'ರಾಜಕೀಯ ಬದಲಾವಣೆಗೆ ಈ ಚುನಾವಣೆ ಫಲಿತಾಂಶ ದಿಕ್ಸೂಚಿ'

By Web DeskFirst Published Dec 1, 2019, 11:55 AM IST
Highlights

ಯಡಿಯೂರಪ್ಪ ಬಗ್ಗೆ ಯತ್ನಾಳ ಏನು ಮಾತನಾಡಿದ್ದಾರೆ ಹಳೆ ರೆಕಾರ್ಡ್ಸ್ ತಗೆದುನೋಡಿ| ಬಾಯಿಚಪಲಕ್ಕೆ ಯತ್ನಾಳ ಏನ್ ಬೇಕಾದರೂ ಚರ್ಚೆ ಮಾಡ್ತಾರೆ| ಫೈವ್‌ಸ್ಟಾರ್‌ ಹೋಟೆಲ್‌ನಲ್ಲಿ ಇದ್ದರೂ ಸ್ವಲ್ಪ ಮರ್ಯಾದೆಯಿಂದ ಬದುಕಿದ್ದೇನೆ| ಇಲ್ಲಿ ಹನಿಟ್ರ್ಯಾಪ್ ಗೆ ಸಿಲುಕಿಗೊಂಡು ಒದ್ದಾಡ್ತಿದ್ದಾರಲ್ಲ| ನಿಮ್ಮ ಮನೆಯಲ್ಲಿ ಹೆಗ್ಗಣ ಬಿದ್ದಿದೆಯಲ್ಲ ಅದನ್ನ ಸರಿಪಡಿಸಿಕೊಳ್ಳಲು ಯತ್ನಾಳ್‌ಗೆ ಹೇಳಿ ಎಂದು ಹೇಳಿದ ಕುಮಾರಸ್ವಾಮಿ| 

ಬೆಳಗಾವಿ(ಡಿ.01): ಗೋಕಾಕ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಪರ ಅನುಕಂಪವೂ‌ ಇದೆ, ಒಳ್ಳೆಯ ಜನಪ್ರತಿನಿಧಿ ಆಗ್ತಾರೆ ಎಂಬ ಭಾವನೆ ಇದೆ. ಈ ಉಪಚುನಾವಣೆಯಲ್ಲಿ ಖಂಡಿತವಾಗಿಯೂ ಅಶೋಕ್ ಪೂಜಾರಿ ಗೆಲ್ಲಲಿದ್ದಾರೆ. ಡಿ. 9ನೇ ತಾರೀಖು ಬಳಿಕ ರಾಜಕೀಯ ಬದಲಾವಣೆಗೆ ಈ ಚುನಾವಣೆ ಫಲಿತಾಂಶ ದಿಕ್ಸೂಚಿಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. 

ಭಾನುವಾರ ಕ್ಷೇತ್ರದ ಹೀರೆನಂದಿ ಗ್ರಾಮದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಗೋಕಾಕ್‌ನಲ್ಲಿ ಗೆದ್ದ ಬಳಿಕ ಮಂತ್ರಿ ಆಗ್ತಾರೆ ಅಂತಾ ಮತ ಕೇಳಲು ಹೇಳಿಲ್ಲ ಎಂದು ಹೇಳಿದ್ದಾರೆ. ಈ ಚುನಾವಣೆ ಬಳಿಕ ಬಿಜೆಪಿ ಬಹುಮತ ಮತ್ತೆ ಕುಸಿಯಲಿದೆ. ರಾಜಕೀಯ ಧ್ರುವೀಕರಣ, ಶುದ್ಧೀಕರಣ ಎರಡು ಆಗುತ್ತದೆ. ಕೂಸು ಹುಟ್ಟೋ ಮುಂಚೆ ಕುಲಾಯಿ ಹೊಲಿಸೋದು ಯಾಕೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಯಡಿಯೂರಪ್ಪ ರಾಣೆಬೆನ್ನೂರಲ್ಲಿ ನಾಲ್ವರು ಕುರುಬರನ್ನ ಮಂತ್ರಿ ಮಾಡ್ತೀನಿ ಅಂತ ಹೇಳಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಪ್ರಚಾರ ವೇಳೆ ನಾಲ್ವರು ಒಕ್ಕಲಿಗರನ್ನು ಮಂತ್ರಿ ಮಾಡ್ತೀವಿ ಅಂತಾರೆ.  ಯಾರ್ಯಾರಿಗೆ ಸಚಿವ ಸ್ಥಾನ ಕೊಡುತ್ತಾರೆ ನೋಡೋಣ ಎಂದು ಹೇಳಿದ್ದಾರೆ. 

ಐಷಾರಾಮಿ ಹೋಟೆಲ್‌ನಲ್ಲಿ ಕುಳಿತು ಹೆಚ್‌ಡಿಕೆ ಕಲೆಕ್ಷನ್‌ನಲ್ಲಿ ತೊಡಗಿದ್ದಾರೆ ಎಂಬ ಬಸನಗೌಡ ಪಾಟೀಲ್ ಯತ್ನಾಳ ಆರೋಪ ವಿಚಾರದ ಬಗ್ಗೆ ಮಾತನಾಡಿದ ಹೆಚ್‌ಡಿಕೆ, ಯತ್ನಾಳ ಯಾವ್ಯಾವ ಟೈಮ್‌ಗೆ ಯಾರ ಬಗ್ಗೆಯೂ ಚರ್ಚೆ ಮಾಡಬಹುದು. ನಾನು ಗುಡಿಸಲಿನಲ್ಲೂ ವಾಸ ಮಾಡಿದ್ದೇನೆ, ರಷ್ಯಾದ ಗೆಸ್ಟ್‌ಹೌಸ್‌ನಲ್ಲೂ ವಾಸ‌ ಮಾಡಿದ್ದಾನೆ. ಯಾವ ರೀತಿ ಆಡಳಿತ ನಡೆಸಬೇಕೆಂದು ಯತ್ನಾಳ್‌ರಿಂದ ಕಲಿಬೇಕಿಲ್ಲ ಎಂದು ತಿಳಿಸಿದ್ದಾರೆ. 

ಯಡಿಯೂರಪ್ಪ ಬಗ್ಗೆ ಯತ್ನಾಳ ಏನು ಮಾತನಾಡಿದ್ದಾರೆ ಹಳೆ ರೆಕಾರ್ಡ್ಸ್ ತಗೆದುನೋಡಿ, ಬಾಯಿಚಪಲಕ್ಕೆ ಯತ್ನಾಳ ಏನ್ ಬೇಕಾದರೂ ಚರ್ಚೆ ಮಾಡ್ತಾರೆ. ಫೈವ್‌ಸ್ಟಾರ್‌ ಹೋಟೆಲ್‌ನಲ್ಲಿ ಇದ್ದರೂ ಸ್ವಲ್ಪ ಮರ್ಯಾದೆಯಿಂದ ಬದುಕಿದ್ದೇನೆ. ಇಲ್ಲಿ ಹನಿಟ್ರ್ಯಾಪ್ ಗೆ ಸಿಲುಕಿಗೊಂಡು ಒದ್ದಾಡ್ತಿದ್ದಾರಲ್ಲ, ನಿಮ್ಮ ಮನೆಯಲ್ಲಿ ಹೆಗ್ಗಣ ಬಿದ್ದಿದೆಯಲ್ಲ ಅದನ್ನ ಸರಿಪಡಿಸಿಕೊಳ್ಳಲು ಯತ್ನಾಳ್‌ಗೆ ಹೇಳಿ ಎಂದು ಹೇಳಿದ್ದಾರೆ

ಹನಿಟ್ರ್ಯಾಪ್‌ನಲ್ಲಿ ಕೆಲ ಜನಪ್ರತಿನಿಧಿಗಳು ಸಿಲುಕಿಕೊಂಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆ ಮುಗಿಯುವರೆಗೂ ಯಾರ ಹೆಸರು ಹೇಳಬಾರದೆಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಈ ಬಗ್ಗೆ ಅವರನ್ನ ಕೇಳಿ, ಹನಿಟ್ರ್ಯಾಪ್ ಬಗ್ಗೆ ಪ್ರಸ್ತಾಪಿಸಿ ಮತ ಕೇಳುವ ಪರಿಸ್ಥಿತಿ ನನಗಿಲ್ಲ ಎಂದು ಹೇಳಿದ್ದಾರೆ. 

ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಿದ್ದು ನನ್ನ ಕನಸು, ಲಿಂಗಾಯತರಿಗೆ ದೊಡ್ಡ ಕೊಡುಗೆ ಕೊಟ್ಡಿರೋದು ದೇವೇಗೌಡರ ಕುಟುಂಬ, ಈ ಬಗ್ಗೆ ಚರ್ಚೆಗೂ ನಾನು ಸಿದ್ಧ ಎಂದು ಹೇಳಿದ್ದಾರೆ. 

ಸಾಲಮನ್ನಾದ ಏನ್ ತಿಳಿವತ್ರಿ ಸರ್, ನಮಗ ದುಡ್ಡು ಬಂದಿಲ್ಲ ಇನ್ನೂ ಎಂದು ರೈತರೊಬ್ಬರು ಪ್ರಚಾರ ವೇಳೆ ಹೆಚ್‌ಡಿಕೆಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು, ಯಾರಿಗಾದರೂ ಸಾಲಮನ್ನಾ ಆಗದೇ ಇದ್ರೆ ನಿಮ್ಮ ಆಧಾರ್ ಕಾರ್ಡ್ ಕೊಡಿ, ಆಧಾರ್ ಕಾರ್ಡ್ ಕೊಟ್ಟ ಹತ್ತು ನಿಮಿಷದಲ್ಲಿ ನಿಮಗೆ ಮಾಹಿತಿ ಕೊಡ್ತೇನೆ ಎಂದು ಹೇಳಿದ್ದಾರೆ.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ. 

click me!