ಪೇಡಾ ಗ್ರಾಮದಲ್ಲೊಂದು ಆಕರ್ಷಣೀಯ ಉದ್ಯಾನ, ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ್ ಗಾಣಿಗೇರ ವಿಶೇಷ ಕಾಳಜಿಗೆ ಭಾರೀ ಮೆಚ್ಚುಗೆ.
ಅಣ್ಣಾಸಾಬ ತೆಲಸಂಗ
ಅಥಣಿ(ಜು.07): ಹಸಿರೇ ಉಸಿರು, ಕಾಡು ಬೆಳೆಸಿ ನಾಡು ಉಳಿಸಿ, ಮನೆಗೊಂದು ಮರ, ಊರಿಗೊಂದು ವನ ಎಂಬ ಪರಿಸರದ ನುಡಿಮುತ್ತುಗಳನ್ನು ಸರಳವಾಗಿ ಹೇಳುತ್ತೇವೆ. ಆದರೆ, ಈ ಮಾತಿನಂತೆ ಮುನ್ನಡೆಯುವವರು ಬೆರಳೆಣಿಕೆಯಷ್ಟುಜನ ಮಾತ್ರ. ಇಲ್ಲೊಬ್ಬ ಅರಣ್ಯ ಇಲಾಖೆ ಅಧಿಕಾರಿ ಪರಿಸರ ಪ್ರೀತಿ ಮೆರೆದು ಬರಡು ಭೂಮಿಯನ್ನು ಹಸಿರುಮಯವಾಗಿಸಿದ್ದಾರೆ.
ಅಥಣಿ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿ ಪ್ರಶಾಂತ ಗಾಣಿಗೇರ ಪರಿಶ್ರಮದ ಫಲವಾಗಿ ಇಂದು ಬರಡು ಭೂಮಿಯಲ್ಲಿ ಸಾವಿರಾರು ಮರಗಳು ಬೆಳೆದು ನಿಂತಿವೆ. ಸದ್ಯ ಕಾಗವಾಡ ತಾಲೂಕಿನಲ್ಲಿ ವಿಶೇಷವಾಗಿ ಪೇಡೆ ತಯಾರಿಕೆಗೆ ಪ್ರಸಿದ್ಧಿಯಾಗಿರುವ ಐನಾಪುರ ಗ್ರಾಮದಲ್ಲಿ ಪಾಳು ಬಿದ್ದಿರುವ ಜಮೀನಿನ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ್ ಗಾಣಿಗೇರ ವಿಶೇಷ ಕಾಳಜಿ ವಹಿಸಿದ್ದರು. ಹೀಗಾಗಿ ಈ ಪ್ರದೇಶ ಇಂದು ನಂದನವನದಂತೆ ಕಂಗೊಳಿಸಿದ್ದು, ಈ ಉದ್ಯಾನವನಕ್ಕೆ ಅದೇ ಗ್ರಾಮದ ಗ್ರಾಮ ದೇವತೆಯಾದ ಸಿದ್ಧೇಶ್ವರ ದೇವರ ಹೆಸರನ್ನು ನಾಮಕರಣ ಮಾಡಲಾಗಿದೆ.
ಬೆಳಗಾವಿ: ಊರ ಹೆಸರೇ ತಪ್ಪು ಕನ್ನಡಕ್ಕೆ ಅವಮಾನ
ಸುಮಾರು 15 ಎಕರೆ ಪ್ರದೇಶದಲ್ಲಿ ಇಲಾಖೆಯು ಜನರ ಗಮನ ಸೆಳೆಯುವಂತೆ ಸಿದ್ಧೇಶ್ವರ ಟ್ರೀ ಪಾರ್ಕ್ ಉದ್ಯಾನವನ ನಿರ್ಮಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಉದ್ಯಾನವನಕ್ಕೆ ಬರುವ ಜನರು ಇಲ್ಲಿನ ಸುಂದರ ವಾತಾವರಣ ಆಸ್ವಾದಿಸಿ ಖುಷಿ ಪಡುತ್ತಿದ್ದಾರೆ. ಮುಖ್ಯದ್ವಾರವು ಆಕರ್ಷಣೆಯಿಂದ ಕೂಡಿದೆ. ಒಳಗೆ ಕಾಲಿಡುತ್ತಿದ್ದಂತೆ ಪರಿಸರ ಮೇಲೆ ಆಗುತ್ತಿರುವ ಅತಿಕ್ರಮಣ ಕುರಿತು ಹಲವು ಬಿತ್ತಿಚಿತ್ರಗಳು ಗಮನಸೆಳೆಯುತ್ತವೆ. ಪ್ರತಿಯೊಬ್ಬರಲ್ಲಿಯೂ ಪರಿಸರ ಪ್ರೇಮ ಹೆಚ್ಚಾಗಬೇಕು, ಗಿಡಮರಗಳನ್ನು ನೆಟ್ಟು ಪೋಷಿಸಬೇಕು ಎನ್ನುವ ವಿವರಣೆಗಳನ್ನು ಮನಮುಟ್ಟುವಂತೆ ಬರೆಸಲಾಗಿದೆ.
ಶುದ್ಧ ನೀರಿನ ಘಟಕ:
ಈ ಉದ್ಯಾನವನದಲ್ಲಿ ಬರುವ ವಾಯುವಿಹಾರಿಗಳಿಗೆ ಶುದ್ಧ ಕುಡಿಯುವ ನೀರನ್ನು ಘಟಕದಲ್ಲಿ ಸ್ಥಾಪನೆ ಮಾಡಲಾಗಿದೆ. ಸುಸಜ್ಜಿತ ಶೌಚಾಲಯ ಇದೆ. ನೀರಿಗೆ ಯಾವುದೇ ತೊಂದರೆ ಆಗಬಾರದೆಂದು ಎರಡು ಕೊಳವೆ ಬಾವಿಗಳನ್ನು ಕೊರೆಸಿ, ಉದ್ಯಾನವನದ ಸಸಿಗಳಿಗೆ ನೀರುಣಿಸಲಾಗುತ್ತಿದೆ. ಪಾಳುಬಿದ್ದ ಜಮೀನು ಗುರುತಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಅರಣ್ಯ ಇಲಾಖೆಯ 6 ಎಕರೆ ಹಾಗೂ ಕಂದಾಯ ಇಲಾಖೆ ಇನ್ನುಳಿದ ಜಮೀನನ್ನು ಬಳಸಿಕೊಂಡು ಗಮನಸೆಳೆಯುವಂತೆ ಉದ್ಯಾನವನ ನಿರ್ಮಾಣ ಮಾಡಲಾಗಿದೆ. 6 ಎಕರೆ ಪ್ರದೇಶದಲ್ಲಿರುವ ಕೆರೆಗೆ ಪಕ್ಕದಲ್ಲಿರುವ ಕೃಷ್ಣಾ ನದಿಯಿಂದ ನೀರು ಸೇರಿಸಿ, ಈ ಪ್ರದೇಶವನ್ನು ಇನ್ನಷ್ಟುಆಕರ್ಷಕ ಮಾಡಬೇಕು ಎನ್ನುವುದು ಇಲ್ಲಿನ ಜನತೆಯ ಆಶಯ.
ಟ್ರೀ ಪಾರ್ಕ್‌ನಲ್ಲಿವೆ 3,500ಕ್ಕೂ ಹೆಚ್ಚು ವಿವಿಧ ಗಿಡಗಳು:
ಐನಾಪುರ ಗ್ರಾಮದ ಸಿದ್ಧೇಶ್ವರ ದೇವಸ್ಥಾನದ ಪಕ್ಕದ ಸುಮಾರು 15 ಎಕರೆ ಖಾಲಿ ಜಮೀನಿನಲ್ಲಿರುವ ಈ ಟ್ರೀ ಪಾರ್ಕ್ನಲ್ಲಿ 3,500ಕ್ಕೂ ಅಧಿಕ ವಿವಿಧ ಬಗೆಯ ಗಿಡಗಳು ತಲೆ ಎತ್ತಿನಿಂತಿವೆ. ವನಸ್ಪತಿ ಗಿಡಗಳನ್ನೇ ಹೆಚ್ಚು ಬೆಳೆಸಲಾಗಿದೆ. ಈ ಉದ್ಯಾನವನವನ್ನು ಸುತ್ತ-ಮುತ್ತಲಿನ ತಾಲೂಕುಗಳಿಗೆ ಮಾದರಿ ಎನ್ನುವಂತೆ ನಿರ್ಮಿಸಲಾಗಿದೆ. ಕೆರೆಯ ಸುತ್ತ ವಾಕಿಂಗ್ ಲೇನ್‌ಹಾಗೂ ಮಕ್ಕಳಿಗೆ ಆಟವಾಡಲು ವಿವಿಧ ಬಗೆಯ ಆಟಿಕೆ ಸಾಮಾನುಗಳು, ಕುಳಿತುಕೊಳ್ಳಲು ಪ್ಯಾರಾಬೋಲಾಗಳು, ಕಾರಂಜಿ, ಓಪನ್ ಜಿಮ್ ಉಪಕರಣಗಳು ಹಾಗೂ 31 ಸೋಲಾರ್ ದೀಪಗಳನ್ನು ಉದ್ಯಾನದಲ್ಲಿ ಅಳವಡಿಸಲಾಗಿದೆ.
ನರೇಗಾದಲ್ಲಿ ಬೆಳಗಾವಿ ಜಿಲ್ಲೆಯೇ ಪ್ರಥಮ
ಆಂಥೋನಿ ಎಸ್.ಮರಿಯಪ್ಪ ಹಾಗೂ ಸುನೀತಾ ನಿಂಬರಗಿ ಅವರ ಮಾರ್ಗದರ್ಶನದಿಂದ ಸರ್ಕಾರದಿಂದ ಬಂದ ಅನುದಾನದ ಜೊತೆಗೆ ಪರಿಸರ ಪ್ರೇಮಿಗಳಿಂದ ದೇಣಿಗೆ ಪಡೆದು ಜನತೆಗೆ ಅನುಕೂಲವಾಗುವ ಕೆಲಸ ಮಾಡಿದ್ದೇನೆ. ಗ್ರಾಮಸ್ಥರು ಗಿಡ ಮರಗಳಿಗೆ ಯಾವುದೇ ಹಾನಿಯಾಗದ ರೀತಿಯಲ್ಲಿ ಈ ಉದ್ಯಾನವನದ ಸದುಪಯೋಗ ಪಡೆದುಕೊಳ್ಳಬೇಕು ಅಂತ ಅಥಣಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಪ್ರಶಾಂತ ಗಾಣಿಗೇರ ಹೇಳಿದ್ದಾರೆ.
ನಮ್ಮ ಗ್ರಾಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಅವರ ಸಿಬ್ಬಂದಿ ಪರಿಶ್ರಮ ವಹಿಸಿ ಸುಂದರವಾದ ಉದ್ಯಾನವನ ನಿರ್ಮಾಣವಾಗಿದ್ದು, ನಮ್ಮೆಲ್ಲರಿಗೆ ಖುಷಿ ತಂದಿದೆ ಅಂತ ಐನಾಪುರ ಗ್ರಾಮಸ್ಥ ಸಂಜೀವ ಬಿರಡಿ ತಿಳಿಸಿದ್ದಾರೆ.