ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ಡಿ.30ಕ್ಕೆ ಮುಗಿಯಬೇಕಿದ್ದು, ಹಲವಾರು ಕಾರಣಗಳಿಂದಾಗಿ ನಾಳೆ ಅಥವಾ ನಾಳಿದ್ದು ಅಧಿವೇಶನ ಮುಗಿಯುವ ಸಂಭವವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಂಡ್ಯ (ಡಿ.28): ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ಡಿ.30ಕ್ಕೆ ಮುಗಿಯಬೇಕಿದ್ದು, ಹಲವಾರು ಕಾರಣಗಳಿಂದಾಗಿ ನಾಳೆ ಅಥವಾ ನಾಳಿದ್ದು ಅಧಿವೇಶನ ಮುಗಿಯುವ ಸಂಭವವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಅಧಿವೇಶನದಲ್ಲಿ ಹಲವಾರು ವಿಚಾರಗಳು ಚರ್ಚೆಯಾಗಿವೆ. ಸರ್ಕಾರವೂ ಸಮರ್ಪಕವಾಗಿ ಉತ್ತರ ನೀಡಿದೆ. ಮುಖ್ಯಮಂತ್ರಿಗಳೂ ಸದನದಲ್ಲಿ ಪ್ರಸ್ತಾಪಿಸಿ ಮೊಟಕುಗೊಳಿಸುವ ಸಾಧ್ಯತೆಗಳಿವೆ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಡಿ.30ರಂದು ಮಂಡ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಾನು ಮತ್ತು ಸಚಿವ ನಾರಾಯಣಗೌಡರು ಬೆಳಗಾವಿಯಲ್ಲಿ ನಡೆಯುತ್ತಿದ್ದ ಅಧಿವೇಶನ ಬಿಟ್ಟು ಕಾರ್ಯಕ್ರಮ ಯಶಸ್ಸಿಗಾಗಿ ಬಂದಿದ್ದೇವೆ. ಇಲ್ಲೇ ವಾಸ್ತವ್ಯ ಹೂಡಿ ಕಾರ್ಯಕ್ರಮದ ಸಿದ್ಧತೆ ನಡೆಸುವುದಾಗಿ ಹೇಳಿದರು. ಅಂದು ಅಮಿತ್ ಶಾ ಅವರು ಮದ್ದೂರಿನ ಗೆಜ್ಜಲಗೆರೆಯ ಮಂಡ್ಯ ಹಾಲು ಒಕ್ಕೂಟದ ಆವರಣದಲ್ಲಿ ನಿರ್ಮಿಸಲಾಗಿರುವ ಮೆಗಾ ಡೈರಿಯನ್ನು ಉದ್ಘಾಟಿಸುವರು. ಬಳಿಕ ಮಂಡ್ಯದ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು.
ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಪಂಚರತ್ನ ಜಾರಿಗೆ: ನಿಖಿಲ್ ಕುಮಾರಸ್ವಾಮಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲು ಸೇರಿದಂತೆ ಸಂಪುಟದ ಎಲ್ಲ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ನುಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಈಗಾಗಲೇ ಪಾಂಡವಪುರ ಮತ್ತು ಮದ್ದೂರಿನಲ್ಲಿ ಜನಸಂಕಲ್ಪ ಯಾತ್ರೆ ನಡೆಸಿದ್ದೇವೆ. ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ರೈತರ ಮನವೊಲಿಕೆಗೆ ಯತ್ನ: ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ದರ ನೀಡುವಂತೆ ಒತ್ತಾಯಿಸಿ ರೈತರು 51 ದಿನಗಳಿಂದಲೂ ಚಳವಳಿ ನಡೆಸುತ್ತಿದ್ದಾರೆ. ನಾನು ಮತ್ತು ಸಚಿವ ನಾರಾಯಣಗೌಡ ಅವರು ರೈತರ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ರೈತರ ಮನವೊಲಿಸುವುದಾಗಿ ತಿಳಿಸಿದರು. ಕೇಂದ್ರ ಸರ್ಕಾರ ಎಫ್ಆರ್ಪಿ ನಿಗದಿ ಮಾಡಿಲ್ಲ. ರಾಜ್ಯ ಸರ್ಕಾರ 50 ರು. ಪ್ರೋತ್ಸಾಹಧನ ಹೆಚ್ಚಳ ಮಾಡಿದೆ. ರೈತರ ಬೇಡಿಕೆಗಳ ಕುರಿತಂತೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದರು. ಜಿಲ್ಲೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗಿದೆ. ಈಗಾಗಲೇ ಸರ್ಕಾರ 15 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ಎಲ್ಲಾ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಫ್ಲೈಓವರ್ ಕಾಮಗಾರಿ ವೇಳೆ ನಡೆದ ಅವಘಡ: ಯುವಕನ ಎದೆ ಸೀಳಿದ ಕಬ್ಬಿಣದ ರಾಡು
ಮುಂಜಾಗ್ರತಾ ಕ್ರಮ: ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಕಾರಣ ಸರ್ಕಾರ ಅದಕ್ಕಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೋವಿಡ್ ಪ್ರಕರಣಗಳು ಹೆಚ್ಚದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಅಗತ್ಯ ಔಷಧೋಪಚಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಸಚಿವ ಕೆ.ಸಿ. ನಾರಾಯಣಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಮುಡ ಅಧ್ಯಕ್ಷ ಕೆ. ಶ್ರೀನಿವಾಸ್, ಮುಖಂಡರಾದ ಎಸ್. ಸಚ್ಚಿದಾನಂದ, ಅಶೋಕ್ ಜಯರಾಂ ಗೋಷ್ಠಿಯಲ್ಲಿದ್ದರು.