
ಬೆಳಗಾವಿ(ಏ.10): ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಗೆಲ್ಲ ನಾವು ಉತ್ತರ ಕೊಡಬೇಕಾ? ಮೊದಲೆಲ್ಲ ಯಾರ ಹೆಸರು ಓಡಾಡುತ್ತಿತ್ತು, ಸಿ.ಟಿ.ರವಿ ಯಾವಾಗಲೂ ಸುಳ್ಳೆ ಹೇಳೋದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿ.ಟಿ. ರವಿ ವಿರುದ್ಧ ಹರಿಹಾಯ್ದಿದ್ದಾರೆ.
ಇಂದು(ಶನಿವಾರ) ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಇವತ್ತು ಲಕ್ಷ್ಮೀ ಹೆಬ್ಬಾಳಕರ್ ಅವರ ಗ್ರಾಮೀಣ ಮತಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದೇನೆ. ನಮ್ಮ ನಿರೀಕ್ಷೆಗೂ ಮೀರಿ ಜನರು ರೆಸ್ಪಾನ್ಸ್ ಮಾಡುತ್ತಿದ್ದಾರೆ. ನೂರಕ್ಕೆ ನೂರು ನಾವು ಇಲ್ಲಿ ಗೆದ್ದು ಇತಿಹಾಸ ಬರೆಯುತ್ತೇವೆ ಎಂದು ಹೇಳಿದ್ದಾರೆ.
'ಒತ್ತಾಯ ಪೂರ್ವಕ ಸತೀಶರನ್ನು ಕಣಕ್ಕಿಳಿಸಿದ ಸಿದ್ದು,ಡಿಕೆಶಿ'
ಕಾಂಗ್ರೆಸ್ ಮುಳುಗುವ ಹಡಗು ಎಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಎಸ್‌ವೈ ಅವರೇ ಸದ್ಯ ಮುಳುಗುತ್ತಿದ್ದಾರೆ. ಅವರು ಕುಳಿತಿರುವ ಹಡಗೇ ಈಗ ಮುಳುಗುತ್ತಿದೆ. ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಏನು ಹೇಳ್ತಾರೆ ಅಂತ ಗೊತ್ತಾ ನಿಮಗೆ ಎಂದು ಮಾಧ್ಯಮಗಳಿಗೆ ಮರು ಪ್ರಶ್ನೆ ಮಾಡಿದ್ದಾರೆ.