ಅಧಿಕಾರ ಮುಖ್ಯವೂ ಅಲ್ಲ, ಶಾಶ್ವತವೂ ಅಲ್ಲ: ಮಾಜಿ ಸಿಎಂ ಯಡಿಯೂರಪ್ಪ

By Govindaraj SFirst Published Aug 15, 2022, 1:30 AM IST
Highlights

ಯಾರಿಗೂ ಅಧಿಕಾರ ಮುಖ್ಯವೂ ಅಲ್ಲ, ಶಾಶ್ವತವೂ ಅಲ್ಲ. ಸಿಕ್ಕ ಅಧಿಕಾರಿದಲ್ಲಿ ಒಳ್ಳೆಯ ಕೆಲಸ ಮಾಡಿದಾಗ ಅವುಗಳು ಜನರ ಮನದಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. 

ಪಾಂಡವಪುರ (ಆ.15): ಯಾರಿಗೂ ಅಧಿಕಾರ ಮುಖ್ಯವೂ ಅಲ್ಲ, ಶಾಶ್ವತವೂ ಅಲ್ಲ. ಸಿಕ್ಕ ಅಧಿಕಾರಿದಲ್ಲಿ ಒಳ್ಳೆಯ ಕೆಲಸ ಮಾಡಿದಾಗ ಅವುಗಳು ಜನರ ಮನದಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ತಾಲೂಕಿನ ಬೇಬಿ ಗ್ರಾಮದ ಶ್ರೀದುರ್ದಂಡೇಶ್ವರ ಮಹಂತ ಶಿವಯೋಗಿಗಳ ಮಠದಲ್ಲಿ ನಡೆದ ಶತಾಯುಷಿ ಲಿಂಗೈಕ್ಯ ಶ್ರೀಮರಿದೇವರು ಶಿವಯೋಗಿ ಮಹಾ ಸ್ವಾಮೀಜಿ ಅವರ 14ನೇ ವರ್ಷದ ಪುಣ್ಯಸ್ಮರಣೆ ಹಾಗೂ 6ನೇ ವರ್ಷದ ಮಹಾ ರಥೋತ್ಸವ, ಶಾಲಾ ಕಟ್ಟಡ ಉದ್ಘಾಟಿಸಿ, ಹಿರಿಯ ಶ್ರೀಗಳ ಸ್ಮರಣೆಯಲ್ಲಿ ಜೀವನದಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. 

ಭಾಗ್ಯಲಕ್ಷ್ಮೀ ಯೋಜನೆ ಜಾರಿಗೊಳಿಸುವುದು ನನ್ನ ಕನಸ್ಸಾಗಿತ್ತು. ಸಿಎಂ ಆಗುತ್ತಿದ್ದಂತೆಯೇ ಅದನ್ನು ಜಾರಿಗೊಳಿಸಿದೆ. ಬಡವರ ಮನೆಯಲ್ಲಿ ಜನಿಸುವ ಹೆಣ್ಣು ಮಗಳು ಶಾಪವಾಗಬಾರದು ಎಂದು ಭಾಗ್ಯಲಕ್ಷ್ಮೀ ಯೋಜನೆ ಮೂಲಕ ಆಕೆಗೆ 18 ವರ್ಷ ತುಂಬಿದಾಗ 1ಲಕ್ಷ ರು. ಹಣ ಕೈಗೆ ಪಡೆದು ಹೆಚ್ಚಿನ ವಿದ್ಯಾಭ್ಯಾಸ ಮುಂದುವರೆಸಲು ಸಹಾಯವಾಗಲಿ ಎಂದು ಐತಿಹಾಸಿಕ ಕಾರ್ಯಕ್ರಮ ಮಾಡಿದೆ ಎಂದರು.

ರದ್ದಾಗಿದ್ದ ಬಿಜೆಪಿ ಜನೋತ್ಸವ ಸಮಾವೇಶಕ್ಕೆ ಹೊಸ ದಿನಾಂಕ ಫಿಕ್ಸ್, ಬಿಎಸ್‌ವೈಗೆ ಆಹ್ವಾನ

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾದಾಗ ಮಾದರಿ ರಾಜ್ಯವನ್ನಾಗಿ ಮಾಡುವ ಹಂಬಲದಿಂದ ಪ್ರಾಮಾಣಿಕವಾಗಿ ಅನೇಕ ಅಭಿವೃದ್ಧಿ ಕೆಲಸ ಮಾಡಿದೆ. ಜತೆಗೆ ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಇನ್ನೊಂದೆಡೆ ಇಡೀ ವಿಶ್ವವೇ ಅಚ್ಚರಿ ಪಡುವ ರೀತಿ ಪ್ರಧಾನಿ ಮೋದಿ, ಅಮಿತ್‌ ಶಾ ಜತೆ ಸೇರಿ ಕೆಲಸ ಮಾಡುತ್ತಿದ್ದಾರೆ ಎಂದರು. ಈ ದಿನ ಬೆಂಗಳೂರಿನಲ್ಲೇ ಉಳಿಯಬೇಕಾದ ಅನಿವಾರ್ಯತೆ ಇತ್ತು. ಆದರೆ, ಕಾರ್ಯಕ್ರಮಕ್ಕೆ ಬಂದಿದ್ದು ಸಾರ್ಥಕವಾಯಿತು. ಬರದಿದ್ದರೆ ದೊಡ್ಡ ಅಪರಾಧವಾಗುತ್ತಿತ್ತು. ಈ ಸನ್ಮಾನ ನನಗಲ್ಲ, ನಾಡಿನ ಜನತೆಗೆ ಸಿಗಬೇಕು. ಏಕೆಂದರೆ ಅವರಿಂದಲೇ ನನಗೆ ಎಲ್ಲ ಅಧಿಕಾರ ಸಿಕ್ಕಿದೆ ಎಂದರು.

ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ: ತಾಯಂದಿರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು. ಮಕ್ಕಳು ವಿದ್ಯಾವಂತರಾಗಿ ಸ್ವಂತ ಕಾಲ ಮೇಲೆ ನಿಂತರೆ ಸಂಸಾರ ಸಾಕುವ ಜನತೆ ಪಾಲಕರಿಗೆ ಗೌರವ ತಂದು ಕೊಡುತ್ತದೆ. ಹೀಗಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು. ಬೇಬಿ ಮಠದ ತ್ರಿನೇತ್ರ ಸ್ವಾಮೀಜಿ ಅವರ ಪರಿಶ್ರಮದಿಂದ ಶ್ರೀಮಠದ ಚಿತ್ರಣ ಬದಲಾಗಿದೆ. ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅಗತ್ಯ ಸೌಕರ್ಯ ಒದಗಿಸಿಕೊಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ನನಗೆ ಶ್ರೀಮಠದ ಹಿರಿಯ ಶ್ರೀಗಳ ಆಶೀರ್ವಾದ, ಮಾರ್ಗದರ್ಶನದಲ್ಲಿ ಮುನ್ನಡೆದೆ. ಒಳ್ಳೆಯ ಭವಿಷ್ಯವಿದೆ ಗಟ್ಟಿಯಾಗಿ ಮುನ್ನಡೆ ಎಂದಿದ್ದರು. ಈ ದಿನ ಅವರ ಆಶೀರ್ವಾದ ಹಾಗೂ ರಾಜ್ಯದ ಜನರ ಆಶೀರ್ವಾದದಿಂದ ಇಷ್ಟುಎತ್ತರಕ್ಕೆ ಬೆಳೆದು ನಾಡಿನ ಉದ್ದಲಗಕ್ಕೂ ಹೆಸರುವಾಸಿಯಾಗಿದ್ದೇನೆ ಎಂದು ಸ್ಮರಿಸಿದರು. 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸದ ಈ ಶುಭ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶಕ್ಕೆ ಗೌರವ ತಂದುಕೊಡಬೇಕು ಎಂದು ಮನವಿ ಮಾಡಿದರು.

ಪುಟ್ಟರಾಜು ಮೈಗೆಲ್ಲ ಎಣ್ಣೆ ಹಾಕ್ತಾರೆ: ಶ್ರೀಮಠದ ಸ್ಮಾರ್ಚ್‌ ಕ್ಲಾಸ್‌ ಉದ್ಘಾಟಿಸಿದ ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ರಾಜಕೀಯ ಕಲಿಯಬೇಕಿದ್ದರೆ ಅದು ಶಾಸಕ ಸಿ.ಎಸ್‌.ಪುಟ್ಟರಾಜು ಅವರಿಂದ ಕಲಿಯಬೇಕು. ನಾವು ತಲೆಗೆ ಎಣ್ಣೆ ಹಾಕಿದರೆ ಅವರು ಮೈಗೆಲ್ಲ ಎಣ್ಣೆ ಹಾಕ್ತಾರೆ. ಅವರ ರಾಜಕಾರಣ ಹತ್ತಿರದಿಂದ ನೋಡಿದ್ದೇನೆ. 24*7 ರೀತಿ ಮಾದರಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುವ ಜತೆಗೆ ರಾಜಕಾರಣವು ಮಾಡುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಮಾಜಿ ಸಿಎಂ ಯಡಿಯೂರಪ್ಪ ಅವರಂತೆಯೇ ಶ್ರೀಮಠದೊಂದಿಗೆ ನನಗೂ ಅವಿನಾಭಾವ ಸಂಬಂಧ ಇದೆ. ಒತ್ತಡ ಬಂದ ವೇಳೆ ಶ್ರೀಮಠಕ್ಕೆ ಹೋಗಿ ಬರುತ್ತೇನೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎಸ್‌.ಪುಟ್ಟರಾಜು ಮಾತನಾಡಿ, ಹಿರಿಯ ಶ್ರೀಗಳು ಈ ಭಾಗಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. 

ಸಿಎಂ ಬದಲಾವಣೆ ಚರ್ಚೆ ಮಾಡಬಾರ್ದು, ಇಲ್ಲಿಗೇ ನಿಲ್ಲಿಸಿ: ಯಡಿಯೂರಪ್ಪ ಖಡಕ್ ಸೂಚನೆ

ಹಾಗೆಯೇ ತ್ರಿನೇತ್ರ ಸ್ವಾಮೀಜಿ ಕೂಡ ಶ್ರೀಮಠದ ಅಭಿವೃದ್ಧಿಗೆ ಅವಿರತ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು. ಸಮಾರಂಭದಲ್ಲಿ ಚಂದ್ರವನ ಆಶ್ರಮ ಮತ್ತು ಬೇಬಿ ಮಠದ ಶ್ರೀತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಹಾನಗಲ್‌ ಡಾ.ಗುರುಸಿದ್ದರಾಜ ಯೋಗಿಂದ್ರ ಸ್ವಾಮೀಜಿ, ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ, ಹುಕ್ಕೇರಿಯ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಸದೆ ಸುಮಲತಾ ಅಂಬರೀಶ್‌, ಬಿಜೆಪಿ ಮುಖಂಡರಾದ ರಘು ಕೌಟಿಲ್ಯ, ಡಾ.ಎನ್‌.ಎಸ್‌.ಇಂದ್ರೇಶ್‌, ಮಹದೇವಸ್ವಾಮಿ, ಜಿಪಂ ಮಾಜಿ ಸದಸ್ಯ ಸಿ.ಅಶೋಕ್‌, ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ಎಂ.ಸುಬ್ರಹ್ಮಣ್ಯ, ನಿರಂಜನಬಾಬು, ಎಂ.ರಾಜಕುಮಾರ್‌ ಇತರರಿದ್ದರು.

click me!