ಮದುವೆಯಾಗದೇ ಗರ್ಭಿಣಿಯಾಗಿದ್ದ ಯುವತಿಯ ಮಗುವನ್ನು ಆಸ್ಪತ್ರೆಯವರೆ ಬೆದರಿಸಿ ಮಾರಾಟ ಮಾಡಿದ ಘಟನೆಯೊಂದು ನಡೆದಿದೆ.
ಕೊಪ್ಪ(ಡಿ.02): ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ವೈದ್ಯಾಧಿಕಾರಿಗಳು ನೀಡಿದ ದೂರಿನನ್ವಯ ಆಸ್ಪತ್ರೆಯ ಪ್ರಸೂತಿ ತಜ್ಞ ಸೇರಿ ನಾಲ್ವರ ವಿರುದ್ಧ ಸೋಮವಾರ ಕೊಪ್ಪ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಾನವಿ ಅವರು ನೀಡಿರುವ ದೂರಿನನ್ವಯ ಕೊಪ್ಪ ಪೋಲೀಸ್ ಠಾಣೆಯಲ್ಲಿ ಡಾ.ಜಿ.ಎಸ್.ಬಾಲಕೃಷ್ಣ, ಸ್ಟಾಫ್ ನರ್ಸ್‌ಗಳಾದ ಶೋಭಾ, ರೇಷ್ಮಾ, ಮಗು ಖರೀದಿಸಿದ್ದ ಪ್ರೇಮಲತಾ ವಿರುದ್ಧ ಕಲಂ 465, 466, 506, ಆರ್/ಡಬ್ಲ್ಯು 34 ಐಪಿಸಿ, ಜೆಜೆ ಕಾಯ್ದೆ 2015ರ ಕಲಂ 80, 81, 87ರಡಿ ಪ್ರಕರಣ ದಾಖಲಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಶಿವರಾಜಪುರ ಗ್ರಾಮದ ಯುವತಿಯೊಬ್ಬಳು ಮದುವೆಗೆ ಮುನ್ನ ಗರ್ಭಿಣಿಯಾಗಿದ್ದು, ಕೊಪ್ಪ ತಾಲೂಕು ಆಸ್ಪತ್ರೆಯಲ್ಲಿ ಕಳೆದ ಮಾ.14 ರಂದು ಹೆರಿಗೆಯಾಗಿದೆ. ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ.ಬಾಲಕೃಷ್ಣ ಯುವತಿಗೆ ಇನ್ನೂ ವಿವಾಹವಾಗದ ವಿಚಾರ ತಿಳಿದು ನಿಮ್ಮಿಂದ ಮಗುವನ್ನು ಸಾಕಲು ಸಾಧ್ಯವಿಲ್ಲ, ಇಲ್ಲೇ ಕೊಟ್ಟು ಹೋಗಿ, ಇಲ್ಲದಿದ್ದರೆ ಮದುವೆಯಾಗದೆ ಗರ್ಭಿಣಿಯಾಗಿದ್ದಕ್ಕೆ ಪೊಲೀಸ್ ಕಂಪ್ಲೆಂಟ್ ನೀಡುತ್ತೇನೆ. ಡಿಸ್ಚಾಜ್‌ರ್ ಕೂಡಾ ಮಾಡುವುದಿಲ್ಲ ಎಂದು ಯುವತಿಯನ್ನು ಬೆದರಿಸಿ ಬೇರೊಬ್ಬರ ಹೆಸರಿನಲ್ಲಿ ಮಗುವನ್ನು ಮಾರಾಟ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣ ಬಯಲಾಗಿದ್ದು ಹೇಗೆ? ಎನ್.ಆರ್.ಪುರದಲ್ಲಿ ನವೆಂಬರ್ 27ರಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ.ಅಂತೋಣಿ ಸೆಬಾಸ್ಟಿನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯೋಗದ ಸದಸ್ಯ ಶಂಕ್ರಪ್ಪ ಅವರು ಕೊಪ್ಪ ಆಸ್ಪತ್ರೆಯಲ್ಲಿ ಮಗು ಮಾರಾಟವಾಗಿದೆ ಎಂಬ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ಬಂದಿದೆ. ಆದರೆ, ಈವರೆಗೆ ಯಾವುದೇ ಕ್ರಮವಾಗಿಲ್ಲ ಆರೋಪಿಸಿದ್ದರು.
ಮರುದಿನ ಕೊಪ್ಪ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಗಾನವಿ ಅವರು, ಯುವತಿಯ ತಾಯಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ವೈದ್ಯರು ತಮ್ಮ ಮಗಳಿಗೆ 5 ಸಾವಿರ ರು. ಕೊಟ್ಟಿದ್ದು, ತಮ್ಮ ಕಣ್ಣೆದುರಿಗೆ 50 ಸಾವಿರ ರು.ಗಳನ್ನು ಬೇರೆಯವರಿಂದ ಪಡೆದು ಅವರಿಗೆ ಮಗು ಕೊಟ್ಟು ಕಳುಹಿಸಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಬಾಲಕಿ ಮೇಲೆ 3 ಸಾರಿ ಎರಗಿದ ಟಿವಿ ಜರ್ನಲಿಸ್ಟ್, ಇನ್ಸ್‌ಪೆಕ್ಟರ್! ...
ಕೂಡಲೇ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ, ಮಕ್ಕಳ ಆಯೋಗ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪ ವೈದ್ಯಾಧಿಕಾರಿಗಳಿಂದ ದಾಖಲೆಗಳನ್ನು ಪಡೆದಿದ್ದವು. ಆಸ್ಪತ್ರೆ ದಾಖಲೆಗಳನ್ನು ಪರಿಶೀಲಿಸಿದಾಗ ಆ ಯುವತಿಗೆ ಹೆರಿಗೆಯಾದ ದಿನ ಕೇಸ್ ಶೀಟ್‌ನಲ್ಲಿ ಹೆರಿಗೆಯಾಗಿಲ್ಲ ಎಂದು ನಮೂದಿಸಲಾಗಿದೆ. ಅದೇ ಕೇಸ್ ಶೀಟ್ ನಂಬರ್‌ನಲ್ಲಿ ಮಗು ಪಡೆದುಕೊಂಡವರ ಹೆಸರು, ವಿಳಾಸ ನಮೂದಿಸಿ ಅವರಿಗೆ ಹೆರಿಗೆಯಾದಂತೆ ದಾಖಲಿಸಿರುವುದು ಕಂಡು ಬಂದಿದೆ.
ಮಗುವನ್ನು ಖರೀದಿಸಿದ ಶೃಂಗೇರಿಯಲ್ಲಿ ವಾಸವಿರುವ ತಮಿಳುನಾಡು ಮೂಲದ ಮಹಿಳೆ ಪ್ರೇಮಲತಾ ಗರ್ಭಿಣಿಯೇ ಆಗಿರಲಿಲ್ಲ. ತಾಯಿ ಕಾರ್ಡ್, ಗರ್ಭಿಣಿ ನೋಂದಣಿಯೂ ಇರಲಿಲ್ಲ. ಜಿಲ್ಲಾ ಮತ್ತು ರಾಜ್ಯ ಮಕ್ಕಳ ರಕ್ಷಣಾ ಘಟಕ ಸ್ಥಳೀಯ ಅಧಿಕಾರಿಗಳೊಂದಿಗೆ ಶೃಂಗೇರಿಗೆ ತೆರಳಿ ಪ್ರೇಮಲತಾ ಮತ್ತು ಮಾರಾಟವಾಗಿದ್ದ ಮಗುವನ್ನು ಸೋಮವಾರ ವಶಕ್ಕೆ ಪಡೆದು ಮಕ್ಕಳ ಪಾಲನಾ ಕೇಂದ್ರಕ್ಕೆ ನೀಡಲಾಗಿದೆ.