ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಕುಡಿವ ನೀರು ಯೋಜನೆ ವಿಳಂಬಕ್ಕೆ ಕಿಡಿ, ನೀರಿಲ್ಲದೇ ಜನ ಬೀದಿಗೆ ಬೀಳ್ತಿದ್ದಾರೆ ಕ್ರಮ ಏಕಿಲ್ಲ?: ಮಾಜಿ ಸಿಎಂ ಜಗದೀಶ್ ಶೆಟ್ಟರ್
ವಿಧಾನಸಭೆ(ಡಿ.28): ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿಯ ನಿರಂತರ ಕುಡಿಯುವ ನೀರಿನ ಯೋಜನೆ ವಿಳಂಬಕ್ಕೆ ಆಡಳಿತಾರೂಢ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಮಂಗಳವಾರದ ಕಲಾಪದಲ್ಲಿ ನಡೆಯಿತು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿದ ಶೆಟ್ಟರ್, ‘ನಿರಂತರ ಕುಡಿಯುವ ನೀರೊದಗಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ಎಲ್ ಅಂಡ್ ಟಿಗೆ ನೀಡಲಾಗಿದೆ. ಅವಧಿ ಮುಗಿದರೂ ಯಾವುದೇ ಪ್ರಗತಿಯಿಲ್ಲ. ಕುಡಿಯುವ ನೀರಿಲ್ಲದೆ ಜನರು ಬೀದಿಗೆ ಬೀಳುತ್ತಿದ್ದಾರೆ. ಹೀಗಿದ್ದರೂ ಸರ್ಕಾರವು ಕಂಪೆನಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಹುಬ್ಬಳ್ಳಿ-ಧಾರವಾಡ, ಕಲಬುರಗಿ ಮಾತ್ರವಲ್ಲ ಬೆಳಗಾವಿಯಲ್ಲೂ ಕುಡಿಯುವ ನೀರಿಗೆ ತೀವ್ರ ಅಭಾವ ಸೃಷ್ಟಿಯಾಗಿದೆ’ ಎಂದರು.
ಸಾವರ್ಕರ್ ಬಗ್ಗೆ ಸದನದಲ್ಲಿಯೇ ಮಾತನಾಡಲಿ: ಮಾಜಿ ಸಿಎಂ ಶೆಟ್ಟರ್
ಬಿಜೆಪಿ ಸದಸ್ಯ ಅಭಯ್ ಪಾಟೀಲ್ ಮಾತನಾಡಿ, ‘ಬೆಳಗಾವಿಯಲ್ಲೂ ಅದೇ ಪರಿಸ್ಥಿತಿಯಿದೆ. 10 ದಿನ ಆದರೂ ಕುಡಿಯುವ ನೀರು ಸಿಗುತ್ತಿಲ್ಲ’ ಎಂದರು.
ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ‘ಯೋಜನೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಧ್ಯಕ್ಷತೆಯಲ್ಲಿ ಸಭೆ ಮಾಡಿ 15-20 ದಿನದಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಂಪೆನಿಗೆ ನೀಡಿರುವ ಟೆಂಡರ್ ರದ್ದುಗೊಳಿಸುವುದಾಗಿ ಹೇಳಿದ್ದೇವೆ’ ಎಂದರು. ‘ಆದರೆ ನಾನು ಬೆಳಗಾವಿಗೆ 20 ಬಾರಿ ಬಂದಿದ್ದೇನೆ. ನನ್ನನ್ನು 10 ಬಾರಿ ಅಭಯ್ ಪಾಟೀಲ್ ಭೇಟಿ ಮಾಡಿದ್ದಾರೆ. ಒಂದು ದಿನವೂ ಕುಡಿಯುವ ನೀರಿನ ಸಮಸ್ಯೆಬಗ್ಗೆ ನನ್ನ ಗಮನಕ್ಕೆ ತಂದಿಲ್ಲ. ಈಗ ಅಧಿವೇಶನದಲ್ಲಿ ಹೇಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಮಾತು ಮುಂದುವರೆಸಿದ ಅವರು, ‘ಎಲ್ ಅಂಡ್ ಟಿ ಕಂಪೆನಿಗೆ ನೀಡಿರುವ ಗಡುವು 4-5 ದಿನದಲ್ಲಿ ಮುಗಿಯಲಿದೆ. ಮತ್ತೊಂದು ಸುತ್ತಿನ ಸಭೆಯನ್ನು ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.