ಮಹಿಳೆಯರಿಗೆ ಶೇ. 50ರಷ್ಟು ಸ್ಥಾನಗಳ ಮೀಸಲಾತಿ ನೀಡಿ : ಸಾ.ರಾ. ಮಹೇಶ್‌

By Kannadaprabha NewsFirst Published Mar 9, 2023, 5:57 AM IST
Highlights

ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50 ರಷ್ಟುಸ್ಥಾನಗಳ ಮೀಸಲಾತಿ ನೀಡುವ ಕಾಯ್ದೆಯನ್ನು ಕೇಂದ್ರ ಸರ್ಕಾರ ಶೀಘ್ರವಾಗಿ ಜಾರಿಗೆ ತರಬೇಕು ಎಂದು ಶಾಸಕ ಸಾ.ರಾ. ಮಹೇಶ್‌ ಒತ್ತಾಯಿಸಿದರು.

 ಕೆ.ಆರ್‌. ನಗರ :  ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50 ರಷ್ಟುಸ್ಥಾನಗಳ ಮೀಸಲಾತಿ ನೀಡುವ ಕಾಯ್ದೆಯನ್ನು ಕೇಂದ್ರ ಸರ್ಕಾರ ಶೀಘ್ರವಾಗಿ ಜಾರಿಗೆ ತರಬೇಕು ಎಂದು ಶಾಸಕ ಸಾ.ರಾ. ಮಹೇಶ್‌ ಒತ್ತಾಯಿಸಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕು ಯುವ ವೇದಿಕೆ, ಮತ್ತು ಇತರ ಇಲಾಖೆಗಳ ಸಹಯೋಗದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದು, ಅವರಿಗೆ ನಾವು ಸದಾ ಪೋ›ತ್ಸಾಹ ನೀಡಬೇಕು ಎಂದರು.

ದುಷ್ಟಶಕ್ತಿಗಳನ್ನು ನಿಗ್ರಹಿಸುವ ಶಕ್ತಿಯನ್ನು ದೇವರು ಸ್ತ್ರೀಯರಿಗೆ ನೀಡಿರುವುದರಿಂದ ಎಲ್ಲರೂ ಅವರನ್ನು ಗೌರವ ಮನೋಭಾವನೆಯಿಂದ ಕಂಡು ಸಮಾನತೆಯ ಸಮಾಜಕ್ಕೆ ಪರಸ್ಪರ ಒಂದಾಗಿ ಕೆಲಸ ಮಾಡಬೇಕೆಂದರು.

ಹೆಣ್ಣು ಮತ್ತು ಗಂಡು ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಆದ್ದರಿಂದ ಇಬ್ಬರು ಹೊಂದಾಣಿಕೆಯಿಂದ ಸುಂದರವಾದ ಜೀವನ ನಡೆಸಿ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕೆಂದು ಸಲಹೆ ನೀಡಿದರು.

ಪುರುಷರಿಗಿಂತ ಅತ್ಯಂತ ಶಕ್ತಿಶಾಲಿಯಾಗಿರುವ ಮಹಿಳೆಯರು ಕುಟುಂಬವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಸರ್ವರನ್ನು ಸರಿದಾರಿಗೆ ತಂದು ಸಾಕಷ್ಟುತ್ಯಾಗ ಮಾಡುವುದರಿಂದ ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಪುರುಷನ ಆಧ್ಯ ಕರ್ತವ್ಯ ಎಂದರು.

ಮಾ. 16 ರಿಂದ ಗಾರ್ಮೆಂಟ್ಸ್‌ ಆರಂಭ

ಮಾ. 16 ರಿಂದ ತಾಲೂಕಿನ ಕೆಗ್ಗೆರೆ ಗ್ರಾಮದ ಬಳಿ ಸಾ.ರಾ. ನಿಧಿ ಗಾರ್ಮೆಂಟ್ಸ್‌ ಕಾರ್ಯಾರಂಭ ಮಾಡಲಿದ್ದು 10 ಸಾವಿರ ಮಹಿಳೆಯರಿಗೆ ಉದ್ಯೋಗ ನೀಡಲು ತೀರ್ಮಾನಿಸಲಾಗಿದೆ ಎಂದರು.

ಪ್ರಾರಂಭದಲ್ಲಿ 500 ಮಹಿಳೆಯರಿಗೆ ಉದ್ಯೋಗ ನೀಡಲಿದ್ದು, ಆನಂತರ ಮತ್ತೆ 500 ಮಂದಿಗೆ ಕೆಲಸ ಕೊಡುವುದರ ಜತೆಗೆ ಹಂತ ಹಂತವಾಗಿ ಹೆಚ್ಚು ಉದ್ಯೋಗ ಸೃಷ್ಟಿಮಾಡಿ 18 ವರ್ಷ ಮೇಲ್ಪಟ್ಟಕ್ಷೇತ್ರದ ಎಲ್ಲ ಮಹಿಳೆಯರನ್ನು ವೈಯಕ್ತಿಕ ಹಣ ಪಾವತಿಸಿ ಷೇರುದಾರರನ್ನಾಗಿ ಮಾಡಲಿದ್ದೇನೆಂದು ಮಾಹಿತಿ ನೀಡಿದರು.

ತಾಲೂಕು ಯುವ ರೈತ ವೇದಿಕೆ ಅಧ್ಯಕ್ಷ ರಾಮಪ್ರಸಾದ್‌, ನಿವೃತ್ತ ಕೃಷಿ ಜಂಟಿ ನಿರ್ದೇಶಕ ಡಾ. ವಿಷಕಂಠ, ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್‌. ಮಹೇಂದ್ರಪ್ಪ, ಎಪಿಎಂಸಿ ಕಾರ್ಯದರ್ಶಿ ಬಿ. ಮಹೇಶ್‌, ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್‌. ಗುರುಪ್ರಸಾದ್‌, ತೋಟಗಾರಿಕೆ ಸಹಾಯಕ ನಿರ್ದೇಶಕ ಪ್ರಸನ್ನ, ಸಿಡಿಪಿಒ ಕೆ.ಆರ್‌. ಪೂರ್ಣಿಮಾ, ಮಹಿಳಾ ಸಂಘಟನೆಗಳ ಪದಾಧಿಕಾರಿಗಳಾದ ಮಂಜುಳ ರಮೇಶ್‌, ರತ್ನಮ್ಮ ಇದ್ದರು.

ಕೊನೆ ಭಾಗದವರೆಗೂ ಕಾಮಗಾರಿ

 ಕೆ.ಆರ್‌. ನಗರ : ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನಾಲೆಗಳ ಕೊನೆಯ ಭಾಗದವರೆಗೂ ಸರಾಗವಾಗಿ ನೀರು ಹರಿದು ಹೋಗುವಂತೆ ಅಗತ್ಯ ಮತ್ತು ಆಧುನೀಕರಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಪಟ್ಟಣದ ಹೊರ ವಲಯದ ಕಂಠೇನಹಳ್ಳಿ ಬಳಿ ಚಾಮರಾಜ ಬಲದಂಡ ನಾಲೆಯ 9ನೇ ಬ್ರಾಂಚಿನ ಆಕ್ವಿಡೇಟ್‌ ಮರು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.

ಕಳೆದ 4 ತಿಂಗಳ ಹಿಂದೆ ಬಿದ್ದ ಸತತ ಮಳೆಯ ಪರಿಣಾಮ ಆಕ್ವಿಡೇಟ್‌ ಕುಸಿದು ಬಿದ್ದಿದ್ದರಿಂದ ಆಗ ತಾತ್ಕಾಲಿಕವಾಗಿ ತುರ್ತು ಕಾಮಗಾರಿ ನಡೆಸಿ ಪೈಪ್‌ ಮೂಲಕ ರೈತರ ಜಮೀನಿಗೆ ನೀರು ಹರಿಸುವ ಕೆಲಸ ಮಾಡಲಾಗಿತ್ತು. ನಂತರ ಸರ್ಕಾರದ ಮೇಲೆ ಒತ್ತಡ ಹೇರಿ 2 ಕೋಟಿ ಮಂಜೂರು ಮಾಡಿಸಿ ಶಾಶ್ವತ ಕಾಮಗಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಎಲ್ಲಾ ನಾಲೆಗಳ ಮೇಲೆ ಸಂಚರಿಸಿ ಪರಿಶೀಲಿಸಿ ಕಾಮಗಾರಿ ಕೈಗೊಳ್ಳಬೇಕಾದ ಅಗತ್ಯವಿದ್ದಲೇ ಕೂಡಲೇ ಕ್ರಮಕೈಗೊಂಡು ಅನುದಾನಕ್ಕೆ ವರದಿ ನೀಡುವಂತೆ ಸೂಚಿಸಿದರು.

ನಾನು ಕ್ಷೇತ್ರದ ಶಾಸಕನಾಗಿ ಆಯ್ಕೆ ಯಾಗುವುದ್ದಕ್ಕಿಂತ ಮೊದಲು ರೈತರು ತಮ್ಮ ಜಮೀನಿಗೆ ನೀರುಣಿಸಲು ಹಗಲು ರಾತ್ರಿ ಎನ್ನದೆ ಸಂಕಷ್ಟಪಡಬೇಕಿತ್ತು. ಆದರೆ ಈಗ ಎಲ್ಲಾ ನಾಲೆಗಳ ಆಧುನೀಕರಣವಾಗಿದ್ದು ಬೆಳೆಗಳಿಗೆ ಸಮೃದ್ಧ ಮತ್ತು ನಿರಂತರವಾಗಿ ನೀರು ಸರಬರಾಜಾಗುತ್ತಿದೆ ಎಂದು ಶಾಸಕರು ಮಾಹಿತಿ ನೀಡಿದರು. ರೈತರು ಸಹ ಮಿತವಾಗಿ ನೀರನ್ನು ಬಳಕೆ ಮಾಡಿಕೊಂಡು ತಮ್ಮ ಅಗತ್ಯತೆ ಪೂರ್ಣಗೊಂಡ ನಂತರ ಮುಂದಿನ ಭಾಗದ ರೈತರಿಗೂ ಅನುಕೂಲವಾಗುವ ಹಾಗೆ ಸಹಕಾರ ನೀಡಬೇಕು. ಶಾಸಕರು ಭವಿಷ್ಯದ ಹಿತ ದೃಷ್ಟಿಯಿಂದ ನೀರಿನ ಸದ್ಬಳಕೆ ಮತ್ತು ಅದನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅವರು ನುಡಿದರು

click me!