ವರಮಹಾಲಕ್ಷ್ಮಿ ಹಬ್ಬ: ಗಗನಕ್ಕೇರಿದ ಹೂವಿನ ದರ..!

By Kannadaprabha NewsFirst Published Aug 24, 2023, 4:30 AM IST
Highlights

ಬುಧವಾರ ಸೇವಂತಿಗೆ ಹೂವು ಒಂದು ಕೆಜಿಗೆ 350 ರಿಂದ 400ರ ವರೆಗೆ ಮಾರಾಟವಾಗಿದೆ. ವರಮಹಾಲಕ್ಷ್ಮಿ ಹಬ್ಬ ಸಮೀಪಿಸುತ್ತಿದ್ದಂತೆ ಹೂವಿನ ಬೆಲೆ ಮತ್ತಷ್ಟುಜಾಸ್ತಿಯಾಗಬಹುದು. ಗುರುವಾರದ ವೇಳೆಗೆ ಇನ್ನೂ ದುಬಾರಿಯಾಗಲಿದೆ.

ಚಿಕ್ಕಬಳ್ಳಾಪುರ(ಆ.24):  ಈಗಾಗಲೇ ಶ್ರಾವಣ ಮಾಸ ಆರಂಭವಾಗಿದ್ದು, ಸಾಲು ಸಾಲು ಹಬ್ಬಗಳು ಬರುತ್ತಿವೆ. ಬರುವ ಶುಕ್ರವಾರ ಆಚರಿಸಲಿರುವ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಹೂವಿನ ಬೆಲೆ ಗಗನ ಮುಟ್ಟಿದೆ. ಹಣ್ಣುಗಳು ಹಾಗೂ ಇತರೆ ಸಾಮಗ್ರಿಗಳ ದರವೂ ತೀವ್ರ ಏರಿಕೆ ಕಂಡಿವೆ.

ವರಮಹಾಲಕ್ಷ್ಮಿ ಹಬ್ಬಕ್ಕೆ ಈಗಲೇ ಖರೀದಿ ಜೋರಾಗಿದ್ದು, ನಗರದ ಎಪಿಎಂಸಿ ಮಾರುಕಟ್ಟೆ, ಟೌನ್‌ ಹಾಲ್‌ ಸರ್ಕಲ್‌, ಎಂಜಿ ರಸ್ತೆ, ಬಜಾರ್‌ ರಸ್ತೆ, ಬಿ.ಬಿ.ರಸ್ತೆ ಹಾಗೂ ಹೊರವಲಯದ ಕೆ.ವಿ.ಕ್ಯಾಂಪಸ್‌ ಹೂ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡುಬಂತು. ಬುಧವಾರ ಸೇವಂತಿಗೆ ಹೂವು ಒಂದು ಕೆಜಿಗೆ 350 ರಿಂದ 400ರ ವರೆಗೆ ಮಾರಾಟವಾಗಿದೆ. ವರಮಹಾಲಕ್ಷ್ಮಿ ಹಬ್ಬ ಸಮೀಪಿಸುತ್ತಿದ್ದಂತೆ ಹೂವಿನ ಬೆಲೆ ಮತ್ತಷ್ಟುಜಾಸ್ತಿಯಾಗಬಹುದು. ಗುರುವಾರದ ವೇಳೆಗೆ ಇನ್ನೂ ದುಬಾರಿಯಾಗಲಿದೆ.

ರಾಜ್ಯವನ್ನು ಬರಗಾಲ ಪೀಡಿತವೆಂದು ಘೋಷಿಸಲಿ: ಬಿ.ಎನ್‌.ಬಚ್ಚೇಗೌಡ

ಮಲ್ಲಿಗೆ ಕೆಜಿಗೆ 1200, ಕನಕಾಂಬರ 2000

ವಾರದ ಹಿಂದೆ ಮಲ್ಲಿಗೆ ಮೊಗ್ಗು ಕೆಜಿಗೆ 150-200 ರು.ಗಳಷ್ಟಿತ್ತು. ಬುಧವಾರÜದಂದು ಕೆ.ಜಿ. ಮಲ್ಲಿಗೆ ಹೂವು 1200 ರು. ದಾಟಿತ್ತು. 400-500 ರೂ. ಇದ್ದ ಕನಕಾಂಬರ ಹೂವು 1,400-2,000ರೂ, ಮಳ್ಳೆ ಹೂ ಕೆಜಿಗೆ 1000-1200 ರೂ.ಗೆ ತಲುಪಿದೆ. ಮಳೆ ಹೆಚ್ಚಾಗಿರುವುದರಿಂದ ತಾವರೆ ಹೂವಿಗೆ ಕೊರತೆಯಿಲ್ಲ, ಬೆಲೆಯೂ ಕಡಿಮೆಯಾಗಬೇಕಿತ್ತು. ಆದರೆ, ಅದೂ ಕಡಿಮೆ ಇಲ್ಲ. ಯಾಕಂದರೆ ಲಕ್ಷ್ಮೀ ಹಬ್ಬಕ್ಕೆ ತಾವರೆ ಹಾಗೂ ಕೇದಿಗೆ ಬಹುಮುಖ್ಯವಾಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಒಂದು ತಾವರೆ ಹೂವಿನ ಬೆಲೆ 30-50 ರೂ. ಹಾಗೂ ಕೇದಗೆ 70-100 ರೂ. ಮೀರಿದೆ.

ಗುಲಾಬಿ ಕೆ.ಜಿ ರೂ 250 ರಿಂದ 300, ಕಾಕಡ ಕೆಜಿಗೆ ರೂ 900 ರಿಂದ 1100, ಕೇವಲ 5-10 ರೂ.ಗೆ ಸಿಗುತ್ತಿದ್ದ ಚೆಂಡು ಹೂವಿನ ಬೆಲೆ ಕೇಳಿದರೆ ಗ್ರಾಹಕರು ಬೆಚ್ಚಿಬೀಳುವಂತಾಗಿದೆ. ಸಗಟು ದರದಲ್ಲೇ ಕೆ.ಜಿ. ಚೆಂಡು ಹೂವಿನ ಬೆಲೆ 30-60 ರೂ.ಗೆ ತಲುಪಿದೆ. ಅಲಂಕಾರಿಕ ಹೂಗಳಾದ ಗ್ಲಾಡಿಯೋಲಸ್‌ 3 ಕಡ್ಡಿಗಳಿಗೆ ರೂ 50, ಮತ್ತಿತರ ಹೂ ಗುಚ್ಚಗಳಿಗೆ 50- 100 ರೂ, ಗುಲಾಬಿ ಬಂಚ್‌ ಒಂದಕ್ಕೆ 150-200ರೂ, ದವಣ, ಕಮಗಗ್ಗರಿ ಸೇರಿದಂತೆ ಸುವಾಸನಾ ಭರಿತ ಗಿಡಗಳಿಗೆ 100-150ರೂ, ಪತ್ರೆ ಕೆಜಿಗೆ 80 ರೂಗಳಿಗೆ ಮಾರಾಟವಾದವು.

ವಿದ್ಯಾರ್ಥಿಗಳು ಹೇಗೆ ಓದಬೇಕು ಅಂದ್ರೆ ರಿಸಲ್ಟ್ ದಿನ ಇಡೀ ಕರ್ನಾಟಕವೇ ನಿಮ್ಮ ಬಗ್ಗೆ ಓದಬೇಕು: ಪ್ರದೀಪ್‌ ಈಶ್ವರ್‌

ಮಳೆಯ ಕೊರತೆಯಿಂದಾಗಿ ಹೂವಿನ ಫಸಲು ಕಡಿಮೆಯಾಗಿದೆ. ತಮಿಳುನಾಡಿನಿಂದ ಮಲ್ಲಿಗೆ, ಮಳ್ಳೆ ಮತ್ತಿತರ ಹೂವುಗಳು ಬರುತ್ತವೆ. ರೋಸ್‌ ಮತ್ತಿತರ ಹೂವುಗಳು ಚಿಕ್ಕಬಳ್ಳಾಪುರ ಸುತ್ತಮುತ್ತಲಿನ ಭಾಗಗಳಿಂದ ಬರುತ್ತವೆ. ಹಬ್ಬದ ಹಿನ್ನೆಲೆಯಲ್ಲಿ ಪಕ್ಕದ ಆಂಧ್ರ ಪ್ರದೇಶ ,ತೆಲಾಂಗಾಣ, ತಮಿಳುನಾಡು ವ್ಯಾಪಾರಿಗಳು ಹೂ ಖರೀದಿಯಲ್ಲಿ ತೊಡಗಿದ್ದಾರೆ. ಇದರಿಂದಾಗಿ ಬೆಲೆಗಳು ಹೆಚ್ಚಾಗಿವೆ. ಹೀಗಾಗಿ ಎಲ್ಲಾ ಬಗೆಯ ಹೂವುಗಳ ದರ ಗಗನಕ್ಕೇರಿವೆ ಎನ್ನುತ್ತಾರೆ ಮಾರಾಟಗಾರರ ಸಂಘದ ಅಧ್ಯಕ್ಷ ರವೀಂದ್ರ ಮತ್ತು ಅಶೋಕ್‌ ಕುಮಾರ್‌.

ಹಣ್ಣುಗಳ ದರವೂ ಹೆಚ್ಚಳ

ಹೂವಿನ ದರ ಜತೆಗೆ ಹಣ್ಣುಗಳ ಬೆಲೆಯೂ ಏರಿಕೆಯಾಗಿದೆ.ಸೇಬು ಕೆ.ಜಿ 150ರಿಂದ 200 ರು., ಮರಸೇಬು 100-130, ಸಪೋಟ 160, ಪೈನಾಪಲ್‌ 120ರಿಂದ 180ಕ್ಕೆ, ಸೀಬೆ 50-80ಕ್ಕೆ ,ಮೂಸಂಬಿಯ ಬೆಲೆ 50-80 ರೂ. ದಾಟಿದೆ. ಬಾಳೆಹಣ್ಣಿನ ಬೆಲೆ ಕೇಳುವುದೇ ಬೇಡ.ಕಳೆದ ಎರಡುಮೂರು ದಿನಗಳಿಂದ ಬಾಳೆ ಹಣ್ಣಿನ ಬೆಲೆ ಏಲಕ್ಕಿ ಬಾಳೆ ಕೆ.ಜಿ. ಗೆ 80-120 ರೂ.ವರೆಗೆ, ಪಚ್ಚಬಾಳೆ 40-60 ರೂ.ಗೆ ಏರಿದೆ. ದಾಳಿಂಭೆ 100-200ರಕ್ಕೆ, ಕಪ್ಪು ದ್ರಾಕ್ಷಿ ಹಣ್ಣಿನ ಬೆಲೆಯೂ ಹೆಚ್ಚಾಗಿದೆ. ತೆಂಗಿನ ಕಾಯಿಯ ಬೆಲೆ 15-25 ರು. ದಾಟಿದೆ.

click me!