ಹೊಸ ವರ್ಷಾಚರಣೆ ವೇಳೆ ಮಹಿಳೆಯರ ಹಿತದೃಷ್ಟಿಯಿಂದ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒಳಗೊಂಡ ಎಂಟು ಚಾಮುಂಡಿ ಪಡೆ ರಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ರಮೇಶ್ ಹೇಳಿದರು.
ಮೈಸೂರು (ಡಿ.29): ಹೊಸ ವರ್ಷಾಚರಣೆ ವೇಳೆ ಮಹಿಳೆಯರ ಹಿತದೃಷ್ಟಿಯಿಂದ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒಳಗೊಂಡ ಎಂಟು ಚಾಮುಂಡಿ ಪಡೆ ರಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ರಮೇಶ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಭ ಕೋರುವ ನೆಪದಲ್ಲಿ ಮಹಿಳೆಯರೊಂದಿಗೆ ಕೀಟಲೆ, ಅಸಭ್ಯವಾಗಿ ವರ್ತಿಸಿದರೆ ಎಚ್ಚರಿಕೆ ಮೂಡಿಸಲು ಪಿಂಕ್ಚಾಮುಂಡಿ ಪಡೆ ರಚಿಸಲಾಗಿದೆ ಎಂದರು. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುವ ವನಿತೆಯರ ಹಿತದೃಷ್ಟಿಯಿಂದ ಈ ಪಡೆ ರಚಿಸಲಾಗಿದೆ. ಹೊಸ ವರ್ಷ ಆಚರಣೆ ವೇಳೆ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ವನಿತೆಯರ ರಕ್ಷಣೆ ದೃಷ್ಟಿಯಿಂದ ಈ ಪಡೆ ಕಾರ್ಯ ನಿರ್ವಹಿಸಲಿದೆ ಎಂದು ಅವರು ಹೇಳಿದರು.
ಮಹಿಳೆಯರು ಹೆಚ್ಚಾಗಿ ಸೇರಿರುವ ಅರಮನೆ ಸೇರಿದಂತೆ ಕೆಲವೆಡೆ ಈ ಚಾಮುಂಡಿ ಪಡೆ ವಾಹನ ಸಂಚರಿಸಿ ಪುಂಡರ ಮೇಲೆ ನಿಗಾವಹಿಸಲಿದೆ. ಡಿ. 31ರ ರಾತ್ರಿ ಹೊಸ ವರ್ಷ ಆಚರಣೆ ನೆಪದಲ್ಲಿ ವಿದ್ಯಾರ್ಥಿಗಳು, ಯುವಕರು ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸಬಾರದು. ವರ್ತಿಸಿದರೆ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು ಸಾಂಸ್ಕೃತಿಕ ಕಾರ್ಯಕ್ರಮದ ನೆಪದಲ್ಲಿ ಅಶ್ಲೀಲ, ಅರೆಬೆತ್ತಲೆ ಮತ್ತು ಮಾದಕ ವಸ್ತುಗಳ ಸೇವನೆ ಮತ್ತು ಜೂಟಾಟ ನಡೆಸುವುದನ್ನು ನಿಷೇಸಲಾಗಿದೆ.
ವಾಟ್ ಈಸ್ ದಿಸ್ ನಾನ್ ಸೆನ್ಸ್: ಪ್ರತಾಪ್ ಸಿಂಹ ವಿರುದ್ಧ ಗುಡುಗಿದ ಮಹದೇವಪ್ಪ
ಹೊಸ ವರ್ಷಾಚರಣೆ ಭದ್ರತೆಗಾಗಿ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, 300ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈಗಾಗಲೇ ಹೊಸ ವರ್ಷದ ಆಚರಣೆಗೆ ಮೈಸೂರು ನಗರಕ್ಕೆ ಬರುವ ಪ್ರವಾಸಿಗರ ಮೇಲೆ ನಿಗಾವಹಿಸಲಾಗಿದ್ದು, ಅನುಮಾನಸ್ಪದರ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು. ಅರಮನೆ ಆವರಣದಲ್ಲಿ ವಿಶೇಷವಾಗಿ ಹೊಸ ವರ್ಷ ಆಚರಣೆ ಕಾರ್ಯಕ್ರಮ ಇರುವುದರಿಂದ 10 ಸಾವಿರಕ್ಕೂ ಹೆಚ್ಚು ಮಂದಿ ಸೇರುವರು. ಈ ಹಿನ್ನಲೆಯಲ್ಲಿ ಅರಮನೆ ಸುತ್ತ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗುವುದು ಎಂದರು.
ಸಂತೋಷ ಕೂಟ ನಡೆಸುವ ನಗರದ ಎಲ್ಲಾ ಹೊಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್, ಹೋಂ ಸ್ಟೇ, ಸರ್ವೀಸ್ ಅಪಾರ್ಟ್ಮೆಂಟ್, ಅಪಾರ್ಟ್ ಅಸೋಸಿಯೇಷನ್, ಮಾಲ್ಸ್ ಮತ್ತು ಸಂಘ ಸಂಸ್ಥೆಗಳು ಡಿ. 30ರೊಳಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಹೊಸ ವರ್ಷಾಚರಣೆಗೆ ರಾತ್ರಿ 1 ಗಂಟೆಯವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು. ಡಿ. 31 ರಂದು ರಾತ್ರಿ 7 ಗಂಟೆಯಿಂದ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ರಾತ್ರಿ 9 ಗಂಟೆಯೊಳಗೆ ಬೆಟ್ಟದಿಂದ ಹಿಂದಿರುಗಲು ಸೂಚಿಸಲಾಗಿದೆ.
ಕೋಮುವಾದಿ ರಾಜಕಾರಣ ಕೊನೆಗಾಣಿಸಬೇಕು: ಸಚಿವ ಮಹದೇವಪ್ಪ
ಭದ್ರತೆಗಾಗಿ 797 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, 12 ಸಿಎಆರ್, 4 ಕೆಎಸ್ಆರ್ಪಿ ತುಕಡಿ, 4 ಕಮಾಂಡೋ ಪಡೆ, ನಗರದೆಲ್ಲೆಡೆ 334 ಸಿಸಿ ಟಿವಿ ಕ್ಯಾಮರಾ ಅಳವಡಿಸಿ ಕಂಟ್ರೋಲ್ ರೂಂ ಮೂಲಕ ಕಣ್ಗಾವಲು, ಅಸಭ್ಯ ವರ್ತನೆ ತಡೆಗೆ 36 ವಿಶೇಷ ಕಾರ್ಯಪಡೆ ರಚನೆ, ಮಹಿಳೆಯರ ರಕ್ಷಣೆಗೆ 8 ಚಾಮುಂಡಿ ಪಡೆ, 30 ಚೆಕ್ ಪೋಸ್ಟ್ ನಿರ್ಮಿಸಿ ತಪಾಸಣೆ, ರಿಂಗ್ ರಸ್ತೆಯಲ್ಲಿ ನಿಗಾವಹಿಸಲು 12 ಗರುಡಾ ವಾಹನ, ಮದ್ಯ ಸೇವಿಸಿ ವಾಹನ ಚಾಲನೆ ತಡೆಗೆ 5 ಸಂಚಾರಿ ಕ್ಷಿಪ್ರ ಕಾರ್ಯಪಡೆ ನಿಯೋಜಿಸಲಾಗಿದೆ. ಈ ವೇಳೆ ಡಿಸಿಪಿಗಳಾದ ಎಂ. ಮುತ್ತುರಾಜ್, ಜಾಹ್ನವಿ ಇದ್ದರು.