ಪಂಚಮಸಾಲಿಗರ 2ಎ ಸೌಲಭ್ಯಕ್ಕಾಗಿ ನೇಣಿಗೇರಲು ಸಿದ್ಧ: ಕಾಶಪ್ಪನವರ

By Kannadaprabha NewsFirst Published Apr 1, 2021, 2:33 PM IST
Highlights

ಎಲ್ಲಿ ಹೋಯ್ತು ನಿಮ್ಮ ‘ಮಾಡು ಇಲ್ಲವೇ ಮಡಿ’ ಹೋರಾಟ ಎಂದು ಸಚಿವ ನಿರಾಣಿಯನ್ನ ಪ್ರಶ್ನಿಸಿದ ವಿಜಯಾನಂದ ಕಾಶಪ್ಪನವರ| ಸಮಾಜಕ್ಕೆ ಮೀಸಲಾತಿ ಒದಗಿಸಲು ನಾನು ನೇಣು ಹಾಕಿಕೊಳ್ಳಲು ಸಿದ್ಧ, ಆದರೆ ನಿರಾಣಿ 2ಎ ಮೀಸಲಾತಿ ಕೊಡಿಸುವರೇ?| ಮೊದಲು ತಾವೊಬ್ಬ ಜವಾಬ್ದಾರಿಯುತ ಸಚಿವರಾಗಿದ್ದು, ಕ್ಷುಲ್ಲಕ ಹೇಳಿಕೆ ನಿಲ್ಲಿಸಲಿ: ಕಾಶಪ್ಪನವರ| 

ಹೂವಿನಹಡಗಲಿ(ಏ.01):  ಸಚಿವ ನಿರಾಣಿ ಮೀಸಲಾತಿ ಹೋರಾಟದ ಬಗ್ಗೆ ಗೊಂದಲದ ಹೇಳಿಕೆ ನಿಲ್ಲಿಸಲಿ. ಲಿಂಗಾಯತ ಪಂಚಮಸಾಲಿ ಸಮಾಜದ 2ಎ ಸೌಲಭ್ಯ ಪಡೆಯಲು ತಾವು ನೇಣು ಹಾಕಿಕೊಳ್ಳಲು ಸಿದ್ಧ ಎಂದು ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ.

ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಶರಣು ಶರಣಾರ್ಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲಿ ಹೋಯ್ತು ನಿಮ್ಮ ‘ಮಾಡು ಇಲ್ಲವೇ ಮಡಿ’ ಹೋರಾಟ ಎಂದು ನಿರಾಣಿ ಪ್ರಶ್ನಿಸುತ್ತಿದ್ದಾರೆ. ಸಮಾಜಕ್ಕೆ ಮೀಸಲಾತಿ ಒದಗಿಸಲು ನಾನು ನೇಣು ಹಾಕಿಕೊಳ್ಳಲು ಸಿದ್ಧನಿದ್ದೇನೆ. ಆದರೆ ಸಚಿವ ನಿರಾಣಿ 2ಎ ಮೀಸಲಾತಿ ಕೊಡಿಸುವರೇ? ಮೊದಲು ತಾವೊಬ್ಬ ಜವಾಬ್ದಾರಿಯುತ ಸಚಿವರಾಗಿದ್ದು, ಕ್ಷುಲ್ಲಕ ಹೇಳಿಕೆ ನಿಲ್ಲಿಸಲಿ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆದಿಯಾಗಿ ಹೋರಾಟ ನಿಲ್ಲಿಸಿ ಎಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ತಾವು ತಾತ್ಕಾಲಿಕವಾಗಿ ಹಿಂದೆ ಸರಿದಿದ್ದೇವೆ ವಿನಃ ಅಂಜಿಕೊಂಡು ಹಿಂದೆ ಸರಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಪಂಚಮಸಾಲಿ ಶ್ರೀಗಳ ಹೋರಾಟ ಕುರಿತು ಹೀಯಾಳಿಸಿ ಮಾತನಾಡಿದ್ದಾರೆ. ಹೋರಾಟದಿಂದ ಸಮಾಜ ಜಾಗೃತವಾಗಿದೆ. 6 ತಿಂಗಳ ಗಡುವು ಮುಗಿದರೂ 2ಎ ಮೀಸಲಾತಿ ಘೋಷಣೆ ಆಗದಿದ್ದರೆ, ರಾಜ್ಯದಲ್ಲಿ 20 ಲಕ್ಷಕ್ಕೂ ಅಧಿಕ ಜನರನ್ನು ತಂದು ಉಗ್ರ ಸ್ವರೂಪದ ಕ್ರಾಂತಿಕಾರಕ ಹೋರಾಟ ಮಾಡುತ್ತೇವೆ. ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅಧಿವೇಶನದಲ್ಲಿ ಸಮಾಜದ ಮೀಸಲಾತಿ ಕುರಿತು ಹೋರಾಟ ಮಾಡಿದ ಏಕೈಕ ಶಾಸಕರಾಗಿದ್ದಾರೆ. 28 ಜನ ಶಾಸಕರಿದ್ದರೂ ಯಾರು ಚರ್ಚಿಸಿಲ್ಲ. ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದೇವೆ. 6 ತಿಂಗಳು ಗಡುವು ನೀಡಿದ್ದೇ ಮೊದಲ ಜಯ ಎಂದರು.

ಬಳ್ಳಾರಿಯಲ್ಲಿ ಕೊರೋನಾ 2ನೇ ಅಲೆಗೆ ಮೊದಲ ಬಲಿ: ಮತ್ತೆ ಸೀಲ್‌ಡೌನ್‌, ಆತಂಕದಲ್ಲಿ ಜನತೆ

ಕೂಡಲ ಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಸಮಾಜಕ್ಕೆ 2ಎ ಸೌಲಭ್ಯ ಕಲ್ಪಿಸಲು ಸಿಎಂಗೆ ಮಾಹಿತಿ ಕೊರತೆಯಿಂದ ಅನ್ಯರ ಇಲ್ಲಸಲ್ಲದ ಹೇಳಿಕೆಯಿಂದ ತಡವಾಗಿದೆ. ನಮ್ಮಲ್ಲಿರುವ ಒಣ ಪ್ರತಿಷ್ಠೆ ಹಾಗೂ ಗುಂಪುಗಾರಿಕೆಯಿಂದ ಮೀಸಲಾತಿ ಘೋಷಣೆ ತಡವಾಗಿರಬಹುದು. ಆದರೂ ಇಂದಿಗೂ ನಮಗೆ ಸಿಎಂ ಮೇಲೆ ಭರವಸೆ ಇದೆ ಎಂದರು.

ಪಾದಯಾತ್ರೆಯಲ್ಲಿ ಸಾಕಷ್ಟುಅಗ್ನಿ ಪರೀಕ್ಷೆ, ಅವಮಾನ, ವಿಘ್ನಗಳನ್ನು ಎದುರಿಸಿದ್ದೇವೆ. ಆದರೂ ಎಲ್ಲವನ್ನು ಮೆಟ್ಟಿನಿಂತು ಪರಿಶುದ್ಧ ಮಾರ್ಗದಲ್ಲೇ ಹೋರಾಟ ಮಾಡಿದ್ದರಿಂದ ರಾಜ್ಯದ 7 ಕೋಟಿ ಜನರ ಮನೆ ಮಾತಾಗಿದ್ದೇವೆ. ಸರ್ಕಾರ ಹೋರಾಟಕ್ಕೆ ಮಣಿದು 6 ತಿಂಗಳ ಗಡುವು ಪಡೆದುಕೊಂಡಿದೆ. ಕೇವಲ ಉತ್ತರ ಕರ್ನಾಟಕ ಭಾಗದಲ್ಲೇ ಮಾತ್ರ ಸಂಘಟಿತರಾಗಿದ್ದ ಸಮಾಜವನ್ನು ದಕ್ಷಿಣ ಭಾಗದಲ್ಲಿಯೂ ಜಾಗೃತಿ ಮೂಡಿಸಿದ್ದರಿಂದ ಇನ್ನು ಹೆಚ್ಚಿನ ಶಕ್ತಿ ಸಿಕ್ಕಿದೆ ಎಂದರು.

ಲಿಂಗಾಯತ ಪಂಚಮಸಾಲಿ ಎಂದು ನಮೂದಿಸಿ

ಮುಂಬರುವ ಜನಗಣತಿ ಸಂದರ್ಭದಲ್ಲಿ ರಾಜ್ಯದ ಎಲ್ಲ ಲಿಂಗಾಯತ ಪಂಚಮಸಾಲಿ ಸಮಾಜದವರು, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸುವ ಮೂಲಕ ದಾಖಲೀಕರಣ ಮಾಡಬೇಕೆಂದು ವಿಜಯನಂದ ಕಾಶಪ್ಪನವರ ಮನವಿ ಮಾಡಿದರು.

ಹಿಂದುಳಿದ ವರ್ಗದ ಆಯೋಗ ಮಾಹಿತಿ ಸಂಗ್ರಹ ಮಾಡುತ್ತಿದೆ. ಅದಕ್ಕಾಗಿ ತಾವು ಪೀಠದಿಂದ ಅರ್ಜಿಗಳನ್ನು ಪ್ರತಿಯೊಂದು ಪಂಚಮಸಾಲಿ ಮನೆಗೂ ತಲುಪಿಸುತ್ತೇವೆ. ಸೂಕ್ತ ಮಾಹಿತಿಯನ್ನು ಭರ್ತಿ ಮಾಡಿ ಪೀಠಕ್ಕೆ ಮರಳಿಸಬೇಕೆಂದು ಹೇಳಿದ್ದಾರೆ. 

ಈ ಸಂದರ್ಭದಲ್ಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಕೋಡಿಹಳ್ಳಿ ಮುದುಕಪ್ಪ, ಪಾಟೀಲ್‌ ಬಸವನಗೌಡ, ಮುದಿಮಲ್ಲಪ್ಪ, ಸೊಪ್ಪಿನ ವೀರಣ್ಣ, ಅರವಳ್ಳಿ ವೀರಣ್ಣ, ಹಣ್ಣಿ ಶಶಿಧರ, ಗುರುಶಾಂತ. ಗಡಗಿ ಶಿವಕುಮಾರ ಸೇರಿದಂತೆ ಇತರರಿದ್ದರು.
 

click me!