ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಬೃಹತ್ ಪ್ರತಿಭಟನೆ| ಶ್ರೀರಾಮುಲು ಹೆಸರು ಹೇಳಿಕೊಂಡು ಗೆದ್ದಿರುವ ಶಾಸಕ, ಸಂಸದರು ಒಕ್ಕೊರೊಲಿನಿಂದ ಅವರನ್ನು ಉಪಮುಖ್ಯಮಂತ್ರಿಯಾಗಿ ಘೋಷಿಸುವಂತೆ ಒತ್ತಾಯಿಸಬೇಕು ಎಂದ ಕೆಪಿಸಿಸಿ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ|
ಕನಕಗಿರಿ(ಅ.14): ಭೂ ಸುಧಾರಣೆ, ಎಪಿಎಂಸಿ ಹಾಗೂ ಕಾರ್ಮಿಕ ತಿದ್ದುಪಡಿ ಕಾಯ್ದೆ ವಿರೋಧಿಸಿ ಉತ್ತರ ಕರ್ನಾಟಕದಾದ್ಯಂತ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದ್ದಾರೆ.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವಂತೆ ಈಗಾಗಲೇ ರಾಜ್ಯಾದ್ಯಂತ ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಹೋರಾಟ ನಡೆಸಿವೆ. ಆದರೂ ಸರ್ಕಾರಗಳು ಸ್ಪಂದಿಸಿಲ್ಲ. ಉತ್ತರ ಕರ್ನಾಟಕದಲ್ಲಿ ಒಣ ಬೇಸಾಯದ ಪದ್ಧತಿ ಹೆಚ್ಚಾಗಿರುವುದರಿಂದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ತಿದ್ದುಪಡಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ಬೃಹತ್ ಹೋರಾಟ ಹಮ್ಮಿಕೊಳ್ಳುವ ಬಗ್ಗೆ ಈಗಾಗಲೇ ರಾಜ್ಯ ಕೆಪಿಸಿಸಿ ನಾಯಕರು ಚರ್ಚೆ ನಡೆಸಿದ್ದು, ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದಿಂದ ಹೋರಾಟ ಆರಂಭಿಸಲು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲಾದ್ಯಂತ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ಮನೆಗಳೂ ಕುಸಿದಿದ್ದು, ಭತ್ತ, ಸಜ್ಜೆ, ಮೆಕ್ಕೆಜೋಳ ಹಾಗೂ ನವಣಿ ಫಸಲು ಮಳೆಗೆ ಹಾಳಾಗಿವೆ. ರೈತರಿಗೆ ಕೈಗೆ ಬಂದು ತುತ್ತು ಬಾಯಿಗೆ ಬಾರದಂತಾಗಿದೆ. 2019ರಲ್ಲಿ ಹಾನಿಯಾದ ತೋಟಗಾರಿಕೆ ಹಾಗೂ ಒಣಬೇಸಾಯ ರೈತರ ನಷ್ಟಕ್ಕೆ ಸರ್ಕಾರ ಇದುವರೆಗೂ ಪರಿಹಾರ ನೀಡಿಲ್ಲ. ಶಾಸಕರು, ಸಂಸದರು ಹಾಗೂ ಅಧಿಕಾರಿಗಳು ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ. ಇನ್ನೊಂದೆಡೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ಬೇಜವಾಬ್ದಾರಿತನ ತೋರುತ್ತಿದ್ದಾರೆ ಎಂದು ದೂರಿದ್ದಾರೆ.
ಈ ಬಾರಿ ಬೆಂಬಲ ಬೆಲೆ ಖರೀದಿ ಕೇಂದ್ರ ಇಲ್ಲ, ಸಂಬಳ ಕೊಡೋದಕ್ಕೂ ಹಣವಿಲ್ಲ, ಸಿಎಂ
ನಮ್ಮದೇ ಪಕ್ಷದಲ್ಲಿ ಐವರು ಪಪಂ ಸದಸ್ಯರಿದ್ದು, ಮುಸ್ಲಿಂ ಕೋಟಾಕ್ಕೆ ಅಧ್ಯಕ್ಷ ಸ್ಥಾನ ಮೀಸಲಿಡಲಾಗಿದೆ. ಮೂವರು ಪಕ್ಷೇತರರು ಪಕ್ಷದ ಸದಸ್ಯತ್ವ ಪಡೆದಿದ್ದರಿಂದ ಕಾಂಗ್ರೆಸ್‌ಗೆ ಮತ ಹಾಕಲಿದ್ದಾರೆ. ಕಾಂಗ್ರೆಸ್‌ನ 9 ಹಾಗೂ ಮೂವರು ಪಕ್ಷೇತರರು ಸೇರಿ 12 ಸದಸ್ಯರು ಕಾಂಗ್ರೆಸ್‌ನವರೇ ಆಗಿದ್ದರಿಂದ ಕನಕಗಿರಿ ಪಪಂ ಗದ್ದುಗೆ ಕಾಂಗ್ರೆಸ್ ಪಾಲಾಗಲಿದೆ. ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವ ಸಲುವಾಗಿ ಎಲ್ಲ ಸದಸ್ಯರಿಗೂ ವಿಪ್ ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಮುಖಂಡರಾದ ವೀರೇಶ ಸಮಗಂಡಿ, ಗಂಗಾಧರಸ್ವಾಮಿ ಕೆ., ಪ್ರಶಾಂತ ಪ್ರಭುಶೆಟ್ಟರ್, ರಾಜೇಸಾಬ ನಂದಾಪೂರ, ಅನಿಲ ನಿಜ್ಜಳ, ಚಂದ್ರೇಗೌಡ, ರವಿ ಪಾಟೀಲ್, ಪಪಂ ಸದಸ್ಯರಾದ ಮಂಜುನಾಥ ಗಡಾದ, ಖಾಜಸಾಬ ಗುರಿಕಾರ, ಶರಣಬಸಪ್ಪ ಭತ್ತದ, ಪಾಷಸಾಬ ಮುಲ್ಲಾರ ಇದ್ದರು.
ಸಚಿವ ಬಿ.ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಹೇಳಿದ್ದ ಬಿಜೆಪಿ ಇದೀಗ ಏಕಾಏಕಿ ಆರೋಗ್ಯ ಖಾತೆಯಿಂದ ಸಮಾಜ ಕಲ್ಯಾಣ ಖಾತೆಗೆ ವರ್ಗಾಯಿಸಿದೆ. ಉಪ ಮುಖ್ಯಮಂತ್ರಿಯಾಗಬೇಕಿದ್ದ ಶ್ರೀರಾಮುಲು ಅವರನ್ನು ಬಿಜೆಪಿ ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ಶ್ರೀರಾಮುಲು ಹೆಸರು ಹೇಳಿಕೊಂಡು ಗೆದ್ದಿರುವ ಶಾಸಕ, ಸಂಸದರು ಒಕ್ಕೊರೊಲಿನಿಂದ ಅವರನ್ನು ಉಪಮುಖ್ಯಮಂತ್ರಿಯಾಗಿ ಘೋಷಿಸುವಂತೆ ಒತ್ತಾಯಿಸಬೇಕು ಎಂದು ಶಿವರಾಜ ತಂಗಡಗಿ ಎಂದು ತಿಳಿಸಿದ್ದಾರೆ.