ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ಕೊಲೆ ಬೆದರಿಕೆ ಕರೆಗಳು ಬಂದಿವೆ| ಇಡೀ ಜಿಲ್ಲೆಯಲ್ಲಿ ನನ್ನನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ ನಾನು ಯಾವುದಕ್ಕೂ ಹೆದರುವವನು ಅಲ್ಲ: ವಿಜಯಾನಂದ ಕಾಶಪ್ಪನವರ|
ಬಾಗಲಕೋಟೆ(ನ.06): ನನಗೆ ಕೊಲೆ ಬೆದರಿಕೆ ಕರೆ ಬಂದಿದ್ದು ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಕೊಟ್ಟಿದ್ದೇನೆ ಎಂದು ಹುನಗುಂದ ಕ್ಷೇತ್ರದ ಕಾಂಗ್ರೆಸ್‌ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ಕೊಲೆ ಬೆದರಿಕೆ ಕರೆಗಳು ಬಂದಿವೆ. ಕೆಲವರು ನಮ್ಮ ಸುತ್ತಲೂ ತಿರುಗಾಡಿದ್ದಾರೆ ಎಂದ ಅವರು, ಸೂಳಿಭಾವಿ ಪಿಕೆಪಿಎಸ್ ಪ್ರತಿನಿಧಿ ಆಯ್ಕೆ ಮಾಡುವ ಸಂದರ್ಭದಲ್ಲಿ ವಾಹನವೊಂದರಲ್ಲಿ ಬಡಿಗೆ, ಮಚ್ಚು, ಚಾಕು ಹಾಕಿಕೊಂಡು ಬಂದಿದ್ದ ಸಂದರ್ಭದಲ್ಲಿ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರು ನನ್ನನ್ನು ಹೊಡೆಯುವುದಕ್ಕೆ ಬಂದಿದ್ದು ಎಂದು ಹೇಳಿದರು.
ಇಡೀ ಜಿಲ್ಲೆಯಲ್ಲಿ ನನ್ನನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ ನಾನು ಯಾವುದಕ್ಕೂ ಹೆದರುವವನು ಅಲ್ಲ. ನಿಮ್ಮನ್ನು ಮುಗಿಸುತ್ತೇವೆ ಎಂದು ಫೋನ್ ಕರೆಗಳು ಬರುವ ಕುರಿತು ಪೊಲೀಸರಿಗೆ ದೂರು ನೀಡಿದರೂ ಅವರು ಇನ್ನೊಬ್ಬರ ಕೈಚೀಲವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಾರಕ ಕೊರೋನಾ ಹರಡಲು ಮೋದಿ ಕಾರಣ: ಕಾಶಪ್ಪನವರ ಹೇಳಿಕೆಗೆ ಬಿಜೆಪಿ ಖಂಡನೆ
ಅಧಿಕಾರಿಗಳ ಸೇವೆ 60 ವರ್ಷ ಮಾತ್ರ ಇರುತ್ತೆ. ಇದೇನು ಶಾಶ್ವತ ಸರ್ಕಾರವಲ್ಲ. ನಾವು ಅಧಿಕಾರದಲ್ಲಿದ್ದು ಬಂದಿದ್ದೇವೆ. ಕಾನೂನು ನಮಗೂ ಗೊತ್ತಿದೆ. ಯಾರಿಂದಲೂ ಕಾನೂನು ಕಲಿಯಬೇಕಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಬಂದೆ ಬರುತ್ತದೆ. ಮತ್ತೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುತ್ತಾರೆ ಆಗ ಎಲ್ಲವನ್ನೂ ನೋಡುತ್ತೇವೆ ಎಂದರು.
ವಿನಯ ಕುಲಕರ್ಣಿ ಕುರಿತು ಪ್ರತಿಕ್ರಿಯೆಗೆ ನಕಾರ:
ಯೋಗೇಶ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿರುವ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಇದು ನನಗೆ ಸಂಬಂಧಿಸಿದ ವಿಷಯವಲ್ಲ ಎಂದರು.