ಹೊನ್ನಾಳಿ ಪಟ್ಟಣದ ಬಾಲರಾಜ್ ಘಾಟ್‌ನಲ್ಲಿ ಆರಂಭಿಸಿರುವ ನೆರೆ ಸಂತ್ರಸ್ತರ ಕೇಂದ್ರಕ್ಕೆ ನೀರು ನುಗ್ಗಿದ ಹಿನ್ನೆಲೆ ತಾಲೂಕು ಆಡಳಿತ ಕೂಡಲೇ ಅಲ್ಲಿರುವ ಸಂತ್ರಸ್ತರನ್ನು ಪಟ್ಟಣದ ಸರ್ಕಾರಿ ಉರ್ದು ಬಾಲಕಿಯರು ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಿತು. ಅಂಗನವಾಡಿ ಕಾರ್ಯಕರ್ತೆ ಕೆ.ಎಸ್. ಮೆಹಬೂಬಿ ನೆರೆ ಸಂತ್ರಸ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದರು.
ದಾವಣಗೆರೆ(ಆ.11): ಹೊನ್ನಾಳಿ ಪಟ್ಟಣದ ಬಾಲರಾಜ್ ಘಾಟ್‌ನಲ್ಲಿ ಆರಂಭಿಸಿರುವ ನೆರೆ ಸಂತ್ರಸ್ತರ ಕೇಂದ್ರಕ್ಕೆ ನೀರು ನುಗ್ಗಿದ ಹಿನ್ನೆಲೆ ತಾಲೂಕು ಆಡಳಿತ ಕೂಡಲೇ ಅಲ್ಲಿರುವ ಸಂತ್ರಸ್ತರನ್ನು ಪಟ್ಟಣದ ಸರ್ಕಾರಿ ಉರ್ದು ಬಾಲಕಿಯರು ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಿತು.
ತಹಸೀಲ್ದಾರ್ ತುಷಾರ್ ಬಿ. ಹೊಸೂರು, ಪಪಂ ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ ಉಸ್ತುವಾರಿಯಲ್ಲಿ ಅಂಬೇಡ್ಕರ್ ಸಮುದಾಯದಲ್ಲಿ ಅಶ್ರಯ ಪಡೆದಿದ್ದ 17 ಕುಟುಂಬಗಳ ಸುಮಾರು 80 ಜನರನ್ನು ಇಲ್ಲಿಂದ ಉರ್ದು ಶಾಲೆಗೆ ಸ್ಥಳಾಂತರಿಸುವ ಕಾರ್ಯದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ಪದವಿ ಕಾಲೇಜುಗಳ ಸ್ಕೌಟ್ಸ್ ಮತ್ತು ಗೈಡ್ಸ್, ವಿದ್ಯಾರ್ಥಿಗಳು ಪಾಲ್ಗೊಂಡು ಸಹಕರಿಸಿದರು.
ತಾಲೂಕಿನ ಮಲೆ ಕುಂಬಳೂರಿನ ಅಂಗನವಾಡಿ ಕಾರ್ಯಕರ್ತೆ ಕೆ.ಎಸ್. ಮೆಹಬೂಬಿ ನೆರೆ ಸಂತ್ರಸ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದು ಇದನ್ನು ತಾಲೂಕು ಆಡಳಿತ ಆರೋಗ್ಯಇಲಾಖೆಯಿಂದ ತಪಾಸಣೆ ನಡೆಸಿದ ನಂತರ ಸಂತ್ರಸ್ಥರಿಗೆ ನೀಡಲಾಯಿತು.
ಶನಿವಾರ ಕೂಡಾ ನೀರಿನ ಮಟ್ಟ ಏರಿಕೆಯಾಗಿದ್ದು ನದಿ ನೀರಿನ ಮಟ್ಟ12.30 ಮೀಟರ್ ತಲುಪಿದೆ. ಬಂಬೂಬಜಾರ್, ಸಂತೆ ಮೈದಾನ, ಶಾಂತ ಟಾಕೀಸ್ ರಸ್ತೆ, ಅಗ್ರಹಾರದ ಸ್ವಾಮಿ ವಿವೇಕಾನಂದ, ವಿಶ್ವೇಶ್ವರಯ್ಯ ಶಾಲೆ ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಪೊಲೀಸರನ್ನು ನಿಯೋಜಿಸಿಲ್ಲ:
ಉಕ್ಕಿ ಹರಿಯುತ್ತಿರುವ ತುಂಗಾಭದ್ರ ನದಿಯನ್ನು ಪಟ್ಟಣದ ಹಳೆ ಮತ್ತು ಹೊಸ ಸೇತುವೆ ಮೇಲೆ ನಿಂತು ನೂರಾರು ಜನ ವೀಕ್ಷಿಸುತ್ತಿದ್ದು, ಇದೇ ಸಂದರ್ಭದಲ್ಲಿ ಸೆಲ್ಫಿ ಕೂಡಾ ತೆಗೆದುಕೊಳ್ಳಲು ಮುಗಿ ಬೀಳುತ್ತಿದ್ದರು. ಪಟ್ಟಣದಲ್ಲಿ ಹಲವಾರು ಸ್ಥಳಗಳಲ್ಲಿ ಪ್ರವಾಹದ ನೀರು ತುಂಬಿ ಹರಿಯುತ್ತಿದ್ದರೂ ಸಾರ್ವಜನಿಕರ ರಕ್ಷಣೆ ದೃಷ್ಟಿಯಿಂದ ಎಲ್ಲಿಯೂ ಪೊಲೀಸ್ ಸಿಬ್ಬಂದಿ ನಿಯೋಜಿಸದಿರುವುದು ಸಾರ್ವಜನಿಕರಿಂದ ಸಾಕಷ್ಟುಟೀಕೆಗಳಿಗೆ ಗುರಿಯಾಗಿದೆ.
20ಕ್ಕೂ ಹೆಚ್ಚು ಮನೆಗೆ ನೀರು:
ಪಟ್ಟಣದ ಅನೇಕ ಭಾಗಗಲ್ಲಿ ನೆರೆಹಾವಳಿಯಿಂದ ಸುಮಾರು 20ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದೆ. ರಾಜ್ಯ ರಸ್ತೆ ಸಾರಿಗೆ ಡಿಪೋ, ಬಿದರಗಡ್ಡೆ ರಸ್ತೆ ಒಡ್ಡಿನ ಕೆರೆ ಹಳ್ಳ, ದೇವನಾಯ್ಕನಹಳ್ಳಿ, ಹಿರೇಕಲ್ಮಠ, ಗ್ರಾಮಗಳ ವ್ಯಾಪ್ತಿಯಲ್ಲಿ ನೂರಾರು ಹೆಕ್ಟೇರ್ ಜಮೀನುಗಳು ನೀರು ತುಂಬಿ ಜಲಾವೃತ್ತಗೊಂಡಿವೆ.
ಶನಿವಾರ ಶಾಸಕ ಎಂ.ಪಿ.ರೇಣುಕಾಚಾರ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾಬಸರಾಜ್ ಉಪಾಧ್ಯಕ್ಷ ಸಿ.ಸುರೇಂದ್ರನಾಯ್ಕ, ಪಟ್ಟಣ ಪಂಚಾಯಿತಿ ಸದಸ್ಯ ಕೆ.ವಿ.ಶ್ರಿಧರ್,ರಂಗನಾಥ್, ಕೋಳಿಸತೀಶ್ ಮುಂತಾದರು ನೆರೆ ನೀರು ನುಗ್ಗಿ ಸಂಕಷ್ಟಕ್ಕೀಡಾಗಿರುವ ಜನರ ಮನೆಗೆ ತೆರಳಿ ಧೈರ್ಯ ತುಂಬಿದರು.