ನಾವು ಕುಮಾರಸ್ವಾಮಿ ಕುರಿತು ಪ್ರೀತಿಯಿಂದ ಕೆಲಸ ಮಾಡಿದ್ದೇವೆ| ಚಲುವರಾಯಸ್ವಾಮಿ, ಬಾಲಕೃಷ್ಣ ಮೋಸ ಮಾಡಿದರು ಎಂದು ಹೆಚ್‌ಡಿಕೆ ಹೇಳುತ್ತಾರೆ| ನಾನಂತೂ ಕುಮಾರಸ್ವಾಮಿ ಕುರಿತು ಕೇವಲವಾಗಿ ಮಾತನಾಡುವುದಿಲ್ಲ| ಹೆಚ್‌ಡಿಕೆ ಮಾತ್ರ ಯಾಕೆ ನಮ್ಮನ್ನು ದ್ವೇಷಿಸುತ್ತಾರೆ ಎಂಬುದು ಗೊತ್ತಿಲ್ಲ: ಚಲುವರಾಯಸ್ವಾಮಿ|
ಕುದೂರು(ಮಾ.31): ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ನಾವುಗಳು ಪಟ್ಟ ಪಾಡು ದೇವರಿಗೇ ಗೊತ್ತು. ಆದರೂ ಅವರು ನಮ್ಮನ್ನು ಏಕೆ ದ್ವೇಷಿಸುತ್ತಾರೆ ಎಂಬುದು ಇಂದಿಗೂ ಗೊತ್ತಾಗಿಲ್ಲ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಇಲ್ಲಿನ ಶ್ರೀ ರಾಮಲೀಲಾ ಮೈದಾನದಲ್ಲಿ ಮಾಗಡಿ ಯೂತ್ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಎಚ್‌ಸಿಬಿ ಕಪ್ ಕ್ರಿಕೆಚ್ ಟೂರ್ನಿಮೆಂಟ್‌ನಲ್ಲಿ ಭಾಗವಹಿಸಿ ಮಾತನಾಡಿ, ನಾವುಗಳು ಕುಮಾರಸ್ವಾಮಿ ಅವರ ಕುರಿತು ಪ್ರೀತಿಯಿಂದ ಕೆಲಸ ಮಾಡಿದ್ದೇವೆ. ಆದರೂ ಅವರು ಚಲುವರಾಯಸ್ವಾಮಿ, ಬಾಲಕೃಷ್ಣ ಮೋಸ ಮಾಡಿದರು ಎಂದು ಹೇಳುತ್ತಾರೆ. ನಾನಂತೂ ಅವರ ಕುರಿತು ಕೇವಲವಾಗಿ ಮಾತನಾಡುವುದಿಲ್ಲ. ಆದರೆ ಅವರು ಮಾತ್ರ ಯಾಕೆ ನಮ್ಮನ್ನು ದ್ವೇಷಿಸುತ್ತಾರೆ ಎಂಬುದು ಗೊತ್ತಿಲ್ಲ ಎಂದರು.
ಮಾಜಿ ಶಾಸಕ ಬಾಲಕೃಷ್ಣರವರ ರಾಜಕಾರಣ ಪ್ರಾರಂಭವಾಗಿದ್ದು, ದೇವೇಗೌಡರಿಂದ ಅಲ್ಲ. ಅಂದು ಜನತಾದಳಕ್ಕೆ ತಾಲೂಕಿನಲ್ಲಿ ಕೇವಲ 4 ಸಾವಿರ ಮತಗಳು ಇದ್ದ ಸಂದರ್ಭದಲ್ಲಿ ಬಾಲಕೃಷ್ಣರವರು 60 ಸಾವಿರ ಮತಗಳನ್ನು ದೇವೇಗೌಡರ ಬುಟ್ಟಿಗೆ ಹಾಕಿಸಿದರು.
'ಅಳುವಂತಹದ್ದು ಏನೂ ಆಗಿಲ್ಲ' ಎಚ್‌ಡಿಕೆಗೆ ಚಲುವರಾಯಸ್ವಾಮಿ ಟಾಂಗ್
ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಮುಲಾಯಂಸಿಂಗ್ ಯಾದವ್ ಸಮ್ಮುಖದಲ್ಲಿ ಉತ್ತರಹಳ್ಳಿ ಶ್ರೀನಿವಾಸ್ ಅವರನ್ನು ಇದೇ ಬಾಲಕೃಷ್ಣ ಪಕ್ಷಕ್ಕೆ ಸೇರ್ಪಡೆ ಮಾಡಿ ಇವರಿಬ್ಬರು ಅವಿರತವಾಗಿ ಕೆಲಸ ಮಾಡದೇ ಹೋಗಿದ್ದರೆ ದೇವೇಗೌಡರು ಒಂದು ಲಕ್ಷ ಮತಗಳ ಅಂತರದಿಂದ ಸೋಲುತ್ತಿದ್ದರು ಎಂದು ಚಲುವರಾಯಸ್ವಾಮಿ ಹೇಳಿದರು.
ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಬಿಜೆಪಿ ನೀರಿನ ಮೇಲಿನ ಗುಳ್ಳೆ ಇದ್ದಂತೆ. ಕಾಂಗ್ರೆಸ್ ಗರಿಕೆಯ ಬೇರುಗಳಿದ್ದಂತೆ. ಮತ್ತೆ ಮತ್ತೆ ಚಿಗುರುತ್ತಲೇ ಇರುತ್ತದೆ. ಜೆಡಿಎಸ್ ಎಂದಿಗೂ ಅಧಿಕಾರಕ್ಕೆ ಬಾರದಿರುವ ಪಕ್ಷ. ಬಿಜೆಪಿಯ ಸಿಡಿ ಪ್ರಕರಣ ರಾಜ್ಯವನ್ನು ತಲೆತಗ್ಗಿಸುವಂತೆ ಮಾಡಿದೆ. ಬಿಜೆಪಿ ಪ್ರತಿ ಬಾರಿ ಅಧಿಕಾರಕ್ಕೆ ಬಂದಾಗಲೂ ಇಂತಹ ಪ್ರಕರಣಗಳು ದಾಖಲಾಗುತ್ತವೆ. ಬಿಜೆಪಿ ಸರ್ಕಾರದ ನಡವಳಿಕೆಯಿಂದ ನಾಡಿನ ಜನರು ರೋಸಿ ಹೋಗಿದ್ದಾರೆ ಎಂದರು.
ಮಾಗಡಿ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿನಯ್ ಗೌಡ ಮಾತನಾಡಿ, ಯುವಕರು ಅಣುಶಕ್ತಿಗಿಂತಲೂ ಶಕ್ತಿಯುತವಾದದ್ದು, ಯುವಕರ ಸಂಘಟನೆಯಿಂದ ತಾಲೂಕಿನಲ್ಲಿ ಹಲವಾರು ರೀತಿಯಲ್ಲಿ ಬಡವರಿಗೆ ಅನುಕೂಲವಾಗುವ ಕೆಲಸಗಳಿಗೆ ಚಾಲನೆ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುಸುಮಾ ಡಿ.ಕೆ.ರವಿ, ಸಂಚಾಲಕ ಶಶಾಂಕ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್, ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್, ಗ್ರಾಮಪಂಚಾಯಿತಿ ಅಧ್ಯಕ್ಷೆ, ಭಾಗ್ಯಮ್ಮ ಚಿಕ್ಕರಾಜು, ಸದಸ್ಯ ಟಿ.ಹನುಮಂತರಾಯಪ್ಪ, ಟಿಎಪಿಎಂಎಸ್ ಮಾಜಿ ಅಧ್ಯಕ್ಷ ಹೊನ್ನಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಲತಾವೆಂಕಟೇಶ್, ಶ್ರೀಗಿರಿಪುರ ಪ್ರಕಾಶ್, ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.