ಕನ್ನಡಕ್ಕಾಗಿ ಕೈ ಎತ್ತಿದ್ದು ಉತ್ತರ ಕರ್ನಾಟಕ ಮಾತ್ರ: ಜಗದೀಶ ಶೆಟ್ಟರ್‌

By Girish Goudar  |  First Published Nov 2, 2022, 1:10 PM IST

ಕನ್ನಡಕ್ಕೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದ್ದು, ಅದನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿದೆ. ಆದರೂ ಬೆಂಗಳೂರಿನಲ್ಲಿ ಕನ್ನಡ ಹುಡುಕುವ ಸ್ಥಿತಿ ನಿರ್ಮಾಣವಾಗಿದೆ: ಜಗದೀಶ ಶೆಟ್ಟರ್‌ ಕಳವಳ 


ಹುಬ್ಬಳ್ಳಿ(ನ.02): ಕನ್ನಡ ಭಾಷೆ ಉಳಿದು, ಬೆಳೆದಿದ್ದರೆ ಅದು ಉತ್ತರ ಕರ್ನಾಟಕದಲ್ಲಿ ಮಾತ್ರ. ಕನ್ನಡಕ್ಕೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದ್ದು, ಅದನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿದೆ. ಆದರೂ ಬೆಂಗಳೂರಿನಲ್ಲಿ ಕನ್ನಡ ಹುಡುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಕಳವಳ ವ್ಯಕ್ತಪಡಿಸಿದರು. ಇಲ್ಲಿನ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಭುವನೇಶ್ವರಿ ಚಿತ್ರದ ಮೆರವಣಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡದ ಕುರಿತು ಪಾಲಕರಲ್ಲಿರುವ ದೃಷ್ಟಿಕೋನ ಬದಲಾಯಿಸಬೇಕಾಗಿದೆ. ಕನ್ನಡದ ಕುರಿತು ಅಸಡ್ಡೆ ಬೇಡ. ನಾನು ಕನ್ನಡ ಮಾಧ್ಯಮದಲ್ಲಿ ಓದಿ 6 ಬಾರಿ ಶಾಸಕನಾಗಿದ್ದೇನೆ. ಸರ್ಕಾರ ಕನ್ನಡ ಶಾಲೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಮೂಲಕ ಪಾಲಕರಲ್ಲಿ ಜಾಗೃತಿ ಮೂಡಿಸುವ ಜತೆಗೆ ಅವರಲ್ಲಿರುವ ಮಾನಸಿಕತೆ ಹೋಗಲಾಡಿಸಬೇಕು ಎಂದರು.

Tap to resize

Latest Videos

ಧಾರವಾಡದ ಎಫ್‍ಎಂಸಿಜಿ ಘಟಕ ದೇಶದ ಆರ್ಥಿಕತೆ ಬದಲಿಸುವಲ್ಲಿ ಪ್ರಮುಖ ಪಾತ್ರ: ಸಚಿವ ಆಚಾರ್‌

ಕನ್ನಡ ನೆಲ, ಜಲಕ್ಕಾಗಿ ಜನರು, ಸರ್ಕಾರ ಹೋರಾಟ ಮಾಡಿದ್ದರಿಂದ ಪ್ರತಿ ಹಂತದಲ್ಲಿ ನಾವು ಯಶಸ್ಸು ಪಡೆದಿದ್ದೇವೆ. ಕೃಷ್ಣ, ಕಾವೇರಿ, ಮಹದಾಯಿ ವಿಷಯದಲ್ಲಿ ಇದು ಸಾಬೀತಾಗಿದೆ ಎಂದು ಹೇಳಿದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ನಮ್ಮಲ್ಲಿರುವ ನಾಡಿನ ಅಭಿಮಾನ ಒಂದು ದಿನದ ಆಚರಣೆಗೆ ಮಾತ್ರ ಸೀಮಿತಗೊಳ್ಳದಿರಲಿ. ರಾಜ್ಯದಲ್ಲಿ 3 ಸಾವಿರ ಕನ್ನಡ ಶಾಲೆ ಮುಚ್ಚಲಾಗಿದೆ. ಕನ್ನಡ ಶಾಲೆ ಮುಚ್ಚದೆ ಅಗತ್ಯ ಅನುದಾನ ನೀಡಿ ಅವುಗಳನ್ನು ಉಳಿಸಿ, ಬೆಳೆಸಬೇಕು ಎಂದರು.

ಪ್ರಾಸ್ತಾವಿಕ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ., ಪಾಲಿಕೆಯ ಎಲ್ಲ ಕಚೇರಿಯಲ್ಲಿ ಕನ್ನಡ ಧ್ವಜ ಹಾರಿಸಲು ಕ್ರಮ ಕೈಗೊಳ್ಳಲಾಗಿದೆ. ಮೊದಲ ಬಾರಿ ಧಾರವಾಡದಲ್ಲಿ ರಾಜ್ಯೋತ್ಸವ ಮೆರವಣಿಗೆ ಆಯೋಜಿಸಲಾಗಿದೆ. ಸಂಗ್ರಹವಾದ ತ್ಯಾಜ್ಯದಿಂದ 130 ಟನ್‌ ಗೊಬ್ಬರ ತಯಾರಿಸಿ ಮಾರಾಟ ಮಾಡಲಾಗಿದೆ. ಸ್ವಚ್ಛ ಸರ್ವೇಕ್ಷಣೆಯಲ್ಲಿ ಹು-ಧಾ ಮಹಾನಗರ ಪಾಲಿಕೆ ದೇಶಕ್ಕೆ 61, ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದೆ. ನಗರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುತ್ತಿದೆ ಎಂದು ಹೇಳಿದರು.

ಮೇಯರ್‌ ಈರೇಶ ಅಂಚಟಗೇರಿ ಅಧ್ಯಕ್ಷತೆ ವಹಿಸಿದ್ದರು. ಎಸ್‌.ಸಿ. ಬೇವೂರ ಸ್ವಾಗತಿಸಿದರು. ಪಾಲಿಕೆ ಸಭಾ ನಾಯಕ ತಿಪ್ಪಣ್ಣ ಮಜ್ಜಗಿ ವಂದಿಸಿದರು. ಉಪ ಮೇಯರ್‌ ಉಮಾ ಮುಕುಂದ, ಪಾಲಿಕೆ ವಿಪಕ್ಷ ನಾಯಕ ದೊರಾಜ್‌ ಮನ್ನಿಕುಂಟ್ಲಾ, ಸದಸ್ಯರಾದ ರಾಜಣ್ಣ ಕೊರವಿ, ಶಿವಾನಂದ ಮೆಣಸಿನಕಾಯಿ, ವೀರಣ್ಣ ಸವಡಿ, ಬೀರಪ್ಪ ಖಂಡೇಕಾರ ಮತ್ತಿತರರು ಉಪಸ್ಥಿತರಿದ್ದರು.

ಏಟು-ತಿರುಗೇಟು

ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬಹುತೇಕ ಹಿಂದಿ, ಇಂಗ್ಲಿಷ್‌ ಕಡ್ಡಾಯ ಇರುತ್ತದೆ. ಹಾಗಾಗಿ ಕನ್ನಡಿಗರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆಗೆ ಮುಂದಾಗಿದೆ. ಅದನ್ನು ನಾವೆಲ್ಲ ವಿರೋಧಿಸಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಇದಕ್ಕೆ ತಮ್ಮ ಭಾಷಣದಲ್ಲಿ ತಿರುಗೇಟು ನೀಡಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಹಿಂದಿ ಹೇರಿಕೆಯ ಪ್ರಶ್ನೆಯೇ ಇಲ್ಲ ಎಂಬುದನ್ನು ಈಗಾಗಲೇ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಇಂಗ್ಲಿಷ್‌ ಕಲಿಯುವ ನಮಗೆ ಹಿಂದಿ ಏಕೆ ಬೇಡವಾಗಿದೆ. ರಾಷ್ಟ್ರದ ಸಂಪರ್ಕ ಭಾಷೆಯಾಗಿರುವ ಹಿಂದಿಯನ್ನು ಕಲಿಯಬೇಕು. ಆದ್ದರಿಂದ ಸರ್ಕಾರವನ್ನು ದೂರುವುದು ಸರಿಯಲ್ಲ. ನಮ್ಮ ಭಾಷೆ ಪ್ರೀತಿಸಿ ಉಳಿಸುವ ಜತೆಗೆ ಬೇರೆ ಭಾಷೆಯನ್ನು ಕಲಿಯಬೇಕು ಎಂದರು. ಹೀಗಾಗಿ ರಾಜ್ಯೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಹಿಂದಿ ಹೇರಿಕೆ ಕುರಿತು ಚರ್ಚೆ ನಡೆದಂತಾಯಿತು.

ಧಾರವಾಡದಲ್ಲಿ ದಕ್ಷಿಣ ಭಾರತದ ಮೊದಲ ಎಫ್‌ಎಂಸಿಜಿ ಕಾರಿಡಾರ್‌

ಮೊಳಗಿದ ಕನ್ನಡದ ಕಹಳೆ

ಶ್ರೀ ಸಿದ್ಧಾರೂಢ ಮಠದಿಂದ ಆರಂಭಗೊಂಡ ಭುವನೇಶ್ವರಿ ಮಾತೆ ಹಾಗೂ ಸ್ತಬ್ಧಚಿತ್ರಗಳ ಅದ್ಧೂರಿ, ಆಕರ್ಷಕ ಮೆರವಣಿಗೆಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ ನೀಡಿದರು. ಮೆರವಣಿಗೆಯುದ್ದಕ್ಕೂ ಕನ್ನಡ ಕಹಳೆ ಮೊಳಗಿತು. ಗೊಂಬೆ ಕುಣಿತ, ಸಂಬಾಳ ವಾದ್ಯ, ಕುದುರೆ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಜಗ್ಗಲಗಿ, ಕೋಲಾಟ, ಕರಡಿ ಮಜಲು ಮೆರವಣಿಗೆಗೆ ಮೆರಗು ತಂದವು. ಭುವನೇಶ್ವರಿ ಮಾತೆ, ಕಿತ್ತೂರ ರಾಣಿ ಚೆನ್ನಮ್ಮ, ಒನಕೆ ಓಬವ್ವ, ಡಾ. ಬಿ.ಆರ್‌. ಅಂಬೇಡ್ಕರ್‌, ಪುನೀತರಾಜಕುಮಾರ, ಪ್ಲಾಸ್ಟಿಕ್‌ ಬಳಕೆ ನಿಷೇಧ-ಪರ್ಯಾಯ ವ್ಯವಸ್ಥೆ ಕುರಿತು ಸ್ತಬ್ಧಚಿತ್ರಗಳು ಗಮನ ಸೆಳೆದವು. ಪೇಟ ತೊಟ್ಟಿಕೊಂಡ ಜನರು ಉತ್ಸಾಹದಿಂದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಯುವಕರು ಸ್ತಬ್ಧಚಿತ್ರಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಪಟ್ಟರು

ಇಂಡಿಪಂಪ್‌, ಹಳೇಹುಬ್ಬಳ್ಳಿ, ಸಿದ್ಧಾರ್ಥ ವೃತ್ತ, ಬಮ್ಮಾಪೂರ ಓಣಿ, ಹಿರೇಪೇಟ, ದುರ್ಗದಬೈಲ್‌, ಮರಾಠಗಲ್ಲಿ, ದಾಜಿಬಾನಪೇಟೆ, ಸಂಗೊಳ್ಳಿ ರಾಯಣ್ಣ ಪ್ರತಿಮೆ, ಚೆನ್ನಮ್ಮ ವೃತ್ತದ ಮೂಲಕ ನೆಹರು ಮೈದಾನ ತಲುಪಿದ ಮೆರವಣಿಗೆ ಸಮಾಪ್ತಿಗೊಂಡಿತು.
 

click me!