ನಾನು ಪಕ್ಷಾಂತರ ಮಾಡಿಲ್ಲ, ನನ್ನ ಜೆಡಿಎಸ್ ಪಕ್ಷದಿಂದ ಡಿಸ್ಮಿಸ್ ಮಾಡಿದ್ದರು| ಎಐಪಿಜೆಡಿ ಪಕ್ಷ ಕಟ್ಟಿದೆ, ಇದಾದ ಮೇಲೆ ಸೋನಿಯಾ ಗಾಂಧಿ ಕರೆದು ನಿಮ್ಮ ಪಕ್ಷ ನಮ್ಮ ಜೊತೆ ಮರ್ಜ್ ಮಾಡಿಕೊಳ್ಳಿ ಅಂತ ಹೇಳಿದ್ದರು| ಯಾರಿಗೆ ಇತಿಹಾಸ ಗೊತ್ತಿಲ್ಲ ಅವರು ಇತಿಹಾಸ ನಿರ್ಮಾಣ ಮಾಡಕ್ಕೆ ಆಗಲ್ಲ| ನಾನು ಯಾವತ್ತೂ ಅಧಿಕಾರದ ಹಿಂದೆ ಹೋದವನು ಅಲ್ಲ ಎಂದ ಸಿದ್ದರಾಮಯ್ಯ|
ಚಿಕ್ಕೋಡಿ(ನ.30): 18 ತಿಂಗಳ ನಂತರ ಕರ್ನಾಟಕದಲ್ಲಿ ಮತ್ತೆ ಚುನಾವಣೆ ಬಂದಿದೆ. ಚುನಾವಣೆಗೆ ನೂರಾರು ಕೋಟಿ ಹಣ ಖರ್ಚಾಗುತ್ತದೆ. ಇದು ನಿಮ್ಮ ಹಣ ತೆರಿಗೆ ಹಣವಾಗಿದೆ. ಇವರಿಗೆ ರಾಜಕೀಯ ಸ್ವಾರ್ಥ, ಅಧಿಕಾರ ಮುಖ್ಯ ಜನರ ಬಗ್ಗೆ ಕಾಳಜಿ ಇಲ್ಲ ಎಂದು ಅನರ್ಹ ಶಾಸಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹರಿಹಾಯ್ದಿದ್ದಾರೆ.
undefined
ಶನಿವಾರ ಕಾಗವಾಡ ಮತಕ್ಷೇತ್ರದ ಉಗಾರ ಖುರ್ದ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಪರ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಅವರು, ಕಳೆದ ಚುನಾವಣೆಗೂ ಮುಂಚೆ ಅನರ್ಹ ಶಾಸಕ ಶ್ರೀಮಂತ ಪಾಟೀಲ್‌ರನ್ನು ನನ್ನ ಹತ್ರ ಕರೆದುಕೊಂಡು ಬಂದಿದ್ದರು. ಆಗಲೇ ಈ ಆಸಾಮಿ ಮೇಲೆ ನನಗೆ ಅನುಮಾನ ಇತ್ತು ಎಂದು ಹೇಳಿದ್ದಾರೆ.
ರಮೇಶ ಕುಮಾರ್ ಅವರ ಆದೇಶನ್ನ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಜನರನ್ನ ತಪ್ಪು ದಾರಿಗೆ ಎಳಿಯುವ ಪ್ರಯತ್ನ ಮಾಡಬಾರದು. ರಮೇಶ ಕುಮಾರ್ ಅವರ ಅನರ್ಹರು ಆದೇಶ ಸರಿ ಇದೆ ಅಂತ ಸುಪ್ರೀಂ ಹೇಳಿದೆ, ಅನರ್ಹರು ಅಂದ್ರೆ ಎಂಎಲ್ಎ ಆಗಕ್ಕೆ ನಾಲಾಯಾಕ್ ಅಂತ ಅರ್ಥ ಎಂದು ವಾಗ್ದಾಳಿ ನಡೆಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಶ್ರೀಮಂತ ಪಾಟೀಲ್ ಬಿಜೆಪಿ ಕಾರಿನಲ್ಲಿ ಓಡಿ ಹೋಗಿ ಚೆನೈನ ಆಸ್ಪತ್ರೆಯಲ್ಲಿ ಹೋಗಿ ದಾಖಲಾಗಿದ್ದರು. ನಂತರ ಮುಂಬಯಿಗೆ ಹೋಗಿದ್ದರು, ಇವರು ದಾಖಲಾದ ಆಸ್ಪತ್ರೆಯಲ್ಲಿ ಕಾರ್ಡಿಯೊಲಾಜಿಸ್ಟ್ ಇರಲಿಲ್ಲ ಎಂದು ಹೇಳಿದ್ದಾರೆ.
ನಾನು ಪಕ್ಷಾಂತರ ಮಾಡಿಲ್ಲ, ನನ್ನ ಜೆಡಿಎಸ್ ಪಕ್ಷದಿಂದ ಡಿಸ್ಮಿಸ್ ಮಾಡಿದ್ದರು. ನಂತರ ಎಐಪಿಜೆಡಿ ಪಕ್ಷ ಕಟ್ಟಿದೆ, ಇದಾದ ಮೇಲೆ ಸೋನಿಯಾ ಗಾಂಧಿ ಕರೆದು ನಿಮ್ಮ ಪಕ್ಷ ನಮ್ಮ ಜೊತೆ ಮರ್ಜ್ ಮಾಡಿಕೊಳ್ಳಿ ಅಂತ ಹೇಳಿದ್ದರು. ಯಾರಿಗೆ ಇತಿಹಾಸ ಗೊತ್ತಿಲ್ಲ ಅವರು ಇತಿಹಾಸ ನಿರ್ಮಾಣ ಮಾಡಕ್ಕೆ ಆಗಲ್ಲ. ನಾನು ಯಾವತ್ತೂ ಅಧಿಕಾರದ ಹಿಂದೆ ಹೋದವನು ಅಲ್ಲ ಎಂದು ತಿಳಿಸಿದ್ದಾರೆ.
ಯಡಿಯೂರಪ್ಪನಗೆ ಮುಂಬಾಗಿಲಿನಿಂದ ಬಂದು ಗೊತ್ತಿಲ್ಲ, 17 ಜನರನ್ನ ರಾಜೀನಾಮೆ ಕೊಡಿಸಿ ಹಿಂಬಾಗಿಲಿನಿಂದ ಬಂದು ಅಧಿಕಾರ ಹಿಡಿದಿದ್ದಾರೆ. ಗೋಕಾಕನಲ್ಲಿ ಜಾತಿ ಹೆಸರಿನ ಮೇಲೆ ಮತ ಕೇಳ್ತಾರೆ, ಮಾನಗೆಟ್ಟು, ಲಜ್ಜೆಗೆಟ್ಟು ಪ್ರಚಾರ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮೇಲೆ ಇರುವವರು ಕೆಳಕ್ಕೆ ಬರಲೇಬೇಕು. ಕಾಂಗ್ರೆಸ್ ಮುಕ್ತ ಪಕ್ಷ ಮಾಡ್ತಿವಿ ಅಂತಾರೆ, ಕಾಂಗ್ರೆಸ್ ಪಕ್ಷ ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದೆ, ಬಿಜೆಪಿ ಕೊಡುಗೆ ದೇಶಕ್ಕೆ ಏನು ಎಂದು ಪ್ರಶ್ನಿಸಿದ್ದಾರೆ.
ಇಂದಿರಾಗಾಂಧಿ, ರಾಜೀವ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಪ್ರಜ್ಞಾ ಸಿಂಗ್ ಹೇಳ್ತಾರೆ ನಾತುರಾಮ ಗೋಡ್ಸೆ ದೇಶ ಭಕ್ತ, ಅವನು ರಾಷ್ಟ್ರಪಿತ ಮಹಾತ್ಮ ಗಾಂಧಿಯವನ್ನ ಕೊಂದನು, ಪ್ರಜ್ಞಾ ಸಿಂಗ್ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಹೇಳ್ತಾರೆ ನಾನು ದೇಶ ಭಕ್ತ, ಆದರೆ ಇವರೆಲ್ಲ ಡೋಂಗಿಗಳು, ಆರು ವರ್ಷದಲ್ಲಿ ಜಿಡಿಪಿ ಶೇ. 4.5 ರಷ್ಟು ಕೆಳಗೆ ಇಳಿದೆ, ಇದಕ್ಕೆಲ್ಲ ಮೋದಿಯವರೇ ನೀತಿಗಳೇ ಕಾರಣಗಳಾಗಿವೆ. 9.3% ನಿರುದ್ಯೋಗದ ಬೆಳವಣಿಗೆಯಾಗಿದೆ, 2010ರಲ್ಲಿ ಯಡಿಯೂರಪ್ಪ ಮೇಲ್ಮನೆಯಲ್ಲಿ ಸಾಲಮನ್ನಾ ಮಾಡಿ ಅಂದ್ರೆ, ನಮ್ಮ ಹತ್ರ ನೋಟ್ ಪ್ರಿಂಟ್ ಮಾಡೋ ಮಷಿನ್ ಇದೆಯಾ ಅಂತ ಕೇಳಿದ್ರು, ನರೇಂದ್ರ ಮೋದಿ 15 ಲಕ್ಷ ಅಕೌಂಟಿಂಗೆ ಹಾಕ್ತಿನಿ ಅಂದ್ರು 15 ಪೈಸೆ ಆದರೂ ಹಾಕಿದ್ದಾರಾ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರವಾಹ ಬಂದಾಗ ಶ್ರೀಮಂತ ಪಾಟೀಲ್ ಮುಂಬಯಿ ಹೋಟೆಲ್ ನಲ್ಲಿ ಇದ್ರು, ಸುಪ್ರೀಂ ಕೋರ್ಟ್ ನಂತರ ಇಗ ನಿಮ್ಮ ಜನತಾ ನ್ಯಾಯಾಲಯದಲ್ಲಿ ಕೇಸ್ ಬಂದಿದೆ. 5 ನೇ ತಾರೀಖು ತೀರ್ಪು ನೀಡಿ ಶ್ರೀಮಂತ ಪಾಟೀಲ್ ಮನೆಗೆ ಕಳಿಸಿ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿ ಆಗಕ್ಕೆ ಶ್ರೀಮಂತ ಪಾಟೀಲ್ ಗೆ ಟಿಕೆಟ್ ನೀಡಿದ್ದಾರೆ. ರಾಜು ಕಾಗೆ ಅನಿವಾರ್ಯವಾಗಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ನೀಡಿದ ಎಲ್ಲ ಆಶ್ವಾಸನೆಗಳನ್ನ ಈಡೇರಿಸಿದ್ದೇವೆ. ಮತ್ತೆ ಅಧಿಕಾರಕ್ಕೆ ಬಂದ್ರೆ 7 ಕೆಜಿ ಬದಲು 10 ಕೆಜಿ ಅಕ್ಕಿ ಕೊಡುತ್ತೇವೆ. ಕಬ್ಬು ಬೆಳೆಗಾರರಿಗೆ 1800 ಕೋಟಿ ರು. ಕೊಟ್ಟ ಏಕೈಕ ಸಿಎಂ ನಾನಾಗಿದ್ದೇನೆ ಎಂದು ತಿಳಿಸಿದ್ದಾರೆ.
ನಮ್ಮ ಯುವಕರು ಮೋದಿ ಮೋದಿ ಮೋದಿ ಅಂತಾರೆ, ಏನು ಮಾಡಿದ್ದಾರೆ ಮೋದಿ. ಇದೇ ಅಮಿತ್ ಶಾ ಯುವಕರಿಗೆ ಪಕೋಡ ಮಾರಕ್ಕೆ ಹೋಗಿ ಅಂತಾರೆ, ಗರಿಬಿ ಹಾಟಾವೋ ಎಂದು ಹೇಳಿದವರು ಇಂದಿರಾ ಗಾಂಧಿ ಮಾತ್ರ, 2015ರ ಜಾಗತಿಕ ಹಸಿವು ಸೂಚ್ಯಂಕ ರಿಪೋರ್ಟ್‌ನಲ್ಲಿ 93 ರ ಸ್ಥಾನದಲ್ಲಿತ್ತು, ಈಗ 102 ನೇ ಸ್ಥಾನಕ್ಕೆ ಹೋಗಿದ್ದೇವೆ, ಆದರೆ ನರೇಂದ್ರ ಮೋದಿ ಅಮೆರಿಕಾಕ್ಕೆ ಹೋಗಿ ನಮ್ಮ ದೇಶ ಸುದಿಕ್ಷವಾಗಿದೆ ಅಂತಾರೆ. ಇವರಿಗೆ ನಾಚಿಕೆ ಆಗಲ್ವಾ,ನಮ್ಮ ದೇಶ ಆಳೋಕ್ಕೆ ಮೋದಿಯವರು ಲಾಯಕ್ ಅಲ್ಲ ಎಂದು ಹೇಳಿದ್ದಾರೆ.
ಟಿಪ್ಪು ಮುಸ್ಲಿಂ ಜನಾಂಗಕ್ಕೆ ಸೇರಿದ್ದರಿಂದ ಅವರ ಜಯಂತಿ ನಿಲ್ಲಿಸಿದ್ದಾರೆ. ಇದೇ ಯಡಿಯೂರಪ್ಪ ಈ ಹಿಂದೆ ಟಿಪ್ಪು ಪೇಟಾ ಹಾಕಿಕೊಂಡು, ಶೋಭಾ ಕರಂದ್ಲಾಜೆನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಜಯಂತಿ ಆಚರಿಸಿದ್ದರು ಎಂದು ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.