ದೇಶದ ಐಕ್ಯತೆ, ಸಮಗ್ರತೆ ಕಾಪಾಡಲು ಶಿವಾನಂದ ಪಾಟೀಲ ಕರೆ!

By Web DeskFirst Published Aug 15, 2018, 5:58 PM IST
Highlights

ಸ್ವೇಚ್ಛಾಚಾರದ ಸ್ವಾತಂತ್ರ್ಯ ಅಪಾಯಕಾರಿ! ಸಚಿವ ಶಿವಾನಂದ ಪಾಟೀಲ ಅಭಿಮತ! 72ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ! ಧ್ವಜಾರೋಹಣ ನೆರವೇರಿಸಿದ ಸಚಿವ ಪಾಟೀಲ

ಬಾಗಲಕೋಟೆ(ಆ.15): ದೇಶದ ಐಕ್ಯತೆ, ಸಮಗ್ರತೆ ಕಾಪಾಡಲು ಸರ್ವ ತ್ಯಾಗಗಳನ್ನು ಮಾಡಲು ಎಲ್ಲರೂ ಸಿದ್ಧರಾಗೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಎಂದರೆ ಅದು ಸ್ವೇಚ್ಛಾಚಾರವಲ್ಲ, ಮೃಗಗಗಳಂತೆ ವರ್ತಿಸಿ ಇನ್ನೊಬ್ಬರ ಭಾವನೆಗಳನ್ನು ಘಾಸಿಗೊಳಿಸುವುದಲ್ಲ, ಇನ್ನೊಬ್ಬರ ಕನಸುಗಳನ್ನು ಭಗ್ನಗೊಳಿಸುವುದಲ್ಲ, ಸ್ವಾತಂತ್ರ್ಯ ಎಂದರೆ ಒಂಟಿ ಮಹಿಳೆ ಮಧ್ಯರಾತ್ರಿ ಸುರಕ್ಷಿತವಾಗಿ ಮನೆ ಮುಟ್ಟುವಂತಾಗಬೇಕು. ಇದು ಗಾಂಧೀಜಿಯವರ ಆಶಯ ಕೂಡ ಆಗಿತ್ತು ಎಂದು ಅವರು ಹೇಳಿದರು.

ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಕರ್ನಾಟಕ, ಸಾಮಾಜಿಕ ನ್ಯಾಯಕ್ಕೆ ಕಟಿಬದ್ಧವಾಗಿದೆ. ೯ನೇ ಶತಮಾನದಲ್ಲಿ ಕನ್ನಡದ ಆದಿಕವಿ ಪಂಪ ಸಾರಿದ ಮನುಷ್ಯ ಜಾತಿ ತಾನೊಂದೆ ವಲಂ ಎನ್ನವ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.

೧೨ನೇ ಶತಮಾನದಲ್ಲಿ ಬಸವಣ್ಣನನವರ ನೇತೃತ್ವದ ವಚನ ಸಾಹಿತ್ಯ ಪರಂಪರೆ, ಸಾಮಾಜಿಕ ಸಮಾನತೆ ತಳಹದಿಯನ್ನು ನಿರ್ಮಿಸಿದೆ. ಕುಲಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನ್ನೇನಾದರೂ ಬಲ್ಲಿರಾ ಎನ್ನುವ ಕನಕದಾಸರ ದಿವ್ಯ ಸಂದೇಶ ನಮ್ಮ ಬೆನ್ನಿಗೆ ಇದೆ. ಕೋಮು ಸೌಹಾರ್ದ ಸಂಕೇತವಾಗಿರುವ ಶಿಶುನಾಳ ಶರೀಫರಂತಹ ಸಂತರ ಜನ್ಮಭೂಮಿ ನಮ್ಮದಾಗಿದೆ. ವೈಚಾರಿಕ ಸಾಹಿತ್ಯದ ಮೂಲಕ ಒಂದು ಜನಾಂಗದ ಕಣ್ಣನ್ನೇ ತೆರೆಸಿರುವ ಕುವೆಂಪು ಅವರ ವಿಶ್ವ ಮಾನವ ತತ್ವ ಮರೆಯಲು ಸಾಧ್ಯವಿಲ್ಲ ಎಂದರು.

ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ಅನೇಕ ರಾಷ್ಟ್ರೀಯ ಹೋರಾಟಗಾರರು ಚಿರಸ್ಮರಣೀಯರಾಗಿದ್ದಾರೆ. ಕನ್ನಡಿಗರ ಪಾಲು ಕೂಡ ಬಹು ದೊಡ್ಡದಾಗಿದೆ. ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮೊದಲಾದ ಸ್ವಾತಂತ್ರ್ಯ ಹೋರಾಟಗಾರರು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ. ಅವರೆಲ್ಲ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಫಲವನ್ನು ನಾವು ಇಂದು ಅನುಭವಿಸುತ್ತಿದ್ದೇವೆ ಎಂದು ಹೇಳಿದರು.

ಮಹಾತ್ಮಾ ಗಾಂಧೀಜಿಯವರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಮೇಲೆ ಅದರ ಸ್ವರೂಪ ಮತ್ತಷ್ಟು ಬದಲಾಯಿತು. ಶಾಂತಿ ,ಅಹಿಂಸೆ, ಸತ್ಯಾಗ್ರಹ ತತ್ವಗಳ ಮೇಲೆ ಅಸಹಕಾರ ಚಳವಳಿ ಆರಂಭಗೊಂಡಿತು. ಗಾಂಧೀಜಿಯವರ ಹೋರಾಟ ವಿಶ್ವಕ್ಕೆ ಮಾದರಿ ಎನ್ನುವಂತಾಯಿತು. ಗಾಂಧೀಜಿಯವರು ಸ್ವಾತಂತ್ರ್ಯ ಚಳವಳಿ ಜತೆಗೆ ಅಸ್ಪ್ರಶ್ಯತೆ ನಿವಾರಣೆ, ಪಾನ ನಿಷೇಧ, ಖಾದಿ ಪ್ರಚಾರ ಮೊದಲಾದ ರಚನಾತ್ಮಕ ಕಾರ್ಯಗಳಿಗೆ ಇಂಬು ನೀಡಿದರು ಎಂದರು.

ಅಸ್ಪಶ್ಯತೆ ನಿವಾರಣೆಗಾಗಿ ಅವರು ಹೋರಾಟ ಕೈಗೊಂಡ ವೇಳೆ ಬಾಗಲಕೋಟೆ ಜಿಲ್ಲೆಗೂ ಆಗಮಿಸಿದ್ದರು. ಅಂದು ತಳ ಸಮುದಾಯಗಳ ಜನರ ಅಭಿವೃದ್ಧಿಗಾಗಿ ಮತ್ತು ಊರು ಕೇರಿಗಳ ಸ್ವಚ್ಛತೆ ಬಗ್ಗೆ ನೀಡಿದ ಜನಜಾಗೃತಿಯು ಇಂದಿಗೂ ನಮಗೆ ಮಾದರಿಯಾಗಿದೆ. ಬಸವಣ್ಣವರ ಮಹಾ ಮಾನವತಾವಾದವನ್ನು ಪುಷ್ಟೀಕರಿಸಿದ ಗಾಂಧೀಜಿಯವರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತಳ ಸಮುದಾಯಗಳ ಜನರು ಅಭಿವೃದ್ದಿ ಹೊಂದಬೇಕು ಎಂದು ಬಯಸಿದಂತೆ, ಇಂದು ನಮ್ಮ ಸಮಾಜದಲ್ಲಿ ಸಮಾನತೆ ಮೂಡಿ ಹೊಸ ಮನ್ವಂತರಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಸಂಸದ ಪಿ.ಸಿ. ಗದ್ದಿಗೌಡರ, ಜಿಪಂ. ಅಧ್ಯಕ್ಷೆ ವೀಣಾ ಕಾಶಪ್ಪನವರ, ಶಾಸಕ ವೀರಣ್ಣ ಚರಂತಿಮಠ ಇತರರು ಇದ್ದರು.

ಜನಮನ ಸೆಳೆದ ಶಾಲಾ ಮಕ್ಕಳ ಸಮೂಹ ಗಾಯನ:

ಸ್ವಾತಂತ್ರೋತ್ಸವ ನಿಮಿತ್ತ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ನಗರದ ನಾನಾ ಶಾಲಾಮಕ್ಕಳ ರಾಷ್ಟ್ರ ಭಕ್ತಿ ಗೀತೆಯ ಸಮೂಹ ಗಾಯ ನೃತ್ಯ ಪ್ರದರ್ಶನ ಜನಮನ ಸೆಳೆದವು. ಬಾಗಲಕೋಟೆ ಬಸವೇಶ್ವರ ಶಿಶುವಿಹಾರ ಶಾಲೆಯ ೨೦೦ ಮಕ್ಕಳ ಸೈನಿಕನಿಗೆ ಗೌರವ ಸಲ್ಲಿಸುವ ಜೈ ಜವಾನ ಸಮೂಹ ಗಾಯನ, ಸೇಂಟ್ ಆ್ಯನ್ಸ್ ಸ್ಕೂಲ್‌ನ ೨೫೦ ಮಕ್ಕಳ ಒಂದೇ ಮಾತರಂ, ಸಕ್ರಿ ಪ್ರೌಢಶಾಲೆಯ ೧೭೫ ವಿದ್ಯಾರ್ಥಿಗಳ ಈ ಮಣ್ಣಿನಲ್ಲಿ, ಗಾಳಿಯಲ್ಲಿ ಉಸಿರಾಡಿದರೆ ಒಂದೊಮ್ಮೆ ಸಮೂಹ ಗಾಯನ ಹಾಗೂ ಪ್ರತಿಭಾನ್ವಿತ ಎಸ್ಸಿ, ಎಸ್‌ಟಿ ವಿದ್ಯಾರ್ಥಿನಿಯರ ವಸತಿ ಶಾಲೆ ಮಕ್ಕಳ ಸಮೂಹ ಗಾಯನ ಕಾರ್ಯಕ್ರಮಗಳು ನೆರೆದಿದ್ದವರ ಗಮನ ಸೆಳೆದವು.

click me!