Forest fire: ಪಶ್ಚಿಮ ಘಟ್ಟದಲ್ಲಿ ಹಬ್ಬಿದ ಕಾಡ್ಗಿಚ್ಚು ನಿಯಂತ್ರಣ, 250 ಎಕರೆ ಅರಣ್ಯ ನಾಶ!

Published : Mar 12, 2023, 07:22 AM IST
Forest fire: ಪಶ್ಚಿಮ ಘಟ್ಟದಲ್ಲಿ ಹಬ್ಬಿದ ಕಾಡ್ಗಿಚ್ಚು ನಿಯಂತ್ರಣ, 250 ಎಕರೆ ಅರಣ್ಯ ನಾಶ!

ಸಾರಾಂಶ

ಕರಾವಳಿಯ ಪಶ್ಚಿಮ ಘಟ್ಟದಲ್ಲಿ ಕಳೆದ ಒಂದು ವಾರದಿಂದ ಹಬ್ಬಿದ ಕಾಡ್ಗಿಚ್ಚು ಶನಿವಾರ ನಿಯಂತ್ರಣಕ್ಕೆ ಬಂದಿದೆ. ದ.ಕ.ಜಿಲ್ಲೆಯ ಬೆಳ್ತಂಗಡಿ ಹಾಗೂ ಕಡಬ ತಾಲೂಕು ವ್ಯಾಪ್ತಿಯ ರಕ್ಷಿತಾರಣ್ಯಗಳಲ್ಲಿ ಬೇಸಗೆಯ ಝಳಕ್ಕೆ ಹಠಾತ್‌ ಕಾಣಿಸಿಕೊಂಡಿದ್ದ ಬೆಂಕಿಯ ಕೆನ್ನಾಲಗೆ ಎಲ್ಲವನ್ನೂ ಆಪೋಶನ ತೆಗೆದುಕೊಂಡಿತ್ತು. ಸರಿಸುಮಾರು 200ರಿಂದ 250 ಎಕರೆ ಪ್ರದೇಶದಲ್ಲಿ ಕಾಡ್ಗಿಚ್ಚು ವ್ಯಾಪಿಸಿತ್ತು. ಕೊನೆಗೂ ಹರಸಾಹಸಪಟ್ಟು ಅರಣ್ಯ ಇಲಾಖೆ, ರೈಲ್ವೆ ಇಲಾಖೆ, ಅಗ್ನಿಶಾಮಕದಳ ಹಾಗೂ ಸ್ಥಳೀಯರ ನೆರವಿನಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.

ಮಂಗಳೂರು (ಮಾ.12) ಕರಾವಳಿಯ ಪಶ್ಚಿಮ ಘಟ್ಟದಲ್ಲಿ ಕಳೆದ ಒಂದು ವಾರದಿಂದ ಹಬ್ಬಿದ ಕಾಡ್ಗಿಚ್ಚು ಶನಿವಾರ ನಿಯಂತ್ರಣಕ್ಕೆ ಬಂದಿದೆ. ದ.ಕ.ಜಿಲ್ಲೆಯ ಬೆಳ್ತಂಗಡಿ ಹಾಗೂ ಕಡಬ ತಾಲೂಕು ವ್ಯಾಪ್ತಿಯ ರಕ್ಷಿತಾರಣ್ಯಗಳಲ್ಲಿ ಬೇಸಗೆಯ ಝಳಕ್ಕೆ ಹಠಾತ್‌ ಕಾಣಿಸಿಕೊಂಡಿದ್ದ ಬೆಂಕಿಯ ಕೆನ್ನಾಲಗೆ ಎಲ್ಲವನ್ನೂ ಆಪೋಶನ ತೆಗೆದುಕೊಂಡಿತ್ತು. ಸರಿಸುಮಾರು 200ರಿಂದ 250 ಎಕರೆ ಪ್ರದೇಶದಲ್ಲಿ ಕಾಡ್ಗಿಚ್ಚು ವ್ಯಾಪಿಸಿತ್ತು. ಕೊನೆಗೂ ಹರಸಾಹಸಪಟ್ಟು ಅರಣ್ಯ ಇಲಾಖೆ, ರೈಲ್ವೆ ಇಲಾಖೆ, ಅಗ್ನಿಶಾಮಕದಳ ಹಾಗೂ ಸ್ಥಳೀಯರ ನೆರವಿನಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.

ಬೆಳ್ತಂಗಡಿ(Beltandy)ಯ ಶಿಶಿಲ, ಶಿಬಾಜೆ, ಅರಸಿನಮಕ್ಕಿ, ದಿಡುಪೆ, ನೆರಿಯಾ, ಕೊಣಾಜೆ, ಸಿರಿಬಾಗಿಲು, ಕೊಣಾಜೆಗಳ ರಕ್ಷಿತಾರಣ್ಯಗಳಿಗೆ ಬೆಂಕಿ(forest fire)ಬಿದ್ದಿತ್ತು. ಈ ಹಿಂದೆಯೂ ಪಶ್ಚಿಮ ಘಟ್ಟಪ್ರದೇಶದ(westernghat) ಅಲ್ಲಲ್ಲಿ ಬೆಂಕಿ ಕಾಣಿಸಿತ್ತು. ಆದರೆ ಅವೆಲ್ಲ ಸಣ್ಣಪುಟ್ಟಕಾಡ್ಗಿಚ್ಚು ಆಗಿದ್ದು, ಬೇಗನೆ ಶಮನವಾಗುತ್ತಿದ್ದವು. ಆದರೆ ಈ ಬಾರಿಯ ಕಾಡ್ಗಿಚ್ಚು ಒಂದು ವಾರಗಳ ಕಾಲ ಹತೋಟಿಗೆ ಬಂದಿಲ್ಲ. ಕಾಡ್ಗಿಚ್ಚು ಹತೋಟಿಗೆ ಅರಣ್ಯ ಅಧಿಕಾರಿಗಳು ಹರಸಾಹಸ ಪಡುವಂತಾಗಿತ್ತು. ಕೊನೆಗೂ ಅಧಿಕಾರಿಗಳ ಸತತ ಪ್ರಯತ್ನದಿಂದ ನಿಯಂತ್ರಣ ಸಾಧ್ಯವಾಗಿದೆ.

ಮಲೆನಾಡಿನಲ್ಲಿ ಹೆಚ್ಚಾಗುತ್ತಿದೆ ಕಾಡ್ಗಿಚ್ಚು, ಬೆಂಕಿ ನಂದಿಸಲು ಹೋಗಿದ್ದ ಮೂವರು ಅರಣ್ಯ ಅಧಿಕಾರಿಗಳ ಬೈಕ್ ಭಸ್ಮ!

ಹತೋಟಿಗೆ ಕ್ರಮ: ಮಂಗಳೂರು-ಬೆಂಗಳೂರು ರೈಲು ಹಳಿ ಹಾದುಹೋಗಿರುವ ಸಿರಿಬಾಗಿಲು, ಎಡಕುಮೇರಿ ಹಾಗೂ ಸುಬ್ರಹ್ಮಣ್ಯ ಮಾರ್ಗ(Subrahmanya railway line)ಗಳ ನಡುವಿನಲ್ಲಿ ಕೂಡ ಕಾಡ್ಗಿಚ್ಚು ಕಾಣಿಸಿತ್ತು. ಇದು ರೈಲು ಸಂಚಾರದ ಮೇಲೆ ಅಪಾಯ ಉಂಟು ಮಾಡುವ ಸಾಧ್ಯತೆ ಇತ್ತು. ಮಂಗಳೂರು ವಿಭಾಗ ಅರಣ್ಯಾಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಿಯಂತ್ರಿಸುವಲ್ಲಿ ಹೊಸ ಪ್ರಯೋಗ ನಡೆಸಿದ್ದಾರೆ. ಈ ಮಾರ್ಗದಲ್ಲಿ ಗುರುವಾರ ರಾತ್ರಿ ಕಾಡ್ಗಿಚ್ಚು ಹಬ್ಬುತ್ತಿರುವುದನ್ನು ನೋಡಿದ ಅಧಿಕಾರಿಗಳ ತಂಡ ಹಳಿಗಳಲ್ಲಿ ಟ್ರಾಲಿಯಲ್ಲಿ ತೆರಳಿ ಪರಿಶೀಲನೆ ನಡೆಸಿ ರೈಲಿನ ವ್ಯಾಗನರ್‌ ಮೂಲಕ ಹಳಿಯ ಎರಡೂ ಬದಿಗಳ ಗುಡ್ಡಗಳಿಗೆ ಟ್ಯಾಂಕರ್‌ಗಳಲ್ಲಿ ನೀರು ಸಿಂಪರಣೆಯ ಪರಿಹಾರ ಕಂಡುಕೊಂಡಿದ್ದಾರೆ. ಅದರಂತೆ ಶುಕ್ರವಾರ ಎರಡು ಹೊತ್ತು ವ್ಯಾಗನರ್‌ಗಳಲ್ಲಿ ಟ್ಯಾಂಕರ್‌ ಮೂಲಕ ಕಾಡ್ಗಿಚ್ಚು ಎದ್ದಿರುವ ಪ್ರದೇಶಗಳಲ್ಲಿ ನೀರು ಸಿಂಪರಣೆ ಮಾಡಿದ್ದಾರೆ. ಈ ಮೂಲಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ರೀತಿ ನೀರು ಸಿಂಪರಣೆ ಶನಿವಾರವೂ ಮುಂದುವರಿದಿದೆ.

ಹೆದ್ದಾರಿಯಲ್ಲೂ ಶಮನ ತಂಡ: ಶಿರಾಡಿ ಘಾಟ್‌ ಮೂಲಕ ಮಂಗಳೂರು-ಬೆಂಗಳೂರು ಸಂಪರ್ಕಿಸುವ ಹೆದ್ದಾರಿ(Mangaluru-bengaluru expressway) ಸಾಗುತ್ತದೆ. ಘಾಟ್‌ ಪ್ರದೇಶದಲ್ಲಿ ಕಾಡ್ಗಿಚ್ಚು ಸಂಭವಿಸಿದರೆ ವಾಹನ ಸಂಚಾರಕ್ಕೆ ತೊಡಕಾಗುತ್ತದೆ. ಇಂತಹ ಸಂದರ್ಭವನ್ನು ಎದುರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜತೆ ಮಾತುಕತೆ ನಡೆಸಿದ್ದಾರೆ. ಸಕಲೇಶಪುರ ಬಳಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರ ಮೂಲಕ ಕಾಡ್ಗಿಚ್ಚು ಸಂಭವಿಸಿದರೆ ಕೂಡಲೇ ಹತೋಟಿಗೆ ಧಾವಿಸುವಂತೆ ಕೋರಿಕೊಂಡಿದ್ದಾರೆ.

ಅನಿವಾರ್ಯವಾದರೆ ಹೆಲಿಕಾಪ್ಟರ್‌ ಬಳಕೆ: ಪಶ್ಚಿಮ ಘಟ್ಟಗಳ ದಟ್ಟಾರಣ್ಯಗಳಲ್ಲಿ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಇದು ಮತ್ತೆ ಮುಂದುವರಿದರೆ ಅನಿವಾರ್ಯವಾಗಿ ಹೆಲಿಕಾಪ್ಟರ್‌ ಕಾರ್ಯಾಚರಣೆಗೆ ಮೊರೆ ಹೋಗಲು ನಿರ್ಧರಿಸಲಾಗಿದೆ.

ಬೆಂಕಿ ನಂದಿಸಲು ದಟ್ಟಾರಣ್ಯಗಳಿಗೆ ಹೆಲಿಕಾಪ್ಟರ್‌ ಬಳಕೆ ಮಾಡುತ್ತಾರೆ. ಇಲ್ಲಿ ಕೂಡ ಅನಿವಾರ್ಯವಾದರೆ ಗೋವಾದಿಂದ ಸೇನಾ ಹೆಲಿಕಾಪ್ಟರ್‌ ಬಳಕೆ ಮಾಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿ ನಂದಿಸಲು ಸೊಪ್ಪು ಬಳಕೆಯೇ ಗತಿ!

ಗುಡ್ಡಗಾಡು, ಅರಣ್ಯ ಪ್ರದೇಶಗಳಿಗೆ ಬೆಂಕಿ ಬಿದ್ದಾಗ ನಂದಿಸಲು ಅರಣ್ಯ ಇಲಾಖೆಯ ಪ್ರಮುಖ ಅಸ್ತ್ರ ಯಾವುದು ಎಂದರೆ ಬರೀ ಕೈ ಮಾತ್ರ!

ಕೈಯಲ್ಲಿ ಗನ್‌ ಹಿಡಿದುಕೊಂಡು ಅರಣ್ಯ ಗಸ್ತು ನಡೆಸುವ ಅಧಿಕಾರಿ, ಸಿಬ್ಬಂದಿಗೆ ಬೆಂಕಿ ನಂದಿಸಲು ಯಾವುದೇ ಆಧುನಿಕ ಶಮನ ತಂತ್ರಜ್ಞಾನ ಇಲ್ಲವೇ ನಿರ್ದಿಷ್ಟಪರಿಕರ ಬಂದಿಲ್ಲ. ಏನಿದ್ದರೂ ಮಾನವ ಕಾರ್ಯಾಚರಣೆಯೇ ಗತಿ. ಅಗ್ನಿಶಾಮಕ ವಾಹನ ಸಂಚರಿಸುವಲ್ಲಿ ಮಾತ್ರ ಅಗ್ನಿಶಮನ ಸಾಧ್ಯ, ಕಾಡಿನ ಒಳಗೆ, ದಟ್ಟಾರಣ್ಯದಲ್ಲಿ ಇವು ಯಾವುದೂ ಪ್ರಯೋಜನಕ್ಕೆ ಬಾರದು. ಹಾಗೆಂದು ಹೆಲಿಕಾಪ್ಟರ್‌ ಕಾರ್ಯಾಚರಣೆಯೂ ತಕ್ಷಣಕ್ಕೆ ಸಾಧ್ಯವಾಗದು. ಈ ಬಾರಿ ಪಶ್ಚಿಮ ಘಟ್ಟಕ್ಕೆ ಕಾಡ್ಗಿಚ್ಚು ಬಿದ್ದಾಗ ಅರಣ್ಯ ಸಿಬ್ಬಂದಿ ಕೈಯಲ್ಲಿ ಸೊಪ್ಪು ಹಿಡಿದು ನಂದಿಸುತ್ತಾರೆ. ಇಂತಹ ದಯನೀಯ ಪರಿಸ್ಥಿತಿಯಲ್ಲಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಬೇಕಾಗಿದೆ.

ಚಾಮುಂಡಿಬೆಟ್ಟ ಸೇರಿ 4 ಕಡೆ ಕಾಳ್ಗಿಚ್ಚು: ಅಪಾರ ಪ್ರಮಾಣದ ಅರಣ್ಯ ಪ್ರದೇಶ ಬೆಂಕಿಗೆ ಆಹುತಿ

ಪಶ್ಚಿಮ ಘಟ್ಟದಲ್ಲಿ ಕಾಣಿಸಿದ ಕಾಡ್ಗಿಚ್ಚು ಪ್ರಾಕೃತಿಕ ಅವಘಡದಂತೆ ಕಂಡುಬರುತ್ತಿಲ್ಲ. ಮೇಲ್ನೋಟಕ್ಕೆ ಇದು ಮಾನವ ನಿರ್ಮಿತ ಎಂದು ಕಾಣುತ್ತಿದೆ. ಇದರ ನಿಯಂತ್ರಣಕ್ಕೆ

ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಅನಿವಾರ್ಯವಾದರೆ ಹೆಲಿಕಾಪ್ಟರ್‌ ಬಳಕೆಗೂ ತೀರ್ಮಾನಿಸಲಾಗುವುದು.

-ಡಾ.ದಿನೇಶ್‌ ಕುಮಾರ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ವಿಭಾಗ

ಪಶ್ಚಿಮ ಘಟ್ಟಗಳಲ್ಲಿ ಕಾಡ್ಗಿಚ್ಚಿಗೆ 250 ಎಕರೆ ಪ್ರದೇಶ ನಾಶವಾಗಿದೆ. ಬೆಂಕಿ ನಿಯಂತ್ರಣಕ್ಕೆ ಸೇನಾ ಹೆಲಿಕಾಪ್ಟರ್‌ ಬಳಕೆ ಕುರಿತಂತೆ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗಿದೆ. ಅವರು ಅರಣ್ಯ ಇಲಾಖೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚಿಸಿದ್ದಾರೆ. ಇನ್ನು ಎರಡು ದಿನಗಳಲ್ಲಿ ಹೆಲಿಕಾಪ್ಟರ್‌ ಬಳಕೆಗೆ ನಿರ್ಧಾರ ಕೈಗೊಳ್ಳಲಾಗುವುದು. ಸಾಧ್ಯವಾದಷ್ಟುಅಗ್ನಿಶಾಮಕದಳ ಹಾಗೂ ಸ್ಥಳೀಯರ ನೆರವನ್ನು ಬಳಸಿಕೊಂಡು ಕಾಡ್ಗಿಚ್ಚು ಶಮನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

-ಹರೀಶ್‌ ಪೂಂಜಾ, ಶಾಸಕರು, ಬೆಳ್ತಂಗಡಿ

PREV
Read more Articles on
click me!

Recommended Stories

ನ್ಯಾಷನಲ್ ಹೆರಾಲ್ಡ್ ಪ್ರಕರಣ ರೀತಿ RSS ವಿರುದ್ಧ ಯಾಕೆ ಕೇಸ್ ಇಲ್ಲ? ಕೇಂದ್ರದ ವಿರುದ್ಧ ಪ್ರಿಯಾಂಕ್ ಪ್ರಶ್ನೆಗಳ ಸುರಿಮಳೆ!
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ