Road Accident: ವೇಗವಾಗಿ ಬಂದ ನೀರಿನ ಟ್ಯಾಂಕರ್‌ ಬೈಕಿಗೆ ಡಿಕ್ಕಿಯಾಗಿ ಮಾಜಿ ಪತ್ರಕರ್ತ ಸಾವು

By Kannadaprabha News  |  First Published Feb 9, 2022, 4:18 AM IST

*   ಕುಮಾರಸ್ವಾಮಿ ಲೇಔಟ್‌ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ
*   ಪತ್ರಿಕೋದ್ಯಮ ತೊರೆದು ತಮ್ಮದೇ ಸ್ವಂತ ಪ್ರಿಟಿಂಗ್‌ ಪ್ರೆಸ್‌ ಆರಂಭಿಸಿದ್ದ ಗಿರೀಶ್‌
*   ಘಟನೆ ಬಳಿಕ ಟ್ಯಾಂಕರ್‌ ಚಾಲಕ ಪರಾರಿ


ಬೆಂಗಳೂರು(ಫೆ.09):  ನೀರಿನ ಟ್ಯಾಂಕರ್‌ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನ(Bike) ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ(Death) ಘಟನೆ ಕುಮಾರಸ್ವಾಮಿ ಲೇಔಟ್‌ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೂರ್ಣಪ್ರಜ್ಞಾ ಲೇಔಟ್‌ ನಿವಾಸಿ ಗಿರೀಶ್‌(50) ಮೃತ ಸವಾರ. ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮಾಜಿ ಪತ್ರಕರ್ತರೂ(Journalist) ಆಗಿದ್ದ ಗಿರೀಶ್‌ ಸಂಜೆವಾಣಿ, ಉದಯವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಬಳಿಕ ಕೆಲ ವರ್ಷಗಳ ಹಿಂದೆ ಪತ್ರಿಕೋದ್ಯಮ(Journalism) ತೊರೆದು ತಮ್ಮದೇ ಸ್ವಂತ ಪ್ರಿಟಿಂಗ್‌ ಪ್ರೆಸ್‌ ಆರಂಭಿಸಿದ್ದರು. ಇತ್ತೀಚೆಗೆ ಬನಶಂಕರಿ 6ನೇ ಹಂತದಲ್ಲಿ ಹೊಸ ಮನೆ ಕಟ್ಟಿಸುತ್ತಿದ್ದರು.

ಸೋಮವಾರ ಮಧ್ಯಾಹ್ನ 1.40ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ನಿರ್ಮಾಣ ಹಂತದ ಮನೆಯತ್ತ ತೆರಳುತ್ತಿದ್ದರು. ಈ ವೇಳೆ ಮಾರ್ಗದ ಚನ್ನಸಂದ್ರ ಲಿಂಕ್‌ ರಸ್ತೆಯ ಬಿಡಿಎ ಸ್ಪೆಕ್ಯುಲರ್‌ ಪಾರ್ಕ್ ಬಳಿ ಹೋಗುವಾಗ ಎದುರಿನಿಂದ ವೇಗವಾಗಿ ಬಂದ ನೀರಿನ ಟ್ಯಾಂಕರ್‌ ಚಾಲಕ ಏಕಾಏಕಿ ಟ್ಯಾಂಕರನ್ನು ಬಲಕ್ಕೆ ತಿರುಗಿಸಿದ್ದಾನೆ. ಈ ವೇಳೆ ಟ್ಯಾಂಕ್‌ ಗಿರೀಶ್‌ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಗಿರೀಶ್‌ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಗಂಭೀರ ಪೆಟ್ಟು ಬಿದ್ದು ಕಿವಿಯಲ್ಲಿ ರಕ್ತಸ್ರವಾಗಿತ್ತು. ಘಟನೆ ಬಳಿಕ ಟ್ಯಾಂಕರ್‌ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Latest Videos

undefined

ಹೈಕೋರ್ಟ್‌ ಛೀಮಾರಿ ಹಾಕಿದರೂ ಬುದ್ಧಿ ಕಲಿಯದ BBMP: ಬೆಂಗಳೂರಲ್ಲಿ ರಸ್ತೆಗುಂಡಿಗೆ ಮತ್ತೊಂದು ಬಲಿ!

ಸ್ಥಳೀಯರು ಗಾಯಾಳು ಗಿರೀಶ್‌ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೋಯ್ದು ದಾಖಲಿಸಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಮಂಗಳವಾರ ಸಂಜೆ 4ರ ಸುಮಾರಿಗೆ ಗಿರೀಶ್‌ ಮೃತಪಟ್ಟಿದ್ದಾರೆ. ಟ್ಯಾಂಕರ್‌ ಜಪ್ತಿ ಮಾಡಿದ್ದು, ಚಾಲಕನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಕುಮಾರಸ್ವಾಮಿ ಲೇಔಟ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿರಿಯೂರು ಬಳಿ ಮರಕ್ಕೆ ಗುದ್ದಿದ ಕಾರು: ಮೂವರು ಸಾವು

ಹಿರಿಯೂರು: ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರು ಮೂಲದ ಒಂದೇ ಕುಟುಂಬದ ಮೂವರು ಅಸುನೀಗಿರುವ ಘಟನೆ ಚಿತ್ರದುರ್ಗ(Chitradurga) ಜಿಲ್ಲೆಯ ಹಿರಿಯೂರು ತಾಲೂಕಿನ ಬಿರೇಹನಳ್ಳಿ ಬಳಿ ಮಂಗಳವಾರ ಮುಂಜಾನೆ ನಡೆದಿದೆ.

ಮೃತಪಟ್ಟವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ವಿಶಾಲಾಕ್ಷಿ (70), ಸುಬೀಕ್ಷಾ (17), ರೇಣುಕಾದೇವಿ(39) ಎಂದು ಗುರುತಿಸಲಾಗಿದೆ. 13 ವರ್ಷದ ಪ್ರತೀಕ್ಷಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಭದ್ರಾವತಿಯಲ್ಲಿ ನಡೆದ ಮದುವೆ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ಸಾಗುವಾಗ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಒಟ್ಟು ಐದು ಮಂದಿ ಪ್ರಯಾಣಿಸುತ್ತಿದ್ದರು. ಕಾರು ಬೀರೇನಹಳ್ಳಿ ಬಳಿ ಬಂದಾಗ ಚಾಲಕರ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತವಾದ ರಭಸಕ್ಕೆ ಸ್ಥಳದಲ್ಲಿಯೇ ಮೂವುರ ಅಸು ನೀಗಿದ್ದಾರೆ. ಈ ಸಂಬಂಧ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಸುಭಿಕ್ಷಾ ಆರ್‌ಆರ್‌ ನಗರದ ಸ್ವರ್ಗರಾಣಿ ಕಾಲೇಜಿನ ಪಿಯು ಉಪನ್ಯಾಸ ಮಾಡುತ್ತಿದ್ದರು.

Shivamogga: ಮಾಚೇನಹಳ್ಳಿ ಬಳಿ ಲಾರಿ, ಕಾರಿನ ಮಧ್ಯೆ ಭೀಕರ ಅಪಘಾತ: ಇಬ್ಬರ ದುರ್ಮರಣ

ಕಾರು-ಬೈಕ್‌ ಅಪಘಾತ: ಸವಾರ ಸಾವು

ಕಾರ್ಕಳ(Karkala): ಬೈಕ್‌ ಹಾಗೂ ಕಾರು ಮಧ್ಯೆ ಅಪಘಾತವಾಗಿ ಬೈಕ್‌ ಸವಾರ ಮೃತಪಟ್ಟಘಟನೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಸೀಡ್‌ ಫಾಮ್‌ರ್‍ ಬಳಿ ಫೆ. 6ರಂದು ಸಂಭವಿಸಿದೆ. ಮೂಡುಬಿದಿರೆ ಮೂಡು ಮಾರ್ನಾಡಿನ ತಂಡ್ರಕೆರೆ ಹೊಲಜಾಲ್‌ ಬೈಲ್‌ ದಿನೇಶ್‌ಗೌಡ (32) ಮೃತಪಟ್ಟವರು. ಕಾರ್ಕಳದಿಂದ ಮೂಡುಬಿದಿರೆಯ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಬೈಕ್‌ ಮೂಡುಬಿದಿರೆಯಿಂದ ಕಾರ್ಕಳ ಕಡೆಗೆ ರಾಜೀವ್‌ ಎಂಬುವವರು ಚಲಾಯಿಸುತ್ತಿದ್ದ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದ ಪರಿಣಾಮ ಬೈಕ್‌ ಸವಾರನಿಗೆ ತೀವ್ರವಾದ ಪೆಟ್ಟಾಗಿತ್ತು. ಚಿಕಿತ್ಸೆಗಾಗಿ ತಕ್ಷಣವೇ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಅಪಘಾತ: ಮಹಿಳೆ ಸಾವು

ಬಂಟ್ವಾಳ(Bantwal): ಅಮ್ಟೂರು ಸಮೀಪದ ಸುಬ್ಬಕೋಡಿಯಲ್ಲಿ ಕಾರು ಹಾಗೂ ಆಟೋ ರಿಕ್ಷಾ ಮಧ್ಯೆ ಡಿಕ್ಕಿ ಸಂಭವಿಸಿ ಮಹಿಳೆಯೊಬ್ಬರು ಆಟೋದಿಂದ ಹೊರಗೆ ಎಸೆಯಲ್ಪಟ್ಟು ಮೃತಪಟ್ಟಘಟನೆ ನಡೆದಿದೆ. ಕಲ್ಲಡ್ಕ ಮುರಬೈಲು ನಿವಾಸಿ ದೇವಕಿ (70) ಮೃತಪಟ್ಟವರು. ಘಟನೆಯಲ್ಲಿ ಆಟೋ ಚಾಲಕ ಭೋಜ ಮೂಲ್ಯ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿವೆ. ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!