ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಲೆ ಮಹದೇಶ್ವರ ದೇವರಿಗೆ ಸುಮಾರು 700 ಕೆ.ಜಿ. ಬೆಳ್ಳಿಯನ್ನು ಕೊಟ್ಟಿದ್ದಾರೆ ಎಂದು ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್ ಹೇಳಿದರು.
ಮೈಸೂರು (ಮಾ.23): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಭೆ, ಸಮಾರಂಭಗಳಲ್ಲಿ ಬೆಳ್ಳಿ ಗದೆ, ಬೆಳ್ಳಿ ಕತ್ತಿ ಹೀಗೆ ಅನೇಕ ಉಡುಗೊರೆ ಬಂದವು. ಅದೆಲ್ಲವನ್ನೂ ಸೇರಿಸಿ ಸುಮಾರು 700 ಕೆ.ಜಿ. ಬೆಳ್ಳಿಯನ್ನು ಮಲೆ ಮಹದೇಶ್ವರ ಬೆಟ್ಟಕ್ಕೆ ಕೊಟ್ಟುಬಿಟ್ಟರು. ಇದಕ್ಕೆ ಪ್ರಚಾರವನ್ನೂ ಪಡೆಯಲಿಲ್ಲ ಎಂದು ಹುಣಸೂರು ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್ ಹೇಳಿದರು.
ಮೈಸೂರಿನಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ನಡೆದ ಕಾಂಗ್ರೆಸ್ ಸಂವಾದದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಸಭೆ, ಸಮಾರಂಭಗಳಲ್ಲಿ ಉಡುಗೊರೆ ಬಂದಿತ್ತು. ಬೆಳ್ಳಿ ಗದೆ, ಬೆಳ್ಳಿ ಕತ್ತಿ ಹೀಗೆ ಅನೇಕ ಉಡುಗೊರೆ ಬಂದವು. ಅದೆಲ್ಲವನ್ನೂ ಸಿಎಂ ಸಿದ್ದರಾಮಯ್ಯನವರು ಮಲೆ ಮಹದೇಶ್ವರ ಬೆಟ್ಟಕ್ಕೆ ಕೊಟ್ಟುಬಿಟ್ಟರು. ಅದನ್ನು ಪ್ರಚಾರ ಮಾಡಿಕೊಳ್ಳಲಿಲ್ಲ. ನಾವು ಸೀತಾರಾಮ ಅಂತ ನಮಸ್ಕಾರ ಮಾಡುತ್ತೇವೆ. ಬಿಜೆಪಿಯವರು ಜೈ ಶ್ರೀರಾಮ್ ಅಂತ ಕೂಗುತ್ತಾರೆ. ಯಾವ ರೀತಿ ಭಕ್ತಿ ಬೇಕು ಅಂತ ನಾವು ಡಿಸೈಡ್ ಮಾಡಬೇಕು ಎಂದು ಹೇಳಿದರು.
ಕಾವೇರಿ ನೀರು ತಮಿಳುನಾಡು ಹಕ್ಕಿನಂತಾಗಿದೆ; ರಾಜ್ಯ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದ್ಯಾ? ಆರ್. ಅಶೋಕ್ ಕಿಡಿ
ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಮಾತನಾಡಿ, ನಾವು ಕೂಲಿ ಮಾಡಿದ್ದೇವೆ, ಕೂಲಿಗೆ ಸಂಬಳ ಕೇಳುತ್ತೇವೆ. ಅಭಿವೃದ್ಧಿಯ ಮೇಲೆ ಜನರ ಬಳಿ ಮತ ಕೇಳುತ್ತೇವೆ.ಕಾಂಗ್ರೆಸ್ ಪಕ್ಷ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದೆ. ಕಾಂಗ್ರೆಸ್ ಪಕ್ಷದ ಸರ್ಕಾರದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ. 47 ವರ್ಷಗಳ ಬಳಿಕ ಒಕ್ಕಲಿಗ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿದೆ. ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ 24/7 ಕೆಲಸ ಮಾಡುವ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಹಿರಿಯ ಶಾಸಕ ತನ್ವೀರ್ ಸೇಠ್ ಮಾರ್ಗದರ್ಶನದಲ್ಲಿ ನಡೆಯುತ್ತೇನೆ ಎಂದು ಹೇಳಿದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ಬಿಜೆಪಿ ಅಭ್ಯರ್ಥಿ ಬಗ್ಗೆ ಮಾತನಾಡಲ್ಲ. ಹಾಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಸಿಕ್ಕಿಲ್ಲ. ಅದರ ಬಗ್ಗೆಯೂ ನಾವು ಮಾತನಾಡಲ್ಲ. ಜನರ ಸಮಸ್ಯೆಗೆ ಸ್ಪಂದಿಸಲು ನಮ್ಮ ಅಭ್ಯರ್ಥಿ ಲಭ್ಯವಾಗುತ್ತಾರೆ. ಬಡತನ, ಹಸಿವು ಮುಕ್ತಗೊಳಿಸಲು ರಾಜ್ಯ ಸರ್ಕಾರ ಕೊಟ್ಟಿರುವ ಯೋಜನೆಗಳು ಸಹಕಾರಿ ಆಗಲಿವೆ. ಪಂಚ ಗ್ಯಾರಂಟಿ ಯೋಜನೆಗಳು ನಮಗೆ ಶ್ರೀರಕ್ಷೆಯಾಗಿದೆ. ತಂಬಾಕು ಬೆಳೆಗಾರರ ಸಮಸ್ಯೆ, ಮೈಸೂರಿಗೆ ಅಂತಾರಾಷ್ಟ್ರೀಯ ಮನ್ನಣೆ, ಉದ್ಯೋಗ ಸೃಷ್ಟಿ ನಮ್ಮ ಆದ್ಯತೆ ನೀಡಲಾಗುವುದು. ದ್ವೇಷ, ವಿಷ ಬೀಜ ಬಿತ್ತುವುದು ನಮ್ಮ ಕೆಲಸ ಅಲ್ಲ. ಮೌಲ್ಯಾಧಾರಿತ ರಾಜಕಾರಣ ಮಾಡುತ್ತೇವೆ ಎಂದು ಹೇಳಿದರು.
ಕೋಲಾರ ಕ್ಷೇತ್ರ ಅಧಿಕೃತವಾಗಿ ಜೆಡಿಎಸ್‌ಗೆ ಬಿಟ್ಟುಕೊಟ್ಟ ಬಿಜೆಪಿ; ದೊಡ್ಡಗೌಡ್ರಿಗೆ ಗುನ್ನಾ ಇಟ್ಟ ಪ್ರೀತಂಗೌಡರ ಶಿಷ್ಯ!
ಮೈಸೂರು-ಕೊಡಗು ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಐದು ಶಾಸಕರಿದ್ದಾರೆ. ಬಿಜೆಪಿಯ ದುರಾಡಳಿತವನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಬೇಕು.ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ನೆರವಿಗೆ ಬರಲಿವೆ.ಬಿಜೆಪಿ ಅಭ್ಯರ್ಥಿಗಳು ಮೋದಿ ಹೆಸರು ಹೇಳಿಕೊಂಡು ಮತಯಾಚನೆ ಮಾಡುತ್ತಾರೆ. ನಾವು ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಹೆಸರು ಹೇಳಿಕೊಂಡು ಮತಯಾಚನೆ ಮಾಡುತ್ತಾರೆ. ಕಾಂಗ್ರೆಸ್ ಒಕ್ಕಲಿಗರನ್ನು ಕಡಗಣಿಸಿದೆ ಎಂಬ ಆರೋಪ ಸತ್ಯಕ್ಕೆ ದೂರವಾದುದು ಎಂದು ಶಾಸಕ ಹರೀಶ್‌ಗೌಡ ಹೇಳಿದರು.