ಕಾಫಿನಾಡಿನ ಜನತೆ ಕೊನೆಗೂ ನೆಮ್ಮದಿಯ ನಿಟ್ಟುಸಿರು ಬಿಡುವಂತ ಸುದ್ದಿಯೊಂದು ಹೊರಬಿದ್ದಿದೆ. ಮೂಡಿಗೆರೆಯ ವೈದ್ಯರ ಕೊರೋನಾ ವರದಿ ನೆಗೆಟಿವ್ ಬಂದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಚಿಕ್ಕಮಗಳೂರು(ಮೇ.24): ಮಲೆನಾಡು ಸೇರಿದಂತೆ ರಾಜ್ಯದ ಮೂರು ಜಿಲ್ಲೆಗಳನ್ನು ತಲ್ಲಣಗೊಳಿಸಿದ್ದ ಜಿಲ್ಲೆಯ ವೈದ್ಯನಲ್ಲಿ ಕೊರೋನಾ ಸೋಂಕು ಪ್ರಕರಣದ ವರದಿಯೇ ಫಾಲ್ಸ್ ಎಂಬುದು ದೃಢಪಟ್ಟಿದೆ. ಇದರಿಂದಾಗಿ ವೈದ್ಯರು ಓಡಾಡಿದ್ದರೆಂಬ ಜಿಲ್ಲೆಗಳಿಗೆ ಹಾಗೂ ಮಲೆನಾಡಿಗೆ ಈಗ ಬಿಗಿ ರಿಲೀಫ್ ಸಿಕ್ಕಿದೆ.
ಈ ರೀತಿಯ ಕೊರೋನಾ ಬಾಂಬ್ ಸಿಡಿಸಿದ್ದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಲ್ಯಾಬ್. ಚಿಕ್ಕಮಗಳೂರು ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಈವರೆಗೆ ಬಂದಿರುವ ಕೊರೋನಾ ಸೋಂಕಿತರ ಪಾಸಿಟಿವ್ ವರದಿಗಳಲ್ಲಿ ಸರಿ-ತಪ್ಪಿನ ಬಗ್ಗೆ ಜನರಲ್ಲಿ ಸಂಶಯಕ್ಕೆ ಕಾರಣವಾಗಿದೆ.
undefined
ಮೂಡಿಗೆರೆ ಮತ್ತು ಹಾಸನ ಗಡಿಯಲ್ಲಿರುವ ನಂದೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರೋರ್ವರ ಗಂಟಲ ದ್ರವವನ್ನು ಮೇ 19ರಂದು ಪರೀಕ್ಷಿಸಿ ಕೊರೋನಾ ಪಾಸಿಟಿವ್ ಇದೆ ಎಂದು ವರದಿ ನೀಡಿದ್ದ ನಿಮ್ಹಾನ್ ಆಸ್ಪತ್ರೆಯ ಲ್ಯಾಬ್, ಮೇ 21ರಂದು ಅದೇ ದ್ರವವನ್ನು ಮತ್ತೊಮ್ಮೆ ಪರೀಕ್ಷೆ ನಡೆಸಿ ನೆಗೆಟಿವ್ ವರದಿ ನೀಡಿದೆ. ಅಂದರೆ, ಒಂದೇ ಲ್ಯಾಬ್‌ನಲ್ಲಿ ಒಬ್ಬರೇ ವ್ಯಕ್ತಿಯ ಎರಡು ವರದಿಗಳು ಬೇರೆ ಬೇರೆಯಾಗಿ ನೀಡಿದೆ.
ಇದರಿಂದ ಬರೀ ಕಾಫಿಯ ನಾಡು ಮಾತ್ರವಲ್ಲ, ನಂದೀಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಹೋಗಿದ್ದ ನೆರೆಯ ಹಾಸನ ಜಿಲ್ಲೆ, ವೈದ್ಯರು ಹೋಗಿ ಬಂದಿದ್ದರು ಎನ್ನಲಾದ ಕೊಡಗು, ಬೆಂಗಳೂರು ಜಿಲ್ಲೆಗಳಿಗೂ ಸ್ವಲ್ಪಮಟ್ಟಿಗೆ ನೀರಾಳವಾಗಿದೆ. ನಂದೀಪುರ ವೈದ್ಯರ ಬಗ್ಗೆ ಸ್ಥಳೀಯವಾಗಿ ಮಾತ್ರವಲ್ಲ ನೆರೆಯ ಹಾಸನ ಜಿಲ್ಲೆಯಲ್ಲೂ ಒಳ್ಳೆಯ ಹೆಸರಿದೆ. ಆದ್ದರಿಂದಲೇ ಅವರಲ್ಲಿಗೆ ಹಲವು ಮಂದಿ ಆರೋಗ್ಯ ತಪಾಸಣೆಗಾಗಿ ಬಂದು ಹೋಗುತ್ತಾರೆ.
ವೈದ್ಯರಲ್ಲಿ ಪಾಸಿಟಿವ್ ವರದಿ ಬರುತ್ತಿದ್ದಂತೆ ಹಸಿರು ವಲಯದಲ್ಲಿ ವೈದ್ಯರು ಕಪ್ಪು ಚುಕ್ಕಿ ಇಟ್ಟರೆಂದು ಹಲವು ಮಂದಿ ಹೇಳಿಕೊಳ್ಳುತ್ತಿದ್ದರು. ಆದರೆ, ವೈದ್ಯರಲ್ಲಿ ಆರೋಗ್ಯ ಸರಿ ಇಲ್ಲದ ಯಾವುದೇ ಲಕ್ಷಣ ಇರಲಿಲ್ಲ. ಅವರಲ್ಲಿನ ಆತ್ಮಸ್ಥೈರ್ಯ ಹೆಚ್ಚಿತ್ತು. ಇದೇ ಕಾರಣವನ್ನು ಮುಂದಿಟ್ಟು ಜಿಲ್ಲಾಡಳಿತ ವೈದ್ಯರನ್ನು ಮತ್ತೆ ಮತ್ತೆ ತಪಾಸಣೆಗೆ ಒಳಪಡಿಸಲು ಸಾಧ್ಯವಾಗಿತ್ತು.
ಶಿವಮೊಗ್ಗ ಕೊರೋನಾ ಸೋಂಕಿತ 8 ಮಂದಿ ಬಿಡುಗಡೆಗೆ ದಿನಗಣನೆ
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂಡಿಗೆರೆಯ ವೈದ್ಯರಲ್ಲಿ ಕೊರೋನಾ ಸೋಂಕು ಇಲ್ಲ. ಇದು, ವಿವಿಧ ಹಂತದಲ್ಲಿ 6 ಬಾರಿ ನಡೆಸಿರುವ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಆದ್ದರಿಂದ ಅವರ ಸಂಪರ್ಕದಲ್ಲಿದ್ದ ಕಾರಣಕ್ಕಾಗಿ ಕ್ವಾರೆಂಟೈನ್ ಆಗಿದ್ದ ಎಲ್ಲರನ್ನು ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ಈ ವಿಷಯ ಪ್ರಕಟಿಸುತ್ತಿದ್ದಂತೆ ವೈದ್ಯರ ಸಂಪರ್ಕದಿಂದಾಗಿ ಕ್ವಾರೆಂಟೈನ್ ಆಗಿದ್ದವರು ಮಾತ್ರವಲ್ಲ, ಇಡೀ ಜಿಲ್ಲೆಯ ಜನರು ನಿಟ್ಟಿಸಿರುವ ಬಿಟ್ಟರು. ಚಿಕ್ಕಮಗಳೂರಿನ ಜಿಲ್ಲಾ ಕೇಂದ್ರದಲ್ಲಿ ಕ್ವಾರೆಂಟೈನ್‌ನಲ್ಲಿ ಇದ್ದವರು ಹಾಗೂ ಜಿಲ್ಲೆಯ ವಿವಿಧೆಡೆ ಕ್ಯಾರೆಂಟೈನ್ ಆಗಿದ್ದವರನ್ನು ಬಸ್ಸಿನಲ್ಲಿ ಕರೆದುಕೊಂಡು ಹೋಗಿ, ಅವರವರ ಮನೆಗಳಿಗೆ ಬಿಡಲಾಯಿತು. ಮಲೆನಾಡಿಗೆ ಮಹಾಗಂಡಾಂತರದಿಂದ ರಿಲೀಫ್ ಸಿಕ್ಕಂತಾಯಿತು.
ಸಂಶಯ ಸುಳಿವು ಸಿಕ್ಕಿದ್ದು ಹೇಗೆ?
ವೈದ್ಯರಿಗೆ ಕೊರೋನಾ ಇಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಹಿಂದೆ ಹಲವು ಕುತೂಹಲಕಾರಿ ಅಂಶಗಳಿವೆ. ಅವುಗಳಲ್ಲಿ ಪ್ರಮುಖವಾಗಿ ವೈದ್ಯರ ಸಂಪರ್ಕದಲ್ಲಿದ್ದ 28 ಮಂದಿಗಳ ವರದಿ ನೆಗೆಟಿವ್ ಬಂದಿರುವುದು.
ಅಂದರೆ, ವೈದ್ಯರು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನರ್ಸ್, ಆಶಾ ಕಾರ್ಯಕರ್ತರು ಸೇರಿದಂತೆ ಒಟ್ಟು 13 ಮಂದಿಯನ್ನು ಪರೀಕ್ಷೆ ಮಾಡಿದಾಗ ಅವರ ವರದಿಯಲ್ಲಿ ನೆಗೆಟಿವ್ ಬಂದಿತು. ಎರಡನೇ ಹಂತದಲ್ಲಿ ವೈದ್ಯರೊಂದಿಗೆ ಓಡಾಡಿರುವ ಹತ್ತಿರದ ಸ್ನೇಹಿತರು, ಸಂಬಂಧಿಕರು ಸೇರಿದಂತೆ 15 ಮಂದಿಯನ್ನು ತಪಾಸಣೆ ಮಾಡಿದಾಗ ಅವರಲ್ಲೂ ನೆಗೆಟಿವ್ ವರದಿ ಬಂದಿತು.
ವೈದ್ಯರಲ್ಲಿ ಕೊರೋನಾ ಸೋಂಕು ಇದ್ದಿದ್ದರೆ, ಈ 28 ಮಂದಿಗಳಲ್ಲಿ ಯಾರಿಗಾದರೂ ಸೋಂಕು ತಗಲಬೇಕಾಗಿತ್ತು. ಹಾಗೆ ಆಗಿಲ್ಲ. ಆದ್ದರಿಂದ ಮೂಲತಃ ವೈದ್ಯರಾಗಿರುವ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ವೈದ್ಯರನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿ ಸಂಶಯಾಸ್ಪದ ಪ್ರಕರಣವೆಂಬ ತೀರ್ಮಾನಕ್ಕೆ ಬಂದರು.
ಪರೀಕ್ಷೆ ಆಗಿದ್ದು ಹೇಗೆ?
28 ಮಂದಿಯ ವರದಿ ನೆಗೆಟಿವ್ ಬರುತ್ತಿದ್ದಂತೆ ಮೇ 20ರಂದು ವೈದ್ಯರ ಗಂಟಲ ದ್ರವವನ್ನು ಚಿಕ್ಕಮಗಳೂರಿನಲ್ಲಿಯೇ ಇರುವ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಲಾಯಿತು. ಆಗ ಬಂದ ವರದಿ, ನೆಗೆಟಿವ್. ಆಗ ಇನ್ನಷ್ಟುಕುತೂಹಲ ಹಾಗೂ ಆಶ್ಚರ್ಯ ಆಯಿತು.. ಅಂದರೆ, ಚಿಕ್ಕಮಗಳೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಲ್ಯಾಬ್ ಸರಿ ಇಲ್ವಾ ಎಂಬ ಸಂಶಯ ಬಂದಿತು.
24 ಗಂಟೆಯ ಬಳಿಕ ವೈದ್ಯರ ಗಂಟಲ ದ್ರವವನ್ನು ತೆಗೆದು ಹಾಸನ ಮತ್ತು ಶಿವಮೊಗ್ಗದಲ್ಲಿರುವ ಲ್ಯಾಬ್‌ಗಳಿಗೆ ಕಳುಹಿಸಲಾಯಿತು. ಮೇ 21ರಂದು ಹಾಸನ ಲ್ಯಾಂಬ್‌ನಿಂದ ನೆಗೆಟಿವ್ ವರದಿ, ಶಿವಮೊಗ್ಗ ಲ್ಯಾಬ್‌ನಿಂದಲೂ ಇದೆ ರೀತಿಯ ವರದಿ ಬಂದಿತು. ಆಗ ಮೊದಲ ಸಲ ಪಾಜಿಟಿವ್ ವರದಿ ನೀಡಿದ್ದ ನಿಮ್ಹಾನ್ಸ್ ಆಸ್ಪತ್ರೆಗೆ ಈ ಹಿಂದೆ ಪರೀಕ್ಷೆ ಮಾಡಲಾದ ಗಂಟಲ ದ್ರವ ಮತ್ತೊಮ್ಮೆ ಪರೀಕ್ಷೆ ಮಾಡಬೇಕೆಂದು ಕೋರಿ ಕೊಳ್ಳಲಾಯಿತು. ಈಗ ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ನೆಗೆಟಿವ್ ವರದಿ ಬಂದಿತು.
ಇಷ್ಟಕ್ಕೂ ಜಿಲ್ಲಾಡಳಿತ ಸುಮ್ಮನೆ ಆಗಲಿಲ್ಲ. ಬೆಂಗಳೂರಿನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಪರೀಕ್ಷೆ ಮಾಡಿದಾಗಲೂ ನೆಗೆಟಿವ್ ಬಂದಿದ್ದರಿಂದ ಜಿಲ್ಲಾಧಿಕಾರಿ ಶುಕ್ರವಾರ ಅಧಿಕೃತವಾಗಿ ವೈದ್ಯರ ವರದಿಯನ್ನು ಪ್ರಕಟಿಸಿದರು.
ತರೀಕೆರೆ ಮಹಿಳೆ: ಮತ್ತೊಮ್ಮೆ ಪರೀಕ್ಷೆ
ಮೇ 19ರಂದು ಜಿಲ್ಲೆಯಲ್ಲಿ ಮೂಡಿಗೆರೆ ವೈದ್ಯರು, ತರೀಕೆರೆಯ ಗರ್ಭಿಣಿ ಮಹಿಳೆ ಹಾಗೂ ಮುಂಬೈನಿಂದ ಬಂದಿದ್ದ ಮೂವರು ಮಕ್ಕಳು ಸೇರಿದಂತೆ 5 ಮಂದಿಯಲ್ಲಿ ಕೊರೋನಾ ಪತ್ತೆಯಾಗಿತ್ತು. ಈ ಎಲ್ಲರ ಪರೀಕ್ಷೆಯನ್ನು ನಡೆಸಿದ್ದು ನಿಮ್ಹಾನ್ಸ್ ಆಸ್ಪತ್ರೆಯ ಲ್ಯಾಬ್. ವೈದ್ಯರ ವರದಿ ಸುಳ್ಳೆಂದು ಬರುತ್ತಿದ್ದಂತೆ ಮಹಿಳೆಯ ಗಂಟಲ ದ್ರವ ಮಾದರಿಯನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗಿದೆ. ಬರೀ ಇದು ಒಂದೇ ಕಾರಣವಲ್ಲ, ಮಹಿಳೆಯರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 9 ಮಂದಿಯ ಪೈಕಿ 7 ಮಂದಿಯ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕ್ವಾರೆಂಟೈನ್‌ನಲ್ಲಿದ್ದವರಿಗೆ ಬಿಡುಗಡೆಯ ಭಾಗ್ಯ
ವೈದ್ಯರ ಪ್ರಥಮ ಸಂಪರ್ಕದಲ್ಲಿದ್ದ 482 ಮಂದಿ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 592 ಮಂದಿಯನ್ನು ಜಿಲ್ಲಾಡಳಿತ ಗುರುತು ಮಾಡಿತ್ತು. ಪ್ರಥಮ ಸಂಪರ್ಕದಲ್ಲಿದ್ದವರ ಪೈಕಿ 60 ವರ್ಷ ಮೇಲ್ಪಟ್ಟವರು, ಗರ್ಭೀಣಿ ಮಹಿಳೆಯರು, ಆರೋಗ್ಯ ಸರಿ ಇಲ್ಲದವರ ಪಟ್ಟಿಯನ್ನು ಮಾಡಿ ಪ್ರತ್ಯೇಕವಾಗಿ ಕ್ವಾರೆಂಟೈನ್ ಮಾಡಲಾಗಿತ್ತು. ದ್ವಿತೀಯ ಸಂಪರ್ಕದಲ್ಲಿ ಇದ್ದವರನ್ನು ಅವರವರ ಮನೆಯಲ್ಲಿಯೇ ಕ್ವಾರೆಂಟೈನ್ ಮಾಡಲಾಗಿತ್ತು.
ವೈದ್ಯರಲ್ಲಿ ಕೊರೋನಾ ಸೋಂಕು ಇಲ್ಲ ಎಂಬುದು ಖಾತ್ರಿ ಆಗುತ್ತಿದ್ದಂತೆ ಜಿಲ್ಲಾಸ್ಪತ್ರೆಯಲ್ಲಿ ಕ್ವಾರೆಂಟೈನ್ ಆಗಿದ್ದವರು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಕ್ವಾರೆಂಟೈನ್ ಆಗಿದ್ದವರನ್ನು ಬಿಡುಗಡೆಗೊಳಿಸಲಾಯಿತು. ಅವರನ್ನು ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಕರೆದುಕೊಂಡು ಹೋಗಿ ಅವರ ಮನೆಗಳಿಗೆ ಬಿಟ್ಟು ಬರಲಾಯಿತು. ಆಗ ಹಲವು ಮಂದಿಯ ಮುಖದಲ್ಲಿ ಬಿಡುಗಡೆಯ ಭಾಗ್ಯ ಸಿಕ್ಕು ನಿರಾಳವಾಗಿರುವುದು ನಗು ಮುಖದಲ್ಲಿ ಮನೆಯತ್ತ ತೆರಳಿದರು.