ಒಂದು ಡಜನ್‌ ಜನಕ್ಕೆ ವಂಚಿಸಿದನಾ ಮಾಜಿ ಖಾಕಿ: ಹೌಹಾರಿದ ಪೊಲೀಸ್‌ ಇಲಾಖೆ

By Kannadaprabha NewsFirst Published Sep 9, 2021, 1:08 PM IST
Highlights

*  ಹಳೆಯ ಚಾಳಿ ಮುಂದುವರಿಸಿದ ಆರೋಪಿ 
*  ವಂಚಕನ ಪತ್ತೆಗೆ ಜಾಲ ಬೀಸಿದ ಪೊಲೀಸರು
*  ಖಾಕಿಯಿಂದಲೇ ಖಾಕಿಗೆ ಖೆಡ್ಡಾ
 

ಜಗದೀಶ ವಿರಕ್ತಮಠ 

ಬೆಳಗಾವಿ(ಸೆ.09): ಹಿರಿಯ ಪೊಲೀಸ್‌ ಅಧಿಕಾರಿಗಳ ಹೆಸರಲ್ಲಿ ನಕಲಿ ಆದೇಶ ಪತ್ರ ನೀಡಿ ವಂಚನೆ ಮಾಡುತ್ತಿದ್ದ ಗ್ಯಾಂಗ್‌ ಕೇವಲ ಒಂದೇ ಜಿಲ್ಲೆಗೆ ಸೀಮಿತವಾಗದೆ ರಾಜ್ಯವ್ಯಾಪಿ ವ್ಯವಸ್ಥಿತ ಕಾರ್ಯ ಮಾಡುತ್ತಿದೆ. ಈಗಾಗಲೇ ಈ ಗ್ಯಾಂಗ್‌ ಬರೋಬ್ಬರಿ ಒಂದು ಡಜನ್‌ ಜನರಿಗೆ ಮಾಡಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಇಡೀ ಪೊಲೀಸ್‌ ಇಲಾಖೆಯ ಹೌಹಾರುವಂತಾಗಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿಯ ಶ್ರೀ ಬಸವೇಶ್ವರ ನಗರ ನಿವಾಸಿ ಸಂತೋಷ ತಿಪ್ಪಣ್ಣ ಗುದಗಿ ಈ ಗ್ಯಾಂಗ್‌ನಲ್ಲಿದ್ದು, ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ವಿಶೇಷ ಕೋಟಾದಡಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ನಿರುದ್ಯೋಗಿಗಳಿಂದ ಲಕ್ಷಾಂತರ ಹಣ ವಸೂಲಿ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ನಂತರ ಹಣ ನೀಡಿದವರಿಗೆ ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಜಿಲ್ಲಾ ಪೊಲೀಸ್‌ ವರುಷ್ಠಾಧಿಕಾರಿಗಳ ಹೆಸರಿನಲ್ಲಿ ನಕಲಿ ಆದೇಶ ಪತ್ರವನ್ನು ಸಿದ್ದಪಡಿಸಿ ಆಕಾಂಕ್ಷಿಗಳಿಗೆ ನೀಡಿ ಸುಲಭವಾಗಿ ವಂಚಿಸುತ್ತಿದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ. ಈ ಬಗ್ಗೆ ನಕಲಿ ಆದೇಶ ಪ್ರತಿ ಕನ್ನಡಪ್ರಭಕ್ಕೆ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ವಂಚಕರ ಪತ್ತೆಗೆ ಬಲೆ ಬೀಸಿದ ಕಾರವಾರ ಜಿಲ್ಲೆಯ ಮುಂಡಗೋಡ ಠಾಣೆಯ ಪೊಲೀಸರು, ಈ ವಂಚಕನ ಬಗ್ಗೆ ಮಾಹಿತಿ ಕಲೆ ಹಾಕುವಲ್ಲಿ ಸಫಲರಾಗಿದ್ದಾರೆ.

ವಂಚಕ ಸಂತೋಷ ಗುದಗಿಯನ್ನು ಬಂಧಿಸಲು ಜಾಲ ಬೀಸಿರುವ ಮುಂಡಗೊಡ ಠಾಣೆ ಪೊಲೀಸರು ಎಲ್ಲೆಡೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ವೇಳೆ ಧಾರವಾಡ, ಬೆಳಗಾವಿ ಮತ್ತು ಹಾವೇರಿ ಜಿಲ್ಲೆಯ ಒಟ್ಟು 12 ಅಭ್ಯರ್ಥಿಗಳಿಗೆ ನೇರ ನೇಮಕಾತಿ ಮೂಲಕ ನೌಕರಿ ಕೊಡಿಸುವುದಾಗಿ ಸುಳ್ಳು ಹೇಳಿದ್ದಾನೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಈ ಪೈಕಿ ಒಬ್ಬ ಅಭ್ಯರ್ಥಿಯಿಂದ .2 ಲಕ್ಷ ಹಣವನ್ನು ಮುಂಗಡವಾಗಿ ಬ್ಯಾಂಕ್‌ ಅಕೌಂಟ್‌ ಮೂಲಕ ಪಡೆದುಕೊಂಡಿದ್ದಾನೆ. ಅಲ್ಲದೆ ಆರೋಪಿಯು ನಕಲಿ ನೇಮಕಾತಿ ಆದೇಶವನ್ನು ತಯಾರಿಸಿ ಅಭ್ಯರ್ಥಿಗಳಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

ಡ್ರಗ್‌ ಪೆಡ್ಲರ್‌ ಆಸ್ತಿ ಜಪ್ತಿ: ರಾಜ್ಯದಲ್ಲಿ ಇದೇ ಮೊದಲು!

ಖಾಕಿಯಿಂದಲೇ ಖಾಕಿಗೆ ಖೆಡ್ಡಾ:

ವಂಚಕ, ಆರೋಪಿ ಸಂತೋಷ ಗುದಗಿ ಈ ಮೊದಲು ಕಾಗಿನೆಲೆ ಪೊಲೀಸ್‌ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಆ ಸಂದರ್ಭದಲ್ಲಿಯೂ ಜನರಿಗೆ ಮೋಸ, ವಂಚನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಹಿರಿಯ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ, 2019 ರಲ್ಲಿ ಆತನನ್ನು ಇಲಾಖೆಯಿಂದಲೇ ವಜಾಗೊಳಿಸಿದ್ದಾರೆ. ಇಷ್ಟಾಗಿದ್ದರೂ ಬುದ್ಧಿ ಕಲಿಯದ ಆರೋಪಿ ಸಂತೋಷ, ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದ್ದಾನೆ. ತಾನು ಬೆಂಗಳೂರು ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಸುಳ್ಳು ಹೇಳಿ ಜನರನ್ನು ಮರಳು ಮಾಡುತ್ತಾ, ಈ ಕೃತ್ಯ ಎಸಗುತ್ತಿರುವುದು ಬೆಳಕಿಗೆ ಬಂದಿದೆ. ಇಂತಹ ಸತ್ಯಾಂಶ ಹೊರಗೆ ಬರಬೇಕಾದರೆ, ಆರೋಪಿಯನ್ನು ಹಿಡಿದು ವಿಚಾರಣೆ ಮಾಡಬೇಕಿದೆ. ಇನ್ನಷ್ಟುಸತ್ಯ ಹೊರ ಬೀಳುವುದರಲ್ಲಿ ಅನುಮಾನವಿಲ್ಲ.

ಇದೀಗ ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೆಸರಿನಲ್ಲಿ ನಕಲಿ ಆದೇಶ ಪತ್ರವನ್ನು ಸಿದ್ದಪಡಿಸಿ ವಂಚನೆ ಮಾಡಿರುವ ಬಗ್ಗೆ ಮುಂಡಗೋಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಈತ ಗೋಕಾಕ, ಧಾರವಾಡ, ಶಿಗ್ಗಾಂವ, ಹಾವೇರಿ, ಶಿವಮೊಗ್ಗ, ವಿಜಯಪುರ, ಮುಂಡಗೋಡ ಹಾಗೂ ಬಾಗಲಕೋಟೆ ಸೇರಿದಂತೆ ಇನ್ನಿತರೆ ಜಿಲ್ಲೆಗಳಲ್ಲಿ ವಂಚನೆ ಮಾಡಿರುವ ಆರೋಪ ಕೂಡ ಕೇಳಿಬಂದಿದೆ. ಈ ಕುರಿತು ವಂಚನೆಗೊಳಗಾದ ಮುಂಡಗೋಡದ ಗುರುರಾಯ ದತ್ತಾತ್ರಯ ರಾಯ್ಕರ್‌ ಎಂಬಾತ ದೂರು ಕೂಡ ದಾಖಲಿಸಿದ್ದಾನೆ. ಈ ದೂರಿನ್ವಯ ಪ್ರಕರಣ ದಾಖಲಿಸಿಕೊಂಡು ವಂಚಕನ ಪತ್ತೆಗೆ ಜಾಲ ಬೀಸಲಾಗಿದೆ.

ಪೊಲೀಸ್‌ ಇಲಾಖೆಯಲ್ಲಿನ ಹುದ್ದೆಗಳಿಗೆ ನೇಮಕಾತಿಗಾಗಿ ಹಿರಿಯ ಅಧಿಕಾರಿಗಳ ಹೆಸರು ಹೇಳಿಕೊಂಡು ಹಣ ಕೇಳಿದಲ್ಲಿ ಯಾವುದೇ ಕಾರಣಕ್ಕೂ ಹಣ ನೀಡದೆ ನಮ್ಮ ಗಮನಕ್ಕೆ ತಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ವಂಚನೆ ಮಾಡುತ್ತಿರುವ ಬಗ್ಗೆ ಈಗಾಗಲೇ ಮುಂಡಗೋಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.  
 

click me!