ಮಂಡ್ಯ (ಜು.18): ಮಾಜಿಸಂಸದ ಜಿ.ಮಾದೇಗೌಡ (92) ನಿಧನ ಹಿನ್ನೆಲೆ ಮಂಡ್ಯ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬಂದೀಗೌಡ ಬಡಾವಣೆಯ ನಿವಾಸದ ಬಳಿ ಸಾರ್ವಜನಿಕರು ಮಾದೇಗೌಡರ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 10.30ರವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಬಳಿಕ ಮಂಡ್ಯದ ಗಾಂಧಿ ಭವನಕ್ಕೆ ಪಾರ್ಥಿವ ಶರೀರ ರವಾನೆ ಮಾಡಿ ಕೆಲಕಾಲ ಗಾಂಧಿ ಭವನದಲ್ಲೂ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಹಿರಿಯ ರಾಜಕಾರಣಿ, ರೈತ ಹೋರಾಟಗಾರ ಜಿ. ಮಾದೇಗೌಡ ನಿಧನ
ತಮ್ಮ ಕಡೆಯ ದಿನಗಳಲ್ಲಿ ಮಾದೇಗೌಡರು ಗಾಂಧಿ ಭವನದಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ ಹಿನ್ನೆಲೆ ಅಲ್ಲಿಗೂ ಪಾರ್ಥಿವ ಶರೀರ ಕೊಂಡೊಯ್ಯಲಾಗುತ್ತಿದೆ.
ಮಂಡ್ಯದ ಗಾಂಧಿ ಎಂದೂ ಹೆಸರುವಾಸಿಯಾಗಿದ್ದ ಮಾದೇಗೌಡರಿಗೆ ಈ ಮೂಲಕ ಗೌರವ ಸಮರ್ಪಣೆ ಮಾಡಲಾಗುತ್ತಿದೆ. ಇಂದೇ ಮಾದೇಗೌಡರ ಅಂತಿಮ ಸಂಸ್ಕಾರ ನಡೆಯಲಿದೆ.
ಹಿರಿಯ ಹೋರಾಟಗಾರ ಮಾದೇಗೌಡರು ಶನಿವಾರ ಕೊನೆಯುಸಿರೆಳೆದಿದ್ದರು. ಮದ್ದೂರಿನ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ವಯೋಸಹಜ ಅನಾರೋಗ್ಯದಿಂದ ಮೃತಪಟ್ಟರು.
ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಶಾಸಕರಾಗಿ, ಲೋಕಸಭಾ ಸದಸ್ಯರಾಗಿ ರೈತ ಪರ ಹೋರಾಟಗಾರರಾಗಿ ಜಿಲ್ಲೆಯ ಅಭಿವೃದ್ದಿಗೆ ಎಸ್ ಎಂ ಕೃಷ್ಣ ಅವರ ಜೊತೆ ಶ್ರಮಿಸಿದ್ದರು.