ಫಾರ್ಮಸಿ ಕೋರ್ಸ್ ಪ್ರವೇಶಕ್ಕೆ ನಿಯಮ ಪಾಲಿಸಿ : ಹೈಕೋರ್ಟ್

Kannadaprabha News   | Kannada Prabha
Published : Nov 23, 2025, 09:18 AM IST
High Court

ಸಾರಾಂಶ

ಫಾರ್ಮಸಿ ಶಿಕ್ಷಣ ಸಂಸ್ಥೆಗಳು ಪ್ರವೇಶಾತಿ ವಿಚಾರದಲ್ಲಿ ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದ ನಿಯಮ ಮತ್ತು ಮಾನದಂಡ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿರುವ ಹೈಕೋರ್ಟ್, ಕಾಲೇಜಿಗೆ ಹೆಚ್ಚುವರಿಯಾಗಿ ಎಂ. ಫಾರ್ಮಾ ಕೋರ್ಸ್‌ಗೆ ಸೇರ್ಪಡೆಯಾಗಿದ್ದ ವಿದ್ಯಾರ್ಥಿ ನೋಂದಣಿಯನ್ನು ಕ್ರಮಬದ್ಧಗೊಳಿಸಲು ನಿರಾಕರಿಸಿದೆ.

ಬೆಂಗಳೂರು : ಫಾರ್ಮಸಿ ಶಿಕ್ಷಣ ಸಂಸ್ಥೆಗಳು ಪ್ರವೇಶಾತಿ ವಿಚಾರದಲ್ಲಿ ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದ ನಿಯಮ ಮತ್ತು ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿರುವ ಹೈಕೋರ್ಟ್, ಕಾಲೇಜಿಗೆ ಹೆಚ್ಚುವರಿಯಾಗಿ ಎಂ. ಫಾರ್ಮಾ ಕೋರ್ಸ್‌ಗೆ ಸೇರ್ಪಡೆಯಾಗಿದ್ದ ವಿದ್ಯಾರ್ಥಿಯೊಬ್ಬರ ನೋಂದಣಿಯನ್ನು ಕ್ರಮಬದ್ಧಗೊಳಿಸಲು ನಿರಾಕರಿಸಿದೆ.

ನೋಂದಣಿಗೆ ನಿರಾಕರಿಸಿದ್ದ ಹಿನ್ನೆಲೆ

ಆಡಳಿತ ಮಂಡಳಿ ಕೋಟಾದಲ್ಲಿ ಕಾಲೇಜಿಗೆ ಪ್ರವೇಶ ಪಡೆದ ಬಳಿಕ ನೋಂದಣಿಗೆ ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ ನಿರಾಕರಿಸಿದ್ದ ಹಿನ್ನೆಲೆಯಲ್ಲಿ, ತರಗತಿಗಳಿಗೆ ಹಾಜರಾಗಲು ಅವಕಾಶ ಕಲ್ಪಿಸದ ಆಚಾರ್ಯ ಆ್ಯಂಡ್ ಬಿ.ಎಂ ರೆಡ್ಡಿ ಕಾಲೇಜ್ ಆಫ್ ಫಾರ್ಮಸಿ ಕಾಲೇಜಿನ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಅಪ್ಪುತ ರಾಜು ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ನಿಗದಿಗಿಂತ ಹೆಚ್ಚು ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ನೀಡಿದಲ್ಲಿ ಮಾನದಂಡ ದುರ್ಬಲ

ನಿಗದಿಗಿಂತ ಹೆಚ್ಚು ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ನೀಡಿದಲ್ಲಿ ಶಿಕ್ಷಣದ ಗುಣಮಟ್ಟ ಮತ್ತು ಮಾನದಂಡಗಳನ್ನು ದುರ್ಬಲ ಮಾಡಿದಂತೆ ಆಗುತ್ತದೆ. ದೇಶದಲ್ಲಿ ಆರೋಗ್ಯ ಸೇವೆಗಳ ಸಮಗ್ರತೆ ಆತಂಕಕ್ಕೆ ಕಾರಣವಾಗಲಿದೆ. ಒಮ್ಮೆ ಹೆಚ್ಚುವರಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಿದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಅನಧಿಕೃತ ಪ್ರವೇಶಕ್ಕೆ ಅನುಮೋದನೆ ನೀಡಿದಂತಾಗಲಿದೆ. ಶಿಸ್ತು ಮತ್ತು ಶೈಕ್ಷಣಿಕ ಮಾನದಂಡಗಳು ಹಾಳಾಗಲಿವೆ. ಹಾಗಾಗಿ, ಹೆಚ್ಚುವರಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಫಾರ್ಮಸಿ ಕೌನ್ಸಿಲ್‌ ಮಂಡಿಸಿರುವ ವಾದ ಸಮರ್ಥನೀಯ ಎಂದು ಹೈಕೋರ್ಟ್ ಹೇಳಿದೆ.

ಅಪ್ಪುತ ರಾಜು 2024-25ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಆಡಳಿತ ಮಂಡಳಿ ಕೋಟಾದಲ್ಲಿ ಎಂ.ಫಾರ್ಮಾಗೆ ಸೇರಿಕೊಂಡಿದ್ದರು. ಆದರೆ, ಫಾರ್ಮಸಿ ಕೌನ್ಸಿಲ್‌ನಿಂದ ನಿಗದಿಪಡಿಸಿರುವ ವಿದ್ಯಾರ್ಥಿಗಳ ಸಂಖ್ಯೆಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕಾಲೇಜಿಗೆ ಸೇರಿಸಿಕೊಂಡಿದ್ದ ಕಾರಣ ನೀಡಿ ರಾಜು ಅವರ ನೋಂದಣಿ ರದ್ದುಗೊಳಿಸಲಾಗಿತ್ತು.

ಇದನ್ನು ಪ್ರಶ್ನಿಸಿ ರಾಜು ಅವರು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮತ್ತು ಯುಜಿಸಿಗೆ ಸಲ್ಲಿಸಿದ್ದ ಅರ್ಜಿಗಳು ತಿರಸ್ಕೃತಗೊಂಡಿದ್ದವು. ಹೀಗಾಗಿ, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದಾಗ, ಏಕಸದಸ್ಯ ಪೀಠ ಕೂಡ ರಾಜು ಅರ್ಜಿಯನ್ನು ವಜಾಗೊಳಿಸಿತ್ತು.

PREV
Read more Articles on
click me!

Recommended Stories

ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್!
ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!