ನಿಗಾದಲ್ಲಿ ಇರುವವರಿಗೆ ಮನೆ ಖಾಲಿ ಮಾಡಲು ಒತ್ತಡ!

By Kannadaprabha NewsFirst Published Mar 20, 2020, 8:12 AM IST
Highlights

ಬೆಂಗಳೂರಿನಲ್ಲಿ ಕೊರೋನಾ ಆತಂಕದ ನಡುವೆ ಮನೆಯಲ್ಲಿ ನಿಗಾದಲ್ಲಿ ಇದ್ದವರಿಗೆ ಮನೆ ಖಾಲಿ ಮಾಡುವಂತೆ ಒತ್ತಡ ಹೇರುತ್ತಿರುವ ವಿಚಾರ ಬೆಳಕಿಗೆ ಬಂದಿದೆ. 

ಬೆಂಗಳೂರು [ಮಾ.20]:  ಕೊರೋನಾ ವೈರಸ್‌ ವ್ಯಾಪ್ತಿಸುವುದನ್ನು ತಡೆಯುವ ಕೆಲಸದಲ್ಲಿ ದಿನದ ನಿರತರಾಗಿರುವ ಆರೋಗ್ಯ ಇಲಾಖೆಗೆ ಮತ್ತೊಂದು ತಲೆನೋವು ಕಾಡಲಾರಂಭಿಸಿದೆ.

ಕೊರೋನಾ ವೈರಸ್‌ ಸೋಂಕಿತರೊಂದಿಗೆ ಪ್ರಾಥಮಿಕ ಮತ್ತು ಪರೋಕ್ಷ ಸಂಪರ್ಕ ಹೊಂದಿದವರು ತಂಗಿದ್ದ ಮನೆಗಳನ್ನು ಖಾಲಿ ಮಾಡುವಂತೆ ಅದರ ಮಾಲಿಕರು ಒತ್ತಾಯಿಸುತ್ತಿರುವ ಬಗ್ಗೆ ಆರೋಗ್ಯ ಇಲಾಖೆ ದೂರುಗಳು ಬರುತ್ತಿದ್ದು, ಅವುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ!

ಹೀಗಾಗಿ, ಆರೋಗ್ಯ ಇಲಾಖೆ ಐಸೋಲೇಶನ್‌ಗೆ ಒಳಪಟ್ಟವ್ಯಕ್ತಿ ಹಾಗೂ ಅವರ ಕುಟುಂಬದ ಮೇಲೆ ನಿಗಾ ವಹಿಸುವುದಕ್ಕೆ ಒಬ್ಬ ಗೃಹ ರಕ್ಷಕದಳದ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಹಾಗೂ ಬೀಟ್‌ ಪೊಲೀಸ್‌ ಅನ್ನು ನಿಯೋಜನೆ ಮಾಡಿದೆ.

ಕೊರೋನಾ ಸೋಂಕಿತ ಲಕ್ಷಣ ಕಂಡು ಬಂದವರಿಗೆ ಹಾಗೂ ಈಗಾಗಲೇ ಕೊರೋನಾ ವೈರಸ್‌ ದೃಢಪಟ್ಟರೋಗಿಯೊಂದಿಗೆ ಪ್ರಾಥಮಿಕ ಹಾಗೂ ಪರೋಕ್ಷ ಸಂಪರ್ಕ ಹೊಂದಿದವರನ್ನು ಗುರುತಿಸಿ ಅವರಲ್ಲಿಯೂ ಯಾವುದೇ ರೋಗದ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ ಅವರನ್ನೂ ಹೋಮ್‌ ಐಸೋಲೇಶನ್‌ಗೆ ಆರೋಗ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಈ ರೀತಿ ಹೋಮ್‌ ಐಸೋಲೇಶನ್‌ಗೆ ಸೂಚಿಸಿದ ವ್ಯಕ್ತಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸ್ಥಳೀಯ ವಾಸಿಗಳು, ಮನೆ ಮಾಲಿಕರು, ವಾಸಿಸುವ ಮನೆ ಅಪಾರ್ಟ್‌ಮೆಂಟ್‌ನಲ್ಲಿದ್ದರೆ ಅಲ್ಲಿನ ಕ್ಷೇಮಾಭಿವೃದ್ಧಿ ಸಂಘಟನೆಗಳು ಐಸೋಲೇಶನ್‌ಗೆ ಒಳಗಾದವರಿಂದ ತಮಗೂ ವೈರಸ್‌ ಹರಡಬಹುದು ಎಂದು ಆತಂಕಕ್ಕೆ ಒಳಗಾಗಿ ಐಸೋಲೇಶನ್‌ಗೆ ಒಳಪಡಿಸಿದವರನ್ನು ಮನೆ ಅಥವಾ ಫ್ಲ್ಯಾಟ್‌ ಖಾಲಿ ಮಾಡಿಕೊಂಡು ತಮ್ಮ ಸ್ವಂತ ಊರುಗಳಿಗೆ ಹೋಗುವಂತೆ ಒತ್ತಾಯದ ದೂರುಗಳು ಕೇಳಿ ಬರುತ್ತಿವೆ.

ನಿಗಾ ಇರಿಸಿದವರಿಗೆಲ್ಲಾ ವೈರಸ್‌ ಇಲ್ಲ:

ಐಸೋಲೇಶನ್‌ಗೆ ಒಳಗಾದ ಎಲ್ಲರಿಗೂ ಕೊರೋನಾ ಸೋಂಕು ಇದೆ ಎಂಬುದಲ್ಲ. ಒಂದು ವೇಳೆ ಸೋಂಕು ಇದ್ದರೆ ಅವರಿಂದ ಇತರರಿಗೆ ಹರಡದಿರಲಿ ಎಂಬ ಕಾರಣಕ್ಕೆ ಐಸೋಲೇಶನ್‌ಗೆ ಒಳಪಡಿಸಲಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮತ್ತೆ ಹೋಮ್‌ ಐಸೋಲೇಶನ್‌ಗೆ ಒಳಪಡಿಸಿದವರಿಗೆ ಮತ್ತು ಅವರ ಕುಟುಂಬಕ್ಕೆ ತೊಂದರೆ ನೀಡುವುದು ಅಪರಾಧವಾಗಿದೆ. ಈ ಬಗ್ಗೆ ಸಾರ್ವಜನಿಕರು ಐಸೋಲೇಶನ್‌ಗೆ ಒಳಪಟ್ಟವ್ಯಕ್ತಿ ಹಾಗೂ ಕುಟುಂಬದಿಂದ ದೂರ ಉಳಿದರೆ ಇತರರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಸೋಂಕು ಪ್ರದೇಶ ಬಹಿರಂಗ

ಸೋಂಕು ದೃಢಪಟ್ಟಪ್ರದೇಶ ಹಾಗೂ ಸೋಂಕಿತ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸುವಂತಿಲ್ಲ. ಆದರೆ, ನಗರದ ಕೆಲವು ಪ್ರದೇಶದ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಆಗಿರುವುದರಿಂದ ಆ ಪ್ರದೇಶದ ನಿವಾಸಿಗಳು ಆತಂಕಗೊಂಡಿದ್ದಾರೆ. ಸೋಂಕಿತ ವ್ಯಕ್ತಿಯ ಕುಟುಂಬ ಹಾಗೂ ರೋಗದ ಲಕ್ಷಣ ಇಲ್ಲದಿದ್ದರೂ ಐಸೋಲೇಶನ್‌ಗೆ ಒಳಪಡಿಸಲಾದ ವ್ಯಕ್ತಿಯ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು, ಬಂಧು ಮಿತ್ರರನ್ನು ಮನೆ ಖಾಲಿ ಮಾಡಿಕೊಂಡು ಹೋಗುವಂತೆ ಒತ್ತಾಯಿಸುತ್ತಿರುವ ಆರೋಪ ಕೇಳಿ ಬಂದಿವೆ.

ರೈಲ್ವೆ ಇಲಾಖೆಯ ಐಜಿಪಿ ಡಿ.ರೂಪಾ ಅವರು ಕಳೆದ ಬುಧವಾರ ಟ್ವೀಟ್‌ ಮಾಡಿ ನಗರದ ರೈಲ್ವೆ ಕಾಲೋನಿಗೆ ಒಂದು ವಾರದ ಹಿಂದೆ ಬಂದು ನೆಲೆಸಿದ್ದ ವ್ಯಕ್ತಿಯಲ್ಲಿ ಕೊರೋನಾ ವೈರಸ್‌ ಪತ್ತೆಯಾಗಿದೆ. ಆರೋಗ್ಯ ಇಲಾಖೆ ವೈರಸ್‌ ಪತ್ತೆಯಾದ ಕುಟುಂಬ ಎಲ್ಲ ಸದಸ್ಯರನ್ನು ಪರೀಕ್ಷೆಗೆ ಒಳಪಡಿಸಿ ಪ್ರತ್ಯೇಕವಾಗಿ ಇರಿಸಬೇಕು ಎಂದು ಬರೆದುಕೊಂಡಿದ್ದರು. ಇದರಿಂದ ಇದೀಗ ರೈಲ್ವೆ ಕಾಲೋನಿಯ ನಿವಾಸಿಗಳು ಆತಂಕಗೊಂಡಿದ್ದಾರೆ.

ಒತ್ತಡ ಹೇರಿ ಪಿಜಿ ಖಾಲಿ ಮಾಡಿಸುವಂತಿಲ್ಲ : ಸ್ಪಷ್ಟನೆ...

ಇನ್ನು ಅಮೆರಿಕದಿಂದ ಬಂದಿದ್ದ ಮಹಿಳೆಯೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಆ ಮನೆಯ ಮನೆಯ ವಿಳಾಸ ಹೆಸರು ಎಲ್ಲವೂ ವಿವರವೂ ಬಹಿರಂಗ ಗೊಂಡಿದ್ದು, ಆ ಪ್ರದೇಶದ ಜನರೂ ಆತಂಕಕ್ಕೆ ಒಳಗಾಗಿದ್ದಾರೆ.

2,280 ಮಂದಿ ಮನೆಯಲ್ಲಿ ನಿಗಾ:  ಈ ವರೆಗೆ ಒಟ್ಟು 2,280 ಮಂದಿಯನ್ನು ಹೋಮ್‌ ಐಸೋಲೇಶನ್‌ ಮಾಡಲಾಗಿದೆ. ಗುರುವಾರ ಹೊಸದಾಗಿ 74 ಮಂದಿಯನ್ನು ಹೋಮ್‌ ಐಸೋಲೇಶನ್‌ಗೆ ಸೂಚಿಸಲಾಗಿದೆ. ಇನ್ನು 97 ಮಂದಿಯನ್ನು ಆಸ್ಪತ್ರೆಯಲ್ಲಿ ಇರಿಸಿ ನಿಗಾ ವಹಿಸಲಾಗುತ್ತಿದೆ. ಇವರಲ್ಲಿ ಬಹುತೇಕರು ಬೆಂಗಳೂರಿನವರೇ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ಗುರುವಾರ ಮಾಹಿತಿ ನೀಡಿದೆ.

ದುಬೈನಿಂದ ಒಂದು ಕುಟುಂಬ ನಮ್ಮ ಅಪಾರ್ಟ್‌ಮೆಂಟ್‌ನ ಪ್ಲಾಟ್‌ಗೆ ಆಗಮಿಸಿದ್ದು, ಅವರಿಗೆ ಯಾವುದೇ ಸೋಂಕು, ಲಕ್ಷಣಗಳಿಲ್ಲ. ಆದರೂ 15 ರಿಂದ 20 ದಿನ ಮನೆ ಒಳಗೆ ಇರುವಂತೆ ಅಪಾರ್ಟ್‌ಮೆಂಟ್‌ ಕ್ಷೇಮಾಭಿವೃದ್ಧಿ ಸಂಘದಿಂದ ಮನವಿ ಮಾಡಿದ್ದೇವೆ. ಅವರೂ ಒಪ್ಪಿಕೊಂಡು ಮನೆ ಒಳಗೆ ಇದ್ದಾರೆ. ಆದರೆ, ಹೋಮ್‌ ಐಸೋಲೇಷನ್‌ನಲ್ಲಿ ಇರುವವರನ್ನು ಪ್ಲಾಟ್‌ ಅಥವಾ ಮನೆ ಬಿಟ್ಟು ಹೋಗು ಎಂದು ಹೇಳುವುದು ಅಮಾನವೀಯ. ಯಾರೂ ಆ ರೀತಿ ಹೇಳಬಾರದು.

-ಡಾ.ಉಮಾದೇವಿ, ಉಪಾಧ್ಯಕ್ಷೆ, ಸ್ಟೆರ್ಲಿಂಗ್‌ ಟೆರೇಸಸ್‌ ಅಪಾರ್ಟ್‌ಮೆಂಟ್‌ ಕ್ಷೇಮಾಭಿವೃದ್ಧಿ ಸಂಘ.

click me!