ಕಾಂಗ್ರೆಸ್ ಸರ್ಕಾರ ಪ್ರತಿ ಜಿಲ್ಲೆಗೂ ತೆರಳಿ ಆಯಾ ಭಾಗದ ರೈತರ ಹಾಗೂ ರೈತರಿಗಾಗಿ ಆಗಿರುವ ನಷ್ಟವನ್ನು ಅವಲೋಕಿಸಿ ಪರಿಹಾರ ಒದಗಿಸುವ ಕೆಲಸ ಮಾಡಬೇಕಿದೆ: ಮಾಜಿ ಸಚಿವ ಅರವಿಂದ ಲಿಂಬಾವಳಿ
ಸಂಕೇಶ್ವರ(ನ.22): ರಾಜ್ಯದ ಭೀಕರ ಬರಗಾಲ ಉಂಟಾಗಿದ್ದರೂ ಸಹ ಸರ್ಕಾರ ರೈತರ ನೆರವಿಗೆ ನಿಲ್ಲದೇ ಇರುವುದು ದುರಾದೃಷ್ಟಕರ ಸಂಗತಿಯಾಗಿದ್ದು, ಕೇವಲ ಗ್ಯಾರಂಟಿ ಯೋಜನೆಗಳ ಪ್ರಚಾರ ಮತ್ತು ಅಧಿಕಾರ ರಾಜಕಾರಣದಲ್ಲಿ ಕಾಲ ಕಳೆಯುತ್ತಿರುವ ದುರದೃಷ್ಟಕರ ಸಂಗತಿ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಬಿಜೆಪಿ ಬರ ನಿರ್ವಹಣೆ ನಿಮಿತ್ತ ಪಟ್ಟಣದ ಎಪಿಎಂಸಿ ಹಾಗೂ ತಾಲೂಕು ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಸಗಟು ಉಗ್ರಾಣಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಪ್ರತಿ ಜಿಲ್ಲೆಗೂ ತೆರಳಿ ಆಯಾ ಭಾಗದ ರೈತರ ಹಾಗೂ ರೈತರಿಗಾಗಿ ಆಗಿರುವ ನಷ್ಟವನ್ನು ಅವಲೋಕಿಸಿ ಪರಿಹಾರ ಒದಗಿಸುವ ಕೆಲಸ ಮಾಡಬೇಕಿದೆ ಎಂದರು.
ಮೋದಿ ಸರ್ಕಾರದ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ: ಲಿಂಬಾವಳಿ ಆಕ್ರೋಶ
ರಾಜ್ಯ ಬಿಜೆಪಿ ನಿಯೋಗ ರಾಜ್ಯದ್ಯಾಂತ ಸಂಚರಿಸಿ ಬರಗಾಲದಿಂದ ಉಂಟಾಗಿರುವ ಸಮಸ್ಯೆಗಳನ್ನು ಅಧಿವೇಶನದಲ್ಲಿ ಚರ್ಚಿಸುವ ಜೊತೆಗೆ ರಾಜ್ಯ ಸಂಸದರ ಮೂಲಕ ಕೇಂದ್ರಕ್ಕೂ ಕಳುಹಿಸಿ ಕೊಡಲಿದೆ ಎಂದರು.
ಸಂಸದ ಅಣ್ಣಾಸಾಹೇಬ್ ಜೊಲ್ಲೆ ಮಾತನಾಡಿ, ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಬರಪೀಡಿತ ಪ್ರದೇಶಗಳ ಸ್ಥಿತಿ ಬರತಕ್ಕಂತ ದಿನಗಳಲ್ಲಿ ಇನ್ನು ಚಿಂತಾಜನಕವಾಗಲಿದ್ದು, ಬರಗಾಲದಿಂದ ಉಂಟಾಗಬಹುದಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ರಾಜ್ಯಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಮಾಜಿ ಸಚಿವೆ ಶಾಸಕಿ ಶಶಿಕಲಾ ಜೊಲ್ಲೆ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪವನ ಕತ್ತಿ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜೇಶ ನೇರಲಿ, ಬಿಜೆಪಿ ಹುಕ್ಕೇರಿ ಮಂಡಳ ಅಧ್ಯಕ್ಷ ರಾಚಯ್ಯ ಹಿರೇಮಠ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡಿ, ಮುಖಂಡರಾದ ರೋಹಣ ನೇಸರಿ, ಪ್ರಶಾಂತ ಪಾಟೀಲ, ಗಿರೀಶ ಪಾಟೀಲ, ಸಚಿನ್ ಸಪಾಟೆ, ಪವನ ಪಾಟೀಲ ಸೇರಿದಂತೆ ಇತರರು ಇದ್ದರು.