ಕೇಂದ್ರ ಸರ್ಕಾರದ ವೈಫಲ್ಯದಿಂದ ಭಾರತಕ್ಕೆ ಕೊರೋನಾ ಆಗಮನ| ಮುಂಸ್ಲಿಮರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾಜಿನ ಸಿಎಂ ಸಿದ್ದರಾಮಯ್ಯ ಆರೋಪ| ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಾಗಡಿ ಕ್ಷೇತ್ರದಿಂದ ಎಚ್.ಸಿ.ಬಾಲಕೃಷ್ಣ ಅವರನ್ನು ಗೆಲ್ಲಿಸಿ. ನಾನು ಈ ಸಂದರ್ಭದಲ್ಲಿ ರಾಜಕೀಯ ಭಾಷಣ ಮಾಡುವುದಿಲ್ಲ: ಸಿದ್ದರಾಮಯ್ಯ|
ಕುದೂರು/ರಾಮನಗರ: (ಮೇ.24): ಪ್ರಧಾನಿ ನರೇಂದ್ರ ಮೋದಿ ಅವರ ಬೇಜವಾಬ್ದಾರಿಯಿಂದಾಗಿ ಭಾರತಕ್ಕೆ ಕೊರೋನಾ ಬಂದಿದೆ. ಮೊದಲೇ ಹಾರಾಡುವ ವಿಮಾನಗಳನ್ನು ನಿಲ್ಲಿಸಿದ್ದರೆ ದೇಶಕ್ಕೆ ಇಷ್ಟು ಕಷ್ಟದ ದಿನಗಳು ಬರುತ್ತಿರಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕುದೂರು ಗ್ರಾಮದ ಶ್ರೀ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಮರಿಗೆ ಆಹಾರದ ಕಿಟ್‌ಗಳನ್ನು ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಕೊರೋನಾ ವೈರಸ್ ತಬ್ಲಿಘಿಗಳಿಂದ ಹರಡಿತು ಎಂದು ಅಪಪ್ರಚಾರ ಮಾಡಿದರು. ಚೀನಾದಲ್ಲಿ, ಇಟಲಿಯಲ್ಲಿ, ಅಮೆರಿಕದಲ್ಲಿ ತಬ್ಲಿಘಿಗಳು ಇದ್ದಾರಾ? ಸುಮ್ಮನೆ ಒಂದು ವರ್ಗದ ಮೇಲೆ ಅಪಪ್ರಚಾರ ಮಾಡಿದರು ಎಂದು ಟೀಕಿಸಿದರು.
ಕೊರೋನಾ ಭೀತಿ ನಡುವೆ ರಾಜಕೀಯ ಕ್ರಾಂತಿ: ಎಚ್‌ಡಿಕೆ, ಡಿಕೆಶಿ ಹಣಿಯಲು ಗೇಮ್ ಪ್ಲಾನ್
ನಾನೇ ಮುಖ್ಯಮಂತ್ರಿ ಆಗಿದ್ದರೆ ರೈತರಿಗೆ ಅನ್ಯಾಯ ಆಗದ ಹಾಗೆ ನೋಡಿಕೊಳ್ಳುತ್ತಿದ್ದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಬಡವರಿಗೆ ಏಳು ಕೆಜಿ ಅಕ್ಕಿ ಕೊಡುತ್ತಿದ್ದೆ. ಈಗ ಐದು ಕೆಜಿ ಕೊಡುತ್ತಿದ್ದಾರೆ. ಇನ್ನೆರೆಡು ಕೆಜಿ ಹೆಚ್ಚು ಅಕ್ಕಿ ಕೊಟ್ಟಿದ್ದರೆ ಯಡಿಯೂರಪ್ಪನ ಅಪ್ಪನ ಮನೆ ಗಂಟೇನು ಹೋಗುತ್ತಿತ್ತು ಎಂದು ಕಿಡಿ ಕಾರಿದರು.
ಬಿಜೆಪಿ ಪಕ್ಷವನ್ನು ನಂಬಬೇಡಿ, ಜೆಡಿಎಸ್ ಪಕ್ಷದ ಬಗ್ಗೆ ಎಚ್ಚರದಿಂದಿರಿ. ರಾಜ್ಯದಲ್ಲಿ ಕೊರೋನಾ ಸಲುವಾಗಿ ಏನೆಲ್ಲಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆಯೋ ಅದಕ್ಕೆಲ್ಲ ಕಾಂಗ್ರೆಸ್ ಪಕ್ಷ ಕಾರಣ. ನಾವು ಸಕಾಲದಲ್ಲಿ ಎಚ್ಚರಿಸಿದ ಪರಿಣಾಮ ಸರ್ಕಾರ ಕೆಲಸ ಮಾಡಿತು ಎಂದು ಹೇಳಿದರು.
ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಮಾಗಡಿ ತಾಲೂಕಿನಾದ್ಯಂತ ರೈತರ ಹೊಲ ತೋಟಗಳಲ್ಲಿ ಬೆಳೆದಿದ್ದ ತರಕಾರಿಗಳನ್ನು ಕೊಂಡು ಇಡೀ ತಾಲೂಕಿನ ಜನರಿಗೆ ಹಂಚುವ ಕೆಲಸ ಮಾಡಿದ್ದೇವೆ. ರಾಜ್ಯದಲ್ಲೇ ಮೊಟ್ಟಮೊದಲು ಸರ್ಕಾರ ಜಾರಿಗೆ ಬರುವ ಮುನ್ನವೇ ಸವಿತಾ ಸಮಾಜದವರಿಗೆ ಮಾಸಿಕ 500 ರುಪಾಯಿ ತಲುಪುವಂತೆ ಮಾಡಿದೆ ಎಂದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದವರು ಈ ಬಾರಿ ಅತ್ಯಂತ ಸರಳವಾಗಿ ರಂಜಾನ್ ಆಚರಣೆ ಮಾಡುತ್ತಿದ್ದಾರೆ. ಪ್ರತಿವರ್ಷವೂ ಮುಸ್ಲಿಂ ಸಮಾಜದವರಿಗೆ ಆಹಾರ ಕಿಟ್‌ಗಳನ್ನು ನೀಡುತ್ತಾ ಬಂದಿದ್ದೇವೆ. ಈಬಾರಿಯೂ ಆ ಸಂಪ್ರದಾಯವನ್ನು ಮುಂದುವರಿಸಿದ್ದೇವೆ ಎಂದು ಹೇಳಿದರು.
ಮಾಜಿ ಸಚಿವ ಜಮೀರ್ ಅಹಮದ್, ವಿಧಾನ ಪರಿಷತ್ತಿನ ಸದಸ್ಯ ಎಚ್.ಎಂ.ರೇವಣ್ಣ ಮಾತನಾಡಿದರು. ಕುದೂರು ಹೋಬಳಿ ಆಶಾ ಕಾರ್ಯಕರ್ತೆಯರಿಗೆ ಬಮೂಲ್ ವತಿಯಿಂದ 3000 ರುಪಾಯಿಗಳ ಸಹಾಯಧನ ಮತ್ತು ನಂದಿನಿ ಸಿಹಿ ಕಿಟ್ ಗಳನ್ನು ವಿತರಿಸಲಾಯಿತು.
ಮಾಜಿ ಸಚಿವ ಚಲುವರಾಯಸ್ವಾಮಿ, ಜಿಲ್ಲಾ ಪಂಚಾಯ್ತಿ ಸದಸ್ಯ ಆಶೋಕ್, ಅಣ್ಣೇಗೌಡ ,ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ನಿರ್ದೇಶಕ ಡಾ.ರಾಜಣ್ಣ, ಕುದೂರು ಗ್ರಾಮಪಂಚಾಯ್ತಿ ಅಧ್ಯಕ್ಷ ಕೆ.ಟಿ.ವೆಂಕಟೇಶ್, ಯುವ ಮುಖಂಡ ಕೆ.ಎಚ್.ಯತೀಶ್, ಮುಸ್ಲಿಂ ಮುಖಂಡ ಅಬ್ದುಲ್ ಜಾವಿದ್, ಶ್ರೀಗಿರಿಪುರ ಪ್ರಕಾಶ್, ಶಿವಪ್ರಸಾದ್, ಸಿದ್ದಲಿಂಗಪ್ಪ, ಹನುಮಂತರಾಯಪ್ಪ, ಹೊನ್ನಪ್ಪ ಮತ್ತಿತರರು ಹಾಜರಿದ್ದರು.
ಸಾಮಾಜಿಕ ಅಂತರವೇ ಇರಲಿಲ್ಲ!
ಈ ಮೊದಲು ಕಾರ್ಯಕ್ರಮ ಸಾಯಿಮಾನಸ ಛತ್ರದಲ್ಲಿ ನಿರ್ಧರಿತವಾಗಿತ್ತು. ಇದಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡಲಿಲ್ಲ. ಅಂತಿಮವಾಗಿ ರಾಮಲೀಲಾ ಮೈದಾನದಲ್ಲಿ ಏರ್ಪಡಿಸಿದ್ದರು. ಈ ಕಾರ್ಯಕ್ರಮಕ್ಕೂ ಅನುಮತಿ ನೀಡಿರಲಿಲ್ಲ. ಆದರೂ ಪೂರ್ವನಿರ್ಧರಿತವಾದಂತೆ ಕಾರ್ಯಕ್ರಮ ಏರ್ಪಾಟಾಗಿತ್ತು. ಯಾವುದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ನೂಕುನುಗ್ಗಲಿನಲ್ಲಿ ಕಾರ್ಯಕ್ರಮ ನಡೆಯಿತು. ಜನರನ್ನು ನಿಯಂತ್ರಿಸಲು ಪೋಲೀಸರು ಉರಿಬಿಸಿಲಿನಲ್ಲಿ ಹರಸಾಹಸ ಪಡುವಂತಾಯಿತು.
ಉರಿಯುವ ಬಿಸಿಲಿನಲ್ಲಿ ಜನ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಾಗಡಿ ಕ್ಷೇತ್ರದಿಂದ ಎಚ್.ಸಿ.ಬಾಲಕೃಷ್ಣ ಅವರನ್ನು ಗೆಲ್ಲಿಸಿ. ನಾನು ಈ ಸಂದರ್ಭದಲ್ಲಿ ರಾಜಕೀಯ ಭಾಷಣ ಮಾಡುವುದಿಲ್ಲ ಎಂದು ಹೇಳಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಸುದೀರ್ಘವಾಗಿ ಉರಿವ ಬಿಸಿಲಿನಲ್ಲಿ ಜನರನ್ನು ನಿಲ್ಲಿಸಿ ಕಾಂಗ್ರೆಸ್ ಪಕ್ಷದ ಪರವಾಗಿ ಆಡಿದ ಮಾತುಗಳು ಚುನಾವಣಾ ಪ್ರಚಾರವನ್ನು ಮೀರಿಸುವಂತಿತ್ತು.
ಕಮಲಮ್ಮ ಹುಷಾರಾಗಿರಮ್ಮ: ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ ಕೊರೋನಾ ಕುರಿತು ಭಾಷಣ ಮಾಡುತ್ತಿದ್ದಾಗ ನಮ್ಮಂತೆ ಅರವತ್ತು ವರ್ಷವಾದವರಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅಂತಹವರು ಹುಷಾರಾಗಿಬೇಕು ಎಂದರು. ಅಲ್ಲದೆ, ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಅವರತ್ತ ತಿರುಗಿ ನೀನು ಹುಷರಾಗಿರಪ್ಪ ಎಂದು ಎಚ್ಚರಿಸಿದರು. ಆಗ ಲಿಂಗಪ್ಪ, ನಗುತ್ತಾ ನನಗೆ ಹೇಳಿದಂತೆ ಎಚ್.ಎಂ.ರೇವಣ್ಣ ಅವರಿಗೂ ಹೇಳಿ, ಅವರಿಗೂ ಅರವತ್ತು ವರ್ಷ ಆಗಿದೆ ಎಂದರು. ಸಭಾಂಗಣದ ಗೋಡೆಗೆ ಒರಗಿಕೊಂಡು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ಮಾಗಡಿ ಕಮಲಮ್ಮ ಕುಳಿತಿದ್ದರು. ಭಾಷಣದ ಮಧ್ಯೆ ಅವರನ್ನು ನೋಡಿದ ಸಿದ್ದರಾಮಯ್ಯ, ಕಮಲಮ್ಮ ನಿನಗೆ ಅರವತ್ತು ವರ್ಷ ಆಗಿದೆ ಏನಮ್ಮಾ? ಎಂದರು. ಇದಕ್ಕೆ ಕಮಲಮ್ಮ ಹೌದು ಎಂದಾಗ ನೀನೂ ಹುಷಾರಾಗಿರಮ್ಮ. ನೀನು ತುಂಬಾ ಎಚ್ಚರವಾಗಿರಬೇಕು ಎಂದು ಹೇಳಿ ಸಭೆಯಲ್ಲಿ ನಗೆಯುಕ್ಕಿಸಿದರು.