
ವರದಿ: ಷಡಕ್ಷರಿ
ವಿಜಯಪುರ (ಫೆ.14) : ನಗರದ ಗಾಂಧಿಚೌಕ ಪೊಲೀಸ್ ಠಾಣಾ ವ್ಯಾಪ್ತಿಯ ಮದೀನಾ ನಗರದಲ್ಲಿ ಫೆ.11 ರ ರಾತ್ರಿ ನಡೆದ ಭೀಮಾತೀರದ ಕುಖ್ಯಾತ ಹಂತಕ ಭಾಗಪ್ಪ ಹರಿಜನ ಕೊಲೆ ಪ್ರಕರಣ ಸಂಬಂಧ ವಿಜಯಪುರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಮೃತ ಭಾಗಪ್ಪ ಹರಿಜನ ಮೇಲೆ 10 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಅಫಜಲಪೂರ ಪೊಲೀಸ್ ಠಾಣೆಯಲ್ಲಿ 01 ಕೊಲೆ ಪ್ರಕರಣ ಸೇರಿದಂತೆ ಒಟ್ಟು 06 ಕೊಲೆ ಪ್ರಕರಣಗಳು ದಾಖಲಾಗಿದ್ದವು. ಭಾಗಪ್ಪ ಮದಿನಾ ನಗರದ ತನ್ನ ಬಾಡಿಗೆ ಮನೆಯಲ್ಲಿ ಊಟ ಮಾಡಿ ವಾಯುವಿಹಾರಕ್ಕೆ ತೆರಳಿದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಗುಂಡು ಹಾರಿಸಿ ಭಾಗಪ್ಪನ ಹತ್ಯೆಗೈದಿದ್ದರು.
ವಿಜಯಪುರ ಭೀಮಾತೀರದ ಹಂತಕ ಬಾಗಪ್ಪ ಹರಿಜನ ಹತ್ಯೆ: ವಕೀಲ ರವಿ ಸಹೋದರನ ಕೈವಾಡ?
ಭಾಗಪ್ಪ ಕೊಲೆ ಪ್ರಕರಣ ಸಂಬಂಧ ಇಂಡಿ ತಾಲ್ಲೂಕಿನ ಅಗರಖೇಡದ ಪಿಂಟು ಮೇಲಿನಕೇರಿ (26), ಸುದೀಪ ಕಾಂಬಳೆ (20), ಹೊರ್ತಿ ಗ್ರಾಮದ ರಾಹುಲ ತಳಕೇರಿ (20), ಬೈಲಹೊಂಗಲದ ಗದಿಗೆಪ್ಪ ಬೆನಕೊಪ್ಪ (27) ಎಂಬ ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ತನಿಖೆ ಮುಂದುವರೆಸಿದ್ದಾರೆ.
ಇತ್ತೀಚೆಗೆ ರವಿ ಮೇಲಿನಕೇರಿ ಎಂಬುವವರಿಗೆ ತುಳಸಿರಾಮ ಹರಿಜನ ಹಾಗೂ ಆತನ ಸಹಚರರಾದ ಅಲೇಕ್ಸ್ ಗೊಲ್ಲರ, ಶಣ್ಮುಖ ನಡುವಿನಕೇರಿ, ಪ್ರಕಾಶ ಗೊಲ್ಲರ, ಮುರುಗೇಶ ಉಳ್ಳಾಗಡ್ಡಿ, ರಾಜೇಸಾಬ ರುದ್ರವಾಡಿ ಇವರು ಸೇರಿಕೊಂಡು ಕೊಲೆ ಮಾಡಿ ಬಂಧನದಲಿದ್ದರು. ಭಾಗಪ್ಪ ಹರಿಜನ ಹಾಗೂ ರವಿ ಮೇಲಿನಕೇರಿ ಇವರು ಸಂಬಂಧಿಕರಾಗಿದ್ದರು. ಇವರಿಬ್ಬರ ನಡುವೆ ಕೆಲವು ವರ್ಷಗಳಿಂದ ಹಣಕಾಸಿನ ವ್ಯವಹಾರವಿದ್ದು, ಇಬ್ಬರೂ ಸೇರಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು.
ರವಿ ಮೇಲಿನಕೇರಿ ಮೃತಪಟ್ಟ ನಂತರ ಭಾಗಪ್ಪ, ರವಿ ಮೇಲಿನಕೇರಿ ತಮ್ಮ ಪ್ರಕಾಶ ಮೇಲಿನಕೇರಿಗೆ ನಿಮ್ಮ ಅಣ್ಣ ನನ್ನ ಹೆಸರು ಹೇಳಿ ಮಾಡಿರುವ ಹಣ, ಆಸ್ತಿ ಮತ್ತು ವಾಹನ ನನಗೆ ಬಿಟ್ಟು ಕೊಡಬೇಕು. ಇಲ್ಲದಿದ್ದರೆ 10 ಕೋಟಿ ಹಣ ಕೊಡಬೇಕು. ಅದೂ ಆಗದಿದ್ದರೆ ನಿಮ್ಮ ಅಣ್ಣನ ಹೆಂಡತಿಯನ್ನು ನನ್ನ ಹತ್ತಿರ ಕಳುಹಿಸು ಎಂದು ಅಣ್ಣನ ಹೆಂಡತಿಯ ಕುರಿತಾಗಿ ಅವಾಚ್ಯ ಪದ ಬಳಕೆ ಮಾಡಿ ಮಾತನಾಡಿ ಬೆದರಿಕೆ ಹಾಕುತ್ತಿದ್ದನು. ಅಲ್ಲದೇ ನಿಮ್ಮ ಅಣ್ಣನಿಗೆ ಹೇಗೆ ಹೊಡೆದಂತೆ ನಿನಗೂ ಹೊಡೆಯುತ್ತೇನೆ ಎಂದು ಒತ್ತಡ,ಬೆದರಿಕೆ ಹಾಕಿದ್ದನು.
ಬಾಗಪ್ಪ ಹರಿಜನ್ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್! ಭೀಮಾತೀರಕ್ಕೆ ಎಂಟ್ರಿ ಕೊಡ್ತಾ ಹೊಸ ಗ್ಯಾಂಗ್?
ಈ ಹಿನ್ನೆಲೆಯಲ್ಲಿ ಭಾಗಪ್ಪನನ್ನು ಮುಗಿಸಿ ಬಿಡಬೇಕು ಎಂದು ಪ್ರಕಾಶ ಮೇಲಿನಕೇರಿ ತನ್ನ ಸಂಬಂಧಿಕ ಹಾಗೂ ಸ್ನೇಹಿತರೊಂದಿಗೆ ಸಂಚು ರೂಪಿಸಿ ಫೆ.11 ರ ರಾತ್ರಿ ಭಾಗಪ್ಪ ಹರಿಜನ ಮದಿನಾನಗರದ ತನ್ನ ಮನೆಯ ಹೊರಗಡೆ ವಾಕಿಂಗ್ ಮಾಡುವಾಗ ಆರೋಪಿಗಳು. ಆಟೋ ಹಾಗೂ ಬೈಕ್‌ನಲ್ಲಿ ಬಂದು ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಕೊಡಲಿ, ಮಚ್ಚು ಹಾಗೂ ಜಂಬೆಯಿಂದ ಹೊಡೆದು ಕೊಲೆ ಮಾಡಿರುತ್ತಾರೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿ ದ್ರು. ಈ ವೇಳೆ ಅಡಿಷನಲ್ ಎಸ್ಪಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು.