'ಮೋದಿಗೆ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಬಗ್ಗೆ ಮಾತನಾಡುವುದೇ ಕಷ್ಟವಾಗಿದೆ'

Kannadaprabha News   | Asianet News
Published : Feb 17, 2020, 07:23 AM IST
'ಮೋದಿಗೆ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಬಗ್ಗೆ ಮಾತನಾಡುವುದೇ ಕಷ್ಟವಾಗಿದೆ'

ಸಾರಾಂಶ

ಬರುವ ದಿನಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯ| ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ನಡೆದಿದೆ| ಜೆಡಿಎಸ್‌ ತಳಮಟ್ಟದಲ್ಲಿ ಗಟ್ಟಿಯಾಗಿದೆ| ಚುನಾವಣೆ ಗೆಲ್ಲಲು ಅಗತ್ಯವಿರುವ ಅಂಶಗಳನ್ನು ತುಂಬುವ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ಶಿಬಿರಗಳನ್ನು ನಡೆಸಲಾಗುವುದು|

ಧಾರವಾಡ(ಫೆ.17): ಇತ್ತೀಚಿನ ಚುನಾವಣಾ ಫಲಿತಾಂಶಗಳನ್ನು ಗಮನಿಸಿದಲ್ಲಿ, ಅಭಿವೃದ್ಧಿಯನ್ನೇ ಮಂತ್ರವಾಗಿಸಿಕೊಂಡ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿದೆ ಎಂದು ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ನಡೆದಿದೆ. ಜೆಡಿಎಸ್‌ ತಳಮಟ್ಟದಲ್ಲಿ ಗಟ್ಟಿಯಾಗಿದೆ. ಚುನಾವಣೆ ಗೆಲ್ಲಲು ಅಗತ್ಯವಿರುವ ಅಂಶಗಳನ್ನು ತುಂಬುವ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ಶಿಬಿರಗಳನ್ನು ನಡೆಸಲಾಗುವುದು ಎಂದರು.

ಹಿಂದಿನ ಅವಧಿಗಿಂತಲೂ ಬಿಜೆಪಿಗೆ ಹೆಚ್ಚಿನ ಸ್ಥಾನವನ್ನು 2019ರಲ್ಲಿ ಮತದಾರರು ನೀಡಿದ್ದರು. ನೆರೆ ಪರಿಹಾರದಲ್ಲಿ ಕೇಂದ್ರ ತಾರತಮ್ಯ ಎಸಗಿದೆ. ಜನರ ಆಶೋತ್ತರಗಳಿಗೆ ಸ್ಪಂದಿಸುವ ಬದಲು ಕಾಶ್ಮೀರ, ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಇದು ತಪ್ಪು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೃಷಿ, ಅಟೊಮೊಬೈಲ್ ಸಣ್ಣ ಕೈಗಾರಿಕೆ, ಐಟಿ ಸೇರಿದಂತೆ ಎಲ್ಲ ಕ್ಷೇತ್ರಗಳೂ ಬಿದ್ದಿವೆ. ಪಕ್ಷದ ನೀತಿಯಿಂದಾಗಿ ಕೈಗಾರಿಕೆ ಹಾಗೂ ಸೇವಾ ಕ್ಷೇತ್ರಗಳು ನೆಲಕಚ್ಚಿವೆ. ಇಸ್ಫೋಸಿಸ್‌ನಲ್ಲಿ ಹತ್ತು ಸಾವಿರ ಉದ್ಯೋಗ ಕಡಿತವಾದರೆ, ಬಿಎಸ್‌ಎನ್‌ಎಲ್‌ ಶೇ. 10 ರಷ್ಟು ಮಾತ್ರ ಉಳಿದಿದೆ. ಎಚ್‌ಎಎಲ್‌ನವರು ಮುಷ್ಕರ ನಡೆಸಿದರೂ ಕೇಳುವವರಿಲ್ಲ. ಹೀಗೆ ಒಟ್ಟಾರೆಯಾಗಿ ದೇಶದ ಪರಿಸ್ಥಿತಿ ಹದಗೆಟ್ಟಿದೆ. ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದ ಪ್ರಧಾನಿ ಮೋದಿಗೆ ಇದೀಗ ಅದರ ಬಗ್ಗೆ ಮಾತನಾಡುವುದೇ ಕಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದ್ರೋಹದ ಘೋಷಣೆ ಹಿನ್ನೆಲೆಯಲ್ಲಿ ಬಂಧಿತರಾಗಿರುವ ಹುಬ್ಬಳ್ಳಿ ಕಾಲೇಜಿನ ವಿದ್ಯಾರ್ಥಿಗಳ ಪರವಾಗಿ ವಾದ ಮಾಡದಂತೆ ವಕೀಲರು ನಿರ್ಣಯ ಕೈಗೊಂಡಿರುವುದು ಹಾಗೂ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಿರುವ ಕುರಿತು ಸಮಗ್ರ ಮಾಹಿತಿ ಇಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದು, ಈ ಜಿಲ್ಲೆಯಲ್ಲೂ ಮಂತ್ರಿಗಳಿದ್ದಾರೆ. ಅವರೇ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು. ನಾನು ವಿಧಾನಸಭೆ, ಲೋಕಸಭೆಯಲ್ಲೂ ಇಲ್ಲ. ಹೀಗಾಗಿ ಮಾಧ್ಯಮಗಳ ಎದುರು ಮಾತ್ರ ಹೇಳಬೇಕಿದೆ ಎಂದರು.

ಪಾಪು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಎಚ್‌ಡಿಡಿ

ಅನಾರೋಗ್ಯಕ್ಕೆ ಒಳಗಾಗಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಡೋಜ ಪಾಟೀಲ ಪುಟ್ಟಪ್ಪ ಅವರನ್ನು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಭೇಟಿಯಾಗಿ ಆರೋಗ್ಯ ವಿಚಾರಣೆ ಮಾಡಿದರು. ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಅವರ ತಮ್ಮನ ಮಗಳ ಮದುವೆ ನಿಮಿತ್ತ ಹುಬ್ಬಳ್ಳಿಗೆ ಆಗಮಿಸಿದ ಅವರು, ಮೊದಲು ಕಿಮ್ಸ್‌ಗೆ ತೆರಳಿದರು. ಕಫ ಹಾಗೂ ಕೆಮ್ಮಿನ ಸಮಸ್ಯೆಯಿಂದ ಕಳೆದ ನಾಲ್ಕು ದಿನದಿಂದ ಇಲ್ಲಿನ ಕ್ಯಾಥಲ್ಯಾಬ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಪು ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ದೇವೇಗೌಡರು, ಗುಣಮುಖರಾಗುವಂತೆ ಹಾರೈಸಿದರು. ವೈದ್ಯರಿಂದ ಮಾಹಿತಿಯನ್ನು ಪಡೆದರು.
 

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!