನೊಳಗೆ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹೊರ ತೆಗೆಯಲು ಸ್ಥಳೀಯರು ಪರದಾಡಬೇಕಾಯಿತು. ಕೆಲವರು ಹಾರೆ ಮೊದಲಾದ ವಸ್ತುಗಳನ್ನು ತಂದು ಡೋರ್ ಹಾಗೂ ಕಿಟಿಕಿ ಒಡೆದು ಮೃತದೇಹಗಳನ್ನು ಹೊರ ತೆಗೆದರು. ಭೀಕರ ಅಪಘಾತದಿಂದಾಗಿ ಕೆಲಹೊತ್ತು ಸಂಚಾರಕ್ಕೆ ಅಡೆ ತಡೆ ಉಂಟಾಗಿತ್ತು.
ಕಾಮಗಾರಿ ವಿಳಂಬವೇ ಕಾರಣ:
ರಾಷ್ಟ್ರೀಯ ಹೆದ್ದಾರಿ 75 ರ ಅಗಲೀಕರಣ ಕಾಮಗಾರಿ ಕಳೆದ ಆರೇಳು ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿರುವುದೇ ಈ ರೀತಿಯ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಕಾಲಕ್ಕೆ ಕಾಮಗಾರಿ ಮುಗಿಯದ ಕಾರಣ ರಸ್ತೆಯ ಅದಲು ಬದಲಿನಿಂದಾಗಿ ಆಗ್ಗಿಂದಾಗ್ಗೆ ಇಂಥ ಸಾವು ನೋವು ಮರುಕಳಿಸುತ್ತಲೇ ಇವೆ. ತಮ್ಮದಲ್ಲದ ತಪ್ಪಿಗೆ ಅಮಾಯಕ ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಅದರೂ ಎಚ್ಚೆತ್ತುಕೊಳ್ಳದ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳದಲ್ಲಿ ಯಾವುದೇ ಸೂಚನಾ ಫಲಕ ಅಳವಡಿಸದೇ ನಿರ್ಲಕ್ಷ್ಯ ತೋರಿರುವುದೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಸಿಟ್ಟು ಹೊರ ಹಾಕಿದರು. ಬಾಳಿ ಬದುಕಬೇಕಾದ ನಾಲ್ವರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ ಯಾರೋ ತಪ್ಪಿಗೆ ಇನ್ನೆಷ್ಟು ಮಂದಿ ಪ್ರಾಣ ಕಳೆದುಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.