ರೆಡ್ಡಿ, ತೇಜಸ್ವಿ ಬಾಯಲ್ಲಿ ಬಿಜೆಪಿ ಅಜೆಂಡಾ| ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆರೋಪ| ಜೆಎನ್‌ಯು ಮೇಲೆ ದಾಳಿ ನಡೆಸಿರುವ ಬಿಜೆಪಿ ಬೆಂಬಲಿತ ಗೂಂಡಾಗಳು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ|
ಬಳ್ಳಾರಿ(ಜ.09): ಸಂಸದ ತೇಜಸ್ವಿ ಸೂರ್ಯ ಹಾಗೂ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಅವರ ಪ್ರಚೋದನಕಾರಿ ಹೇಳಿಕೆಗಳು ಅವರಾಗಿಯೇ ನೀಡಿದ ಹೇಳಿಕೆಗಳಲ್ಲ. ಬಿಜೆಪಿಯವರು ಇವರ ಮೂಲಕ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿ ತನ್ನ ನೈಜ ಅಜೆಂಡಾವನ್ನು ಈ ಇಬ್ಬರ ಬಾಯಿಂದ ಹೇಳಿಸಿದೆ. ಈ ಮೂಲಕ ದೇಶದ ಜನರ ಮುಂದೆ ತಾವೇನು ಎಂಬುದನ್ನು ನಿರೂಪಿಸಿಕೊಂಡಿದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು ಕಮಲ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಸಮಾಜದ ಶಾಂತಿ ಕದಡುವುದೇ ಬಿಜೆಪಿಯ ಕೆಲಸ. ಸೋದರತ್ವ, ಸೌಹಾರ್ದತೆಗೆ ಧಕ್ಕೆ ತರುವ ಯತ್ನವನ್ನು ಬಿಜೆಪಿಯವರು ನಿರಂತರವಾಗಿ ಮಾಡಿಕೊಂಡೇ ಬಂದಿದ್ದಾರೆ. ತೇಜಸ್ವಿ ಹಾಗೂ ಸೋಮಶೇಖರ ರೆಡ್ಡಿ ಅವರದ್ದು ಹೊಸ ಸೇರ್ಪಡೆಯಷ್ಟೇ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಿರ್ಧಿಷ್ಟ ಸಮುದಾಯದ ವಿರುದ್ಧ ಖಡ್ಗ ಹಿಡಿದು ಬರುವ ಹೇಳಿಕೆ ನೀಡಿರುವ ಶಾಸಕ ಸೋಮಶೇಖರ ರೆಡ್ಡಿ ಅವರನ್ನು ಈವರೆಗೆ ಯಾಕೆ ಬಂಧಿಸಿಲ್ಲ ಎಂಬುದೇ ದೊಡ್ಡ ಅಚ್ಚರಿ. ಶಾಸಕರಿಗೆ ಪ್ರತ್ಯೇಕ ಕಾನೂನು ಏನಾದರೂ ಇದೆಯಾ? ಸಮಾಜದ ಶಾಂತಿ ಕದಡುವವರಿಗೆ ತಕ್ಕ ಶಾಸ್ತಿ ಆಗದಿದ್ದರೆ ಯಾವ ಸಂದೇಶ ರವಾನೆಯಾಗುತ್ತದೆ? ರೆಡ್ಡಿ ಈ ರೀತಿ ಮಾತನಾಡಿದ್ದಾಗ್ಯೂ ಬಿಜೆಪಿ ಹೈಕಮಾಂಡ್ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದಾದರೆ ಇವರ ಹೇಳಿಕೆಗೆ ಅವರ ಒಪ್ಪಿಗೆ ಇದೆ ಎಂದು ತಾನೇ ಅರ್ಥ? ನಿಜಕ್ಕೂ ಪ್ರಧಾನಮಂತ್ರಿಗೆ ಬದ್ಧತೆ ಇದ್ದರೆ ಕೂಡಲೇ ರಾಜಿನಾಮೆ ನೀಡಲಿ ಎಂದು ಆಗ್ರಹಿಸಿದರು.
ಅಲ್ಪನಿಗೆ ಐಶ್ವರ್ಯ ಬಂದ್ರೆ:
ಸಂಸದ ತೇಜಸ್ವಿ ಸೂರ್ಯ ಅವರು ದುಡಿವ ವರ್ಗದ ಬಗ್ಗೆ ಮಾತನಾಡಿರುವುದನ್ನು ನೋಡಿದರೆ ಅಲ್ಪನಿಗೆ ಐಶ್ವರ್ಯ ಬಂದಂತಾಗಿದೆ. ಸೋಮಶೇಖರ ರೆಡ್ಡಿ ಹಾಗೂ ತೇಜಸ್ವಿ ಅವರ ಹೇಳಿಕೆಗಳು ಸಮಾಜವನ್ನು ದಾರಿ ತಪ್ಪಿಸುವ ದೃಷ್ಟಿಕೋನದಲ್ಲಿಯೇ ಇವೆ ಹೊರತು, ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುವುದಿಲ್ಲ ಎಂದರು.
ಕೇಂದ್ರ ಸರ್ಕಾರದಿಂದ ಬರಬೇಕಾದ ನೆರೆ ಪರಿಹಾರದ ನೆರವು ಈವರೆಗೆ ಬಂದಿಲ್ಲ. ಹಣಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ದಮ್ಮಯ್ಯ ಎನ್ನುತ್ತಿದ್ದಾರೆ. ನೆರವಿಗಾಗಿ ಯಡಿಯೂರಪ್ಪ ಅವರು ಮೋದಿ ಅವರ ಕಾಲು ಹಿಡಿಯೋದೊಂದೇ ಬಾಕಿ ಇದೆ ಎಂದು ಟೀಕಿಸಿದರು.
ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಗೃಹಸಚಿವರು ಮಹಾನ್ ಸುಳ್ಳುಗಾರರು. ದೇಶವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪೌರತ್ವ ಕಾಯ್ದೆ ತಿದ್ದುಪಡಿಯ ಪ್ರತಿಪಕ್ಷಗಳ ಜೊತೆ ಚರ್ಚಿಸಿ ಏಕ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದಾಗುವ ಅಪಾಯಗಳ ಕುರಿತು ಎಲ್ಲೂ ಮಾತನಾಡುತ್ತಿಲ್ಲ.
ಬಿಜೆಪಿ ನಾಯಕರು ಸಂಕುಚಿತ ಭಾವನೆಯಿಂದ ಹೊರ ಬರಬೇಕು. ಸ್ವಾಮಿ ವಿವೇಕಾನಂದರು ವಿಶ್ವ ಮಾನವ ಸಂದೇಶ ಸಾರಿದರು. ಆದರೆ, ಬಿಜೆಪಿಯವರು ಸಂಕುಚಿತ ಸಂದೇಶ ಸಾರಲು ಹೊರಟಿದ್ದಾರೆ. ಕೋಮು ಸೌಹಾರ್ದತೆಯ ಕಲಕುವ ಹೀನ ಕೆಲಸವನ್ನು ಮೈಗೂಡಿಸಿಕೊಂಡಿದ್ದಾರೆ. ಇವರಿಗೆ ನಿಜವಾಗಿಯೂ ದಮ್ ಇದ್ದರೆ ಸ್ವಾಮಿ ವಿವೇಕಾನಂದ ಅವರ ವಿಚಾರಕ್ಕೆ ನಮ್ಮ ವಿರೋಧ ಇದೆ ಎಂದು ಹೇಳಲಿ. ಮಹನೀಯರನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದಲ್ಲ. ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಆದರೆ, ಬಿಜೆಪಿ ತದ್ವಿರುದ್ಧವಿದ್ದಾರೆ. ಸಮಾಜದಲ್ಲಿನ ಸಾಮರಸ್ಯ ಕಲಕುವ ಇವರನ್ನು ಜನರೇ ತಿರಸ್ಕಾರಗೊಳಿಸುತ್ತಾರೆ. ಈಗಾಗಲೇ ಐದು ರಾಜ್ಯಗಳು ಬಿಜೆಪಿ ಮುಕ್ತವಾಗಿದ್ದು, ಕೆಲವೇ ಕೆಲವು ವರ್ಷಗಳಲ್ಲಿ ದೇಶಮುಕ್ತವಾಗಲಿದೆ. ಅವರ ಘೋಷಣೆ ಅವರಿಗೇ ತಿರುಗುಬಾಣವಾಗಲಿದೆ ಎಂದು ತಿಳಿಸಿದರು.
ಕಾಂಗ್ರೆಸ್‌ನ್ನು ಬೇಕೂಫ್ ಎಂದು ಬೈದಿರುವ ಶಾಸಕ ಸೋಮಶೇಖರ ರೆಡ್ಡಿಗೆ ತನ್ನ ಪಕ್ಷ ಎಂದು ಅಸ್ವಿತ್ವಕ್ಕೆ ಬಂತು ಎಂದು ಗೊತ್ತಿದೆಯೇ? ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿರುವ ಕಾಂಗ್ರೆಸ್ ಬಗ್ಗೆ ತಿಳಿದುಕೊಂಡು ರೆಡ್ಡಿ ಮಾತನಾಡಲಿ ಎಂದರು.
ಜೆಎನ್‌ಯು ದಾಳಿ ಖಂಡನೀಯ
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಮೇಲೆ ದಾಳಿ ನಡೆಸಿರುವ ಬಿಜೆಪಿ ಬೆಂಬಲಿತ ಗೂಂಡಾಗಳು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. ಮಾರಕಾಸ್ತ್ರಗಳಿಂದ ಹಿಡಿದು ದುಷ್ಕರ್ಮಿಗಳು ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗೆ ಬರುತ್ತಾರೆ ಎನ್ನುವುದಾದರೆ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ದಾಳಿಯ ಮಾಹಿತಿ ಇರಲಿಲ್ಲವೇ? ಕೇಂದ್ರದ ಗುಪ್ತಚರ ಇಲಾಖೆಯ ನಿಷ್ಕಿ್ರಯತೆಯಿಂದಾಗಿಯೇ ದಾಳಿ ದಬ್ಬಾಳಿಕೆಗಳು ನಡೆಯುತ್ತಿವೆ. ಇದನ್ನು ನಿಯಂತ್ರಿಸಬೇಕಾದ ಕೇಂದ್ರ ಸರ್ಕಾರ ದಾಳಿಗೊಳಗಾದ ವಿದ್ಯಾರ್ಥಿಗಳ ವಿರುದ್ಧವೇ ಪ್ರಕರಣ ದಾಖಲಿಸಿ ಶೂರತ್ವ ಮೆರೆದಿದೆ ಎಂದು ಟೀಕಿಸಿದರು.
ಮೋದಿ ಮುಕ್ತ ದೇಶವಾಗುತ್ತಿದೆ
ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಬಿಜೆಪಿಯವರು ಮಾತನಾಡುತ್ತಿದ್ದರು. ಆದರೆ, ಇದೀಗ ದೇಶದಲ್ಲಿ ಮೋದಿ ಹಾಗೂ ಅಮಿತ್‌ಷಾ ಮುಕ್ತವಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಐದು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ದೇಶದ ಆರ್ಥಿಕ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಬಿಜೆಪಿ ಮುಕ್ತ ಭಾರತವಾಗಲಿದೆ ಎಂದು ಅವರದ್ದೇ ಪಕ್ಷದ ಸುಬ್ರಮಣ್ಯಸ್ವಾಮಿ ಹೇಳಿದ್ದಾರೆ ಎಂದು ಉಗ್ರಪ್ಪ ತಿಳಿಸಿದರು.