ಮಾಗಡಿ ಕೆರೆ ಸಮೀಪವೇ ಇರುವ ಶೆಟ್ಟಿಕೇರಿ ಕೆರೆ, ಪಕ್ಷಿಪ್ರೇಮಿಗಳಿಗೆ ಸಂಭ್ರಮ| ಈ ವರ್ಷ ಹೆಚ್ಚಿನ ಪ್ರಮಾಣದ ಪಕ್ಷಿಗಳು ಆಗಮಿಸಿರುವುದು ಅಚ್ಚರಿಗೆ ಕಾರಣ| ಉತ್ತರ ಏಶಿಯಾ ಖಂಡದಿಂದ ಈ ಪಕ್ಷಿಗಳು ಸುಮಾರು 6-7 ಸಾವಿರ ಕಿಮೀಗಳಷ್ಟು ದೂರಸಾಗಿ ಭಾರತಕ್ಕೆ ಬರುತ್ತಿವೆ|
ಅಶೋಕ ಸೊರಟೂರ
ಲಕ್ಷ್ಮೇಶ್ವರ(ಡಿ.28): ಸಮೀಪದ ಶೆಟ್ಟಿಕೇರಿ ಕೆರೆಗೆ ವಿದೇಶಗಳಿಂದ ಸಾವಿರಾರು ಹಕ್ಕಿಗಳು ವಲಸೆ ಬಂದಿದ್ದು, ಪಕ್ಷಿಪ್ರೇಮಿಗಳ ಸಂತಸಕ್ಕೆ ಕಾರಣವಾಗಿವೆ. ವಿದೇಶ ಪಕ್ಷಿಗಳ ನೆಚ್ಚಿನ ತಾಣ ಎನಿಸಿರುವ ಮಾಗಡಿ ಕೆರೆಯ ಸಮೀಪವೇ ಶೆಟ್ಟಿಕೇರಿ ಕೆರೆ ಇದೆ. ಇಲ್ಲಿ ಈ ವರ್ಷ ಹೆಚ್ಚಿನ ಪ್ರಮಾಣದ ಪಕ್ಷಿಗಳು ಆಗಮಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಮಾಗಡಿ ಕೆರೆಗೆ ಸಾವಿರಾರು ಪಕ್ಷಿಗಳು ಆಗಮಿಸಿದ್ದು, ಜಾಗದ ಕೊರತೆ ಉಂಟಾಗಿದೆ. ಜತೆಗೆ ಗದ್ದಲಕ್ಕೆ ಹೆದರಿ ಪ್ರಶಾಂತವಾದ ಶೆಟ್ಟಿಕೆರಿ ಕೆರೆಗೆ ಆಗಮಿಸಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದಾರೆ. ಉತ್ತರ ಏಶಿಯಾ ಖಂಡದಿಂದ ಈ ಪಕ್ಷಿಗಳು ಸುಮಾರು 6-7 ಸಾವಿರ ಕಿಮೀಗಳಷ್ಟು ದೂರಸಾಗಿ ಭಾರತಕ್ಕೆ ಬರುತ್ತಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ದೂರದ ಮಂಗೋಲಿಯಾ, ಟಿಬೆಟ್, ಸೈಬೇರಿಯಾ, ಚೀನಾ ಮೊದಲಾದ ದೇಶಗಳಲ್ಲಿ ಬೀಳುವ ಹಿಮದಿಂದ ತಪ್ಪಿಸಿಕೊಳ್ಳಲು ಬೆಚ್ಚನೆಯ ದಕ್ಷಿಣ ಭಾರತಕ್ಕೆ ಬರುತ್ತವೆ. ನವೆಂಬರ್ ತಿಂಗಳಿಂದ ಮಾರ್ಚ್ ಕೊನೆಯವರೆಗೆ ಈ ಪಕ್ಷಿಗಳು ಇಲ್ಲಿ ವಾಸ ಮಾಡಿ, ಬಿಸಿಲು ಹೆಚ್ಚಾಗುತ್ತಲೆ ಮರಳಿ ತಮ್ಮ ತಾಯ್ನಾಡಿಗೆ ಹೋಗುತ್ತವೆ.
ಗಸ್ತು ಆವಶ್ಯ:
ಶೆಟ್ಟಿಕೇರಿ ಕೆರೆ ಸುಮಾರು 137 ಎಕರೆ ವಿಸ್ತೀರ್ಣ ಹೊಂದಿರುವ ವಿಶಾಲ ಪ್ರದೇಶ. ಇದು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಪ್ರತಿ ವರ್ಷ ಇಲ್ಲಿ ಮೀನು ಸಾಕಾಣಿಕೆ ನಡೆಯುತ್ತದೆ. ಈ ವರ್ಷ ಮಳೆ ಸಾಕಷ್ಟು ಪ್ರಮಾಣದಲ್ಲಿ ಸುರಿದಿದ್ದರಿಂದ ಕೆರೆ ತುಂಬಿದೆ. ಹೀಗೆ ಪ್ರಶಾಂತ ವಾತಾವರಣ ಇರುವ ಕೆರೆಯಲ್ಲಿ ವಿದೇಶದಿಂದ ಸುಮಾರು 3-4 ಸಾವಿರದಷ್ಟು ಪಕ್ಷಿಗಳು ಈ ಸಾರೆ ಬಂದು ಬೀಡು ಬಿಟ್ಟಿವೆ. ಆದರೆ ಕೆರೆಯ ಸುತ್ತಲು ಯಾವುದೇ ಬೇಲಿ ಇಲ್ಲದೆ ಇರುವುದರಿಂದ ಅಕ್ಕ ಪಕ್ಕದ ಗ್ರಾಮಗಳ ನಾಯಿಗಳು ಕೆರೆಯ ದಂಡೆಗೆ ಬರುವ ಪಕ್ಷಿಗಳ ಮೇಲೆ ದಾಳಿ ಮಾಡುತ್ತಿವೆ. ಜತೆಗೆ ಬೇಟೆಗಾರರ ಕಾಟವೂ ಇದೆ. ಆದಕಾರಣ ಪಕ್ಷಿಗಳ ರಕ್ಷಣೆಗೆ ಅರಣ್ಯ ಇಲಾಖೆಯ ಕಾವಲು ಸಿಬ್ಬಂದಿ ನೇಮಕ ಮಾಡುವುದು ಅವಶ್ಯವಾಗಿದೆ ಎಂದು ಗ್ರಾಮಸ್ಥ ರಮೇಶ ಲಮಾಣಿ ಹೇಳುತ್ತಾರೆ.
ಲಕ್ಷ್ಮೇಶ್ವರ ಸಮೀಪದ ಶೆಟ್ಟಿಕೇರಿ ಕೆರೆಯಲ್ಲಿ ವಿಶ್ರಮಿಸುತ್ತಿರುವ ವಿದೇಶಿ ಬಾನಾಡಿಗಳು. ಮಾಗಡಿ ಕೆರೆ ಸಮೀಪವೇ ಇರುವ ಶೆಟ್ಟಿಕೇರಿ ಕೆರೆ, ಪಕ್ಷಿಪ್ರೇಮಿಗಳಿಗೆ ಸಂಭ್ರಮ ಗದಗ ಜಿಲ್ಲೆಯ ಸುತ್ತಮುತ್ತಲ ಪ್ರದೇಶದ ಸಾವಿರಾರು ಎಕರೆ ಜಮೀನುಗಳಲ್ಲಿ ಬೆಳೆಯುವ ಶೇಂಗಾ, ಕಡಲೆ, ಜೋಳ ಈ ಪಕ್ಷಿಗಳಿಗೆ ಉತ್ತಮ ಆಹಾರವಾಗಿವೆ. ಜತೆಗೆ ಬೆಚ್ಚನೆಯ ವಾತಾವರಣ ಇಲ್ಲಿದೆ. ಹೀಗಾಗಿ ಈ ಪ್ರದೇಶಕ್ಕೆ ವಲಸೆ ಬರುತ್ತವೆ. ಈ ಪಕ್ಷಿಗಳು ಪ್ರತಿದಿನ ಬೆಳಗ್ಗೆ 6 ಗಂಟೆಗೆ ಕೆರೆಯಿಂದ ಆಹಾರಕ್ಕಾಗಿ ಹಾರಿ ಹೋಗುತ್ತವೆ ಮತ್ತೆ 9 ಗಂಟೆಯ ಹೊತ್ತಿಗೆ ಆಗಮಿಸುತ್ತವೆ. ಅದೇ ರೀತಿ ಸಂಜೆ 5 ಗಂಟೆಗೆ ಮತ್ತೆ ಹಾರಿ ಹೋಗುತ್ತವೆ. ಸಂಜೆ 7 ರ ನಂತರ ಕೆರೆಗೆ ಆಗಮಿಸಿ ವಿಶ್ರಮಿಸುತ್ತಿವೆ. ಈ ಬಾರಿ ಸಾಕಷ್ಟು ಸಂಖ್ಯೆಯಲ್ಲಿ ಪಕ್ಷಿಗಳು ವಲಸೆ ಬಂದಿವೆ ಎಂದು ಅರಣ್ಯ ಇಲಾಖೆಯ ಗಾರ್ಡ್ ನೀಲಪ್ಪ ಪಶುಪತಿಹಾಳ ಅವರು ಹೇಳಿದ್ದಾರೆ.
ವಿದೇಶದಿಂದ ಹಾರಿಬರುವ ಪ್ರಮುಖ ಪಕ್ಷಿಗಳಲ್ಲಿ ಬಾರ್ ಹಡೆಡ್ ಗೂಸ್, ಬ್ರಾಹ್ಮಿಣಿ ಡಕ್, ಕಾಮನ್ ಪೋಚಾರ್ಡ್, ಗಾರ್ಗಿಣಿ, ಗ್ರೇ ಲೆಗ್ ಗೂಸ್ ಮುಂತಾದ ಬೇರೆ ಬೇರೆ ವರ್ಗಕ್ಕೆ ಸೇರಿದ ಸಾವಿರಾರು ಪಕ್ಷಿಗಳು ಇಲ್ಲಿ ಬರುತ್ತವೆ ಎಂದು ಶಿರಹಟ್ಟಿ ಅರಣ್ಯ ಸಹಾಯಕ ಅಧಿಕಾರಿ ಬಸವರಾಜ ವಿಭೂತಿ ಅವರು ತಿಳಿಸಿದ್ದಾರೆ.