ನನ್ನಷ್ಟು ಅಭಿವೃದ್ಧಿ ಮಾಡಿ ತೋರಿಸು! ಶ್ರೀರಾಮುಲುಗೆ ಸಿದ್ದರಾಮಯ್ಯ ಓಪನ್ ಚಾಲೆಂಜ್! ಬಾದಾಮಿ ಅಭಿವೃದ್ಧಿ ಮಾಡಿದಂತೆ ಮೊಳಕಾಲ್ಮೂರು ಅಭಿವೃದ್ಧಿ! ಬಿಜೆಪಿ ಕ್ಯಾನ್ಸರ್ ಇದ್ದಂತೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯ! ಪ್ರಧಾನಿ ಮೋದಿ ಅವರದ್ದು ಕೇವಲ ಬಾಯಿ ಬಡಾಯಿ! ಅನಂತ್ ಕುಮಾರ್ ಹೆಗಡೆ ವಿರುದ್ದ ಹರಿಹಾಯದ್ದ ಸಿದ್ದು
ಬಾಗಲಕೋಟೆ(ಆ.29): ಕಳೆದ ವಿಧಾನಸಭೆ ಚುನಾವಣೆ ವೇಳೆ ಬಾದಾಮಿ ಕ್ಷೇತ್ರದಲ್ಲಿ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿ ಶಾಸಕ ಬಿ.ಶ್ರೀರಾಮುಲು ಅವರಿಗೆ ಮಾಜಿ ಸಿಎಂ ಬಹಿರಂಗ ಸವಾಲು ಹಾಕಿದ್ದಾರೆ.
ಬಾದಾಮಿಯಲ್ಲಿ ನಡೆದ ವಿಧಾನಪರಿಷತ್ ಉಪ ಚುನಾವಣೆ ಪ್ರಚಾರ ಭಾಷಣದಲ್ಲಿ ಮಾತನಾಡಿದ ಸಿದ್ದರಾಮಯ್ಯ, ತಾವು ಬಾದಾಮಿಯಲ್ಲಿ ಮಾಡುವ ಅಭಿವೃಧ್ಧಿ ಕಾರ್ಯಗಳನ್ನು ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಲ್ಲಿ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.
ಸಹಿಷ್ಣುತೆ ಕಾಂಗ್ರೆಸ್ ಪಕ್ಷದ ಸಂವಿಧಾನವಾಗಿದ್ದು, ನಾವು ಎಲ್ಲಾ ಧರ್ಮವನ್ನೂ ಸಮಾನವಾಗಿ ಕಾಣುತ್ತೇವೆ. ಆದರೆ ಕೋಮುವಾದಿಗಳಾಗಿರುವ ಬಿಜೆಪಿಯವರಿಗೆ ಮನುಷ್ಯತ್ವವೇ ಇಲ್ಲ ಎಂದು ಮಾಜಿ ಸಿಎಂ ಹರಿಹಾಯ್ದರು.
ತಮ್ಮ ಕಾರ್ಯಕ್ರಮಗಳಿಗೆ ದಾಡಿವಾಲಾಗಳು, ಟೋಪಿವಾಲಾಗಳು ಬರಬೇಡಿ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಮನುಷ್ಯತ್ವ ಇಲ್ಲದ ಇಂತಹ ನಾಯಕರನ್ನು ಇಟ್ಟುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.
ಮಾತೆತ್ತಿದರೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಪ್ರಧಾನಿ, ಏನೂ ಕೆಲಸ ಮಾಡದೇ ಕೇವಲ ಬಡಾಯಿ ಕೊಚ್ಚಿ ಕೊಳ್ಳುತ್ತಾರೆ ಎಂದ ಸಿದ್ದು, ರೈತರ ಸಾಲಮನ್ನಾ ಮಾಡಿ ಅಂದರೆ ಇಲ್ಲ ಎನ್ನುವ ಮೋದಿ ಅಧಿಕಾರದಲ್ಲಿರಬೇಕಾ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಕ್ಯಾನ್ಸರ್ ಇದ್ದ ಹಾಗೆ, ಅವರಿಂದ ದೂರ ಇರುವುದೇ ಒಳ್ಳೆಯದು ಎಂದ ಮಾಜಿ ಸಿಎಂ, ಬೆಂಕಿ ಹಚ್ಚುವ ಕೆಲಸದಲ್ಲಿ ನಿರತರಾಗಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.
ಇದೇ ವೇಳೆ ಸರ್ಕಾರ ತಮ್ಮ ಮತ್ತು ಸಿದ್ದರಾಮಯ್ಯ ಅವರ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂಬ ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಆರೋಪ ನಿರಾಕರಿಸಿದ ಸಿದ್ದು, ತಮ್ಮ ಫೋನ್ ಕದ್ದಾಲಿಕೆಯಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಯಾರು ಈ ರೀತಿ ಆರೋಪ ಮಾಡಿದ್ದಾರೋ ಅವರನ್ನೇ ಕೇಳಿ ಎಂದ ಸಿದ್ದರಾಮಯ್ಯ, ಯಾರೂ ತಮ್ಮ ಫೋನ್ ಕದ್ದಾಲಿಕೆ ಮಾಡುತ್ತಿಲ್ಲ ಎಂದು ಹೇಳಿದರು.