ಗೊಬ್ಬರ, ಬಿತ್ತನೆ ಬೀಜದ ಬೆಲೆ ಗಗನಕ್ಕೆ| ರೈತವಿರೋಧಿ ಬಿಜೆಪಿ ಸರ್ಕಾರಕ್ಕೆ ಜನತೆ ತಕ್ಕ ಪಾಠ ಕಲಿಸ್ತಾರೆ| ಜನರ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿವೆ. ಪೆಟ್ರೋಲ್, ಡೀಸೆಲ್ ಬೆಲೆ ವಿಪರೀತ ಹೆಚ್ಚಿದೆ| ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ- ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲ: ಬನ್ನಿಕೋಡ|
ಹಿರೇಕೆರೂರು(ಏ.24): ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತೇವೆ, ಅವರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದು ಜನವಿರೋಧಿ ಆಡಳಿತ ನಡೆಸುತ್ತಿದೆ. ಗೊಬ್ಬರ- ಔಷಧ, ಬಿತ್ತನೆ ಬೀಜಗಳ ಬೆಲೆ ಗಗನಕ್ಕೆ ಏರಿದ್ದು, ಬಿಜೆಪಿ ಸರ್ಕಾರ ಮಾತಿಗೆ ತಪ್ಪಿದೆ ಎಂದು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಆರೋಪಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿರೇಕೆರೂರು ಪಟ್ಟಣದ ಅಭಿವೃದ್ಧಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಅದರ ಪ್ರತಿಫಲವಾಗಿ ಪಟ್ಟಣದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಪಪಂ 1ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಪ್ರಶಾಂತ ತಿರಕಪ್ಪನವರ ಅವರನ್ನು ಜನತೆ ಬೆಂಬಲಿಸಲಿದ್ದಾರೆ. ಮಾತಿನ ಮೂಲಕ ಜನರನ್ನು ಮರುಳು ಮಾಡಿದ್ದ ನರೇಂದ್ರ ಮೋದಿ ಸರ್ಕಾರದ ಬಣ್ಣ ಬಯಲಾಗಿದೆ. ಜನರ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿವೆ. ಪೆಟ್ರೋಲ್, ಡೀಸೆಲ್ ಬೆಲೆ ವಿಪರೀತ ಹೆಚ್ಚಿದೆ. ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ- ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಜನಜಾಗೃತರಾಗಿದ್ದು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಮನವಿ ಮಾಡಿದರು.
ಕೋವಿಡ್ ಮೆಡಿಕಲ್ ಎಮರ್ಜೆನ್ಸಿಗೆ ಸಿದ್ಧರಾಗಿ: ಬೊಮ್ಮಾಯಿ
ಐಎಫ್‌ಎಸ್ ನಿವೃತ್ತ ಅಧಿಕಾರಿ ಮಂಜುನಾಥ ತಂಬಾಕದ ಮಾತನಾಡಿ, ಜನವಿರೋಧಿ ಸರ್ಕಾರಗಳು ಬಹಳ ದಿನ ಇದ್ದದ್ದು ಇತಿಹಾಸದಲ್ಲಿಯೇ ಇಲ್ಲ. ಅದೇ ರೀತಿ ಈ ಸರ್ಕಾರಗಳು ಜನಮನ್ನಣೆಯಿಂದ ದೂರ ಸರಿಯುತ್ತಿವೆ. ಸಾಮಾನ್ಯ ಜನರು ಜೀವನ ನಿರ್ವಹಣೆ ಮಾಡಲು ಒದ್ದಾಡುತಿದ್ದಾರೆ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡುತ್ತಿಲ್ಲ. ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುತ್ತಿಲ್ಲ. ರೈತ ಸಮುದಾಯ ಎಲ್ಲ ಸಮಸ್ಯೆಗಳಿಂದ ಕಂಗಾಲಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಮಡಿವಾಳರ, ಜಿಲ್ಲಾ ಕಾಂಗ್ರೆಸ್ ವಕ್ತಾರ ವಿನಯ ಪಾಟೀಲ, ಜಿಪಂ ಸದಸ್ಯರಾದ ಎಸ್.ಕೆ. ಕರಿಯಣ್ಣನವರ, ಪ್ರಕಾಶ ಬನ್ನಿಕೋಡ, 1ನೇ ವಾರ್ಡ್‌ನ ಅಭ್ಯರ್ಥಿ ಪ್ರಶಾಂತ ತಿರಕಪ್ಪನವರ, ಮುಖಂಡರಾದ ಪಿ.ಡಿ. ಬಸನಗೌಡ್ರ, ಎಸ್. ತಿಪ್ಪಣ್ಣನವರ, ಬಿ.ಎನ್. ಬಣಕಾರ, ದುರಗಪ್ಪ ನೀರಲಗಿ, ಸುರೇಶ ಮಡಿವಾಳರ ಇತರರು ಉಪಸ್ಥಿತರಿದ್ದರು. ನಂತರ 1ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಪ್ರಶಾಂತ ತಿರಕಪ್ಪನವರ ಪರವಾಗಿ ಪ್ರಚಾರ ನಡೆಸಿ ಮತ ಯಾಚಿಸಿದರು.