
ತುಮಕೂರು: ‘ನನಗೆ ಈಗ 80 ವರ್ಷ, ಆರೋಗ್ಯವಾಗಿದ್ದೇನೆ. ಎಷ್ಟು ವರ್ಷ ಬದುಕಿರುತ್ತೇನೆ ಅಂತಾ ಗೊತ್ತಿಲ್ಲ. ಆದರೆ, ನಾನು ಮುಂದಿನ ಚುನಾವಣೆಗೆ ನಿಲ್ಲಬಾರದು ಅಂತಾ ಅಂದುಕೊಂಡಿದ್ದೇನೆ. ಕಾರಣ ವಯಸ್ಸಾಯಿತು ಅಂತಲ್ಲ. ಚುನಾವಣಾ ವ್ಯವಸ್ಥೆ ಹದಗೆಟ್ಟಿದೆ, ಬಹಳ ದುಬಾರಿಯಾಗಿದೆ ಎಂಬ ಕಾರಣಕ್ಕಾಗಿ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾನ ಮನಸ್ಕರ ವೇದಿಕೆ ವತಿಯಿಂದ ನಡೆದ ವೀರಣ್ಣ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇಂದಿನ ಚುನಾವಣೆ ವ್ಯವಸ್ಥೆ ಬಹಳ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ಅಭಿಪ್ರಾಯ ನನ್ನದು. ಆದರೆ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ವ್ಯವಸ್ಥೆ ಸುಧಾರಣೆಯಾಗದೆ ನಾನು ಪ್ರಾಮಾಣಿಕ ಎಂದರೆ ಆತ್ಮವಂಚನೆಯಾಗುತ್ತದೆ ಎಂದರು.
ನನಗೆ ಲೋಕಸಭಾ ಚುನಾವಣೆಗೆ ನಿಲ್ಲಲು ಆಫರ್ ಬಂದಿತ್ತು, ತಿರಸ್ಕರಿಸಿದೆ. ಈ ಹಿಂದೆ 1991ರಲ್ಲಿ ಕೊಪ್ಪಳದಿಂದ ಲೋಕಸಭೆಗೆ ನಿಂತಿದ್ದೆ. 10 ಸಾವಿರ ಮತಗಳಿಂದ ಸೋತಿದ್ದೆ. ಆಗ ರಾಮಕೃಷ್ಣ ಹೆಗಡೆಯವರು ಕೂಡ ಸೋತರು. ಆವತ್ತೆ ನಾನು ಲೋಕಸಭೆಗೆ ಮತ್ತೆ ನಿಲ್ಲಬಾರದು ಎಂದು ತೀರ್ಮಾನ ಮಾಡಿಬಿಟ್ಟೆ. ಇನ್ನು ಮುಂದೆ ಲೋಕಸಭೆಗೂ ನಿಲ್ಲೊಲ್ಲ, ವಿಧಾನಸಭೆಗೂ ನಿಲ್ಲೊಲ್ಲ ಎಂದರು.
ಚುನಾವಣೆಯಲ್ಲಿ ಚುನಾವಣಾ ಆಯೋಗದವರು ಹೇಳಿದಷ್ಟು ಹಣ ಮಾತ್ರ ಖರ್ಚು ಮಾಡಬೇಕು. ಆದರೆ, ಅದು ಆಗುತ್ತಿಲ್ಲ. 1983ರ ಚುನಾವಣೆಗೂ, 2023ರ ಚುನಾವಣೆಗೂ ಬಹಳಷ್ಟು ವ್ಯತ್ಯಾಸವಿದೆ. ಚುನಾವಣೆಯಲ್ಲಿ ಅಕ್ರಮವಾಗಿ ಹಣ ಖರ್ಚು ಮಾಡದಂತೆ ಹೋರಾಟ ಮಾಡಬೇಕು. ಇದಕ್ಕೆ ಜನರು ಕೂಡ ಸಹಕಾರ ನೀಡಬೇಕು. ಇಂದು ಚುನಾವಣಾ ವ್ಯವಸ್ಥೆ ಹದಗೆಟ್ಟಿದ್ದು, ಅದರಲ್ಲಿ ಸುಧಾರಣೆ ತರುವುದೇ ನಾವು ವೀರಣ್ಣನವರಿಗೆ ನೀಡುವ ನಿಜವಾದ ಶ್ರದ್ಧಾಂಜಲಿ ಎಂದು ತಿಳಿಸಿದರು.