ದರೋಜಿ- ಬಾಗಲಕೋಟೆ ರೈಲ್ವೆ ಮಾರ್ಗ ಪ್ರಾರಂಭಿಸಿ: ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಒತ್ತಾಯ| ಸರ್ಕಾರ ರಚಿಸುವುದರ ಗೋಜಿಗೆ ಕುಮಾರಸ್ವಾಮಿ ಹೋಗುವುದಿಲ್ಲ| ಜಾತ್ಯತೀತ ಪಕ್ಷವಾಗಿರುವ ಜೆಡಿಎಸ್ ತನ್ನದೆ ಆದ ತತ್ವ ಸಿದ್ಧಾಂತ ಹೊಂದಿದೆ|
ಗಂಗಾವತಿ(ಸೆ.23): ಬಳ್ಳಾರಿ ಜಿಲ್ಲೆಯ ದರೋಜಿಯಿಂದ ಬಾಗಲಕೋಟೆಗೆ ರೈಲು ಮಾರ್ಗ ಪ್ರಾರಂಭಿಸುವಂತೆ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ತಮ್ಮ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಾವು ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದ್ದ ಸಂದರ್ಭದಲ್ಲಿ ದರೋಜಿಯಿಂದ ಕಂಪ್ಲಿ -ಗಂಗಾವತಿ ಮೂಲಕ ಬಾಗಲಕೋಟೆಗೆ ರೈಲು ಮಾರ್ಗ ಪ್ರಾರಂಭಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆ ಸಂದರ್ಭದಲ್ಲಿ ಸಚಿವರಾಗಿದ್ದ ಜನಾರ್ದನ ರೆಡ್ಡಿ ಅವರು ಬಹಳ ಮುತುವರ್ಜಿ ವಹಿಸಿದ್ದರು ಎಂದು ತಿಳಿಸಿದರು.
ಪ್ರಸ್ತುತ ಕೊಪ್ಪಳ ಸಂಸದರು ಗಂಗಾವತಿ ದರೋಜಿ ರೈಲು ಮಾರ್ಗದ ಕುರಿತು ಸಂಸತ್‌ನಲ್ಲಿ ಪ್ರಸ್ತಾಪಿಸಿರುವುದಕ್ಕೆ ಸ್ವಾಗತಿಸುವೆ. ದರೋಜಿಯಿಂದ ಬಾಗಲಕೋಟೆ ರೈಲು ಸಂಚರಿಸಿದರೆ ಐತಿಹಾಸಿಕ ಪ್ರದೇಶಗಳು ಪ್ರಗತಿಯಾಗಲು ಸಾಧ್ಯವಾಗುತ್ತದೆ. ಜತೆಗೆ ಪ್ರವಾಸಿಗರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಗಂಗಾವತಿ: ಅಕ್ರಮ ಗಣಿಗಾರಿಕೆ ಮೇಲೆ ಪೊಲೀಸರ ದಾಳಿ, ವಾಹನ ಬಿಟ್ಟು ಪರಾರಿಯಾದ ಮಾಲೀಕರು
ತಾವು ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿ, ಬನಶಂಕರಿ, ಪಟ್ಟದಕಲ್ಲು ಹಾಗೂ ಗಂಗಾವತಿ ಭಾಗದ ಹಂಪಿ, ಆನೆಗೊಂದಿ, ಕನಕಗಿರಿ, ಪುರದ ಕೋಟಿ ಲಿಂಗಗಳ ದೇವಸ್ಥಾನ ಸೇರಿದಂತೆ ವಿವಿಧ ಪ್ರಸಿದ್ಧ ಐತಿಹಾಸಿಕ ಸ್ಥಳಗಳು ಇವೆ. ರೈಲು ಪ್ರಾರಂಭವಾಗುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ ಎಂದರು. ಕೇವಲ ಗಂಗಾವತಿಯಿಂದ ದರೋಜಿ ರೈಲು ಪ್ರಾರಂಭಿಸಿದರೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುವುದಿಲ್ಲ. ಕಾರಣ ದರೋಜಿ ಬಾಗಲಕೋಟೆ ರೈಲು ಮಾರ್ಗಕ್ಕೆ ಸರ್ಕಾರ ಮುತುವರ್ಜಿವಹಿಸ ಬೇಕಾಗಿದೆ ಎಂದರು.
ಬಿಜೆಪಿಯೊಂದಿಗೆ ಸರ್ಕಾರ ರಚಿಸುವುದಿಲ್ಲ
ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಜತೆ ಕೈಜೋಡಿಸುವುದಿಲ್ಲ, ಅವರೊಂದಿಗೆ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಆರ್. ಶ್ರೀನಾಥ ಹೇಳಿದರು.
ಬಿಜೆಪಿಯವರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಸರ್ಕಾರ ರಚಿಸುವುದರ ಗೋಜಿಗೆ ಕುಮಾರಸ್ವಾಮಿ ಹೋಗುವುದಿಲ್ಲ, ಜಾತ್ಯತೀತ ಪಕ್ಷವಾಗಿರುವ ಜೆಡಿಎಸ್ ತನ್ನದೆ ಆದ ತತ್ವ ಸಿದ್ಧಾಂತ ಹೊಂದಿದೆ ಎಂದರು.
ಕಾಂಗ್ರೆಸ್ ನಾಯಕರು ಮತ್ತೆ ಹಳೆಯ ಮುಖಂಡರನ್ನು ಆಹ್ವಾನಿಸಿ ಪಕ್ಷ ಕಟ್ಟುವುದಕ್ಕೆ ಮುಂದಾಗಿದೆ ಎನ್ನುವ ಕುರಿತು, ಅದು ನಮ್ಮ ತಂದೆ, ಮಾಜಿ ಸಂಸದ ಎಚ್.ಜಿ. ರಾಮುಲು ಅವರಿಗೆ ತಿಳಿದ ವಿಷಯವಾಗಿದೆ. ಆ ಸಂದರ್ಭ ಬಂದಾಗ ನೋಡೋಣ ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ನಾಯಕರು, ಜತೆಗೆ ಮಾಸ್ ಲೀಡರ್ ಆಗಿದ್ದಾರೆ. ಅವರ ಜತೆ ನಮಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕೇವಲ ಸ್ಥಳೀಯ ನಾಯಕರ ಭಿನ್ನಮತದಿಂದ ಕಾಂಗ್ರೆಸ್‌ನಿಂದ ಹೊರ ಬಂದಿರುವುದಾಗಿ ತಿಳಿಸಿದರು. ಈ ಸಂದಭದಲ್ಲಿ ನಗರಸಭಾ ಸದಸ್ಯ ಹಾಗೂ ನಗರ ಜೆಡಿಎಸ್ ಅಧ್ಯಕ್ಷ ಉಸ್ಮಾನ್, ವೀರನಗೌಡ ವಡ್ಡರಹಟ್ಟಿ ಇದ್ದರು.