ಉತ್ತರ ಕನ್ನಡಕ್ಕೆ ತ್ರಿವಳಿ ನದಿಗಳ ಸಂಕಷ್ಟ: ಬದುಕು ಕಂಡುಕೊಳ್ಳಲು ಜನರ ಹೋರಾಟ..!

Kannadaprabha News   | Asianet News
Published : Jul 25, 2021, 11:13 AM IST
ಉತ್ತರ ಕನ್ನಡಕ್ಕೆ ತ್ರಿವಳಿ ನದಿಗಳ ಸಂಕಷ್ಟ: ಬದುಕು ಕಂಡುಕೊಳ್ಳಲು ಜನರ ಹೋರಾಟ..!

ಸಾರಾಂಶ

* ಕಾಳಿ, ಅಘನಾಶಿನಿ, ಗಂಗಾವಳಿ ನದಿಯಲ್ಲಿ ನೆರೆ * ಕರಾವಳಿ ಜಿಲ್ಲೆ ಜನರ ಪರದಾಟ * ಪರಿಹಾರ ಕೇಂದ್ರದಲ್ಲಿ ನೆರೆಯ ಯಾತನೆ ನೆನೆದು ಪರಿತಪಿಸುತ್ತಿರುವ ಜನತೆ  

ವಸಂತಕುಮಾರ್‌ ಕತಗಾಲ

ಕಾರವಾರ(ಜು.25): ಕಳೆದ ಎರಡು ಮೂರು ದಿನಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಾಳಿ, ಗಂಗಾವಳಿ, ಅಘನಾಶಿನಿ ನದಿತಟಗಳಲ್ಲಿ ಉಂಟಾಗಿರುವ ಪ್ರವಾಹ ಉತ್ತರ ಕನ್ನಡದ ಕರಾವಳಿಗರನ್ನು ಅಕ್ಷರಶಃ ತಲ್ಲಣಗೊಳಿಸಿದೆ. ಜನ ಬದುಕು ಕಂಡುಕೊಳ್ಳಲು ಹೋರಾಟ ನಡೆಸುವಂತಾಗಿದೆ.

ಕಾಳಿ ಹಾಗೂ ಉಪ ನದಿಗೆ ಸುಪಾ, ತಟ್ಟಿಹಳ್ಳ, ಬೊಮ್ಮನಳ್ಳಿ, ಕೊಡಸಳ್ಳಿ, ಕದ್ರಾ ಹೀಗೆ ಸಾಲುಸಾಲಾಗಿ ಅಣೆಕಟ್ಟು ನಿರ್ಮಿಸಲಾಗಿದೆ. ಈ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿ ಒಂದು ಡ್ಯಾಂನಿಂದ ನೀರನ್ನು ಹೊರಬಿಟ್ಟರೆ ಉಳಿದೆಲ್ಲ ಡ್ಯಾಂನಿಂದ ನೀರನ್ನು ಹೊರಬಿಡಬೇಕು. ಡ್ಯಾಂ ಅನ್ನು ಪ್ರವಾಹ ನಿಯಂತ್ರಕವಾಗಿ ಬಳಸಬೇಕು ಎಂದು ಎಷ್ಟೇ ಪ್ರಯತ್ನಪಟ್ಟರೂ ಅಣೆಕಟ್ಟುಗಳು ಪ್ರವಾಹ ತಂದೊಡ್ಡುತ್ತಿವೆ. ಯಲ್ಲಾಪುರ, ಹುಬ್ಬಳ್ಳಿ ಧಾರವಾಡ ಕಡೆಗಳಲ್ಲಿ ಮಳೆಯಾದರೆ ಗಂಗಾವಳಿ ನದಿ ಆರ್ಭಟಿಸುತ್ತದೆ. ಶಿರಸಿ, ಸಿದ್ದಾಪುರದಲ್ಲಿ ಭಾರಿ ಮಳೆಯಾದರೆ ಅಘನಾಶಿನಿ ನದಿ ಅಬ್ಬರಿಸುತ್ತದೆ. ಘಟ್ಟದ ಮೇಲೆ ಸುರಿಯುವ ಮಳೆ ಕರಾವಳಿಯಲ್ಲಿ ಪ್ರವಾಹ ತಂದೊಡ್ಡುತ್ತವೆ.

ಯಲ್ಲಾಪುರ: ಶಿರ್ಲೆ ಜಲಪಾತಕ್ಕೆ ತೆರಳಿದ್ದ ಆರು ಯುವಕರು ಪತ್ತೆ

ಎರಡು ಮೂರು ವರ್ಷಗಳಿಂದ ಇದೇ ಸಮಸ್ಯೆಯ ಪುನರಾವರ್ತನೆಯಾಗುತ್ತಿದ್ದು ಕಾಳಿ, ಗಂಗಾವಳಿ, ಅಘನಾಶಿನಿ, ವರದಾ ನದಿಗಳ ತೀರದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಶುಕ್ರವಾರ, ಶನಿವಾರಗಳಂದೂ ಕಾಳಿ ನದಿ ತೀರ, ಗಂಗಾವಳಿ ನದೀ ಪಾತ್ರ ಹಾಗೂ ಅಘನಾಶಿನಿ ನದಿಗುಂಟ ಪ್ರವಾಹದಲ್ಲಿ ಸಿಲುಕಿ ತತ್ತರಗೊಂಡ ಸುಮಾರು ಸಾವಿರಾರು ಕುಟುಂಬಗಳ 8 ಸಾವಿರಕ್ಕೂ ಹೆಚ್ಚು ಜನತೆ ತೊಪ್ಪೆಯಾದ ಬಟ್ಟೆಯಲ್ಲಿ ನಡುಗುತ್ತ ಕೈಗೆ ಸಿಕ್ಕಿದ್ದನ್ನು ಎತ್ತಿಕೊಂಡು ಬಂದು ಪರಿಹಾರ ಕೇಂದ್ರದಲ್ಲಿ ನೆರೆಯ ಯಾತನೆಯನ್ನು ನೆನೆದು ಪರಿತಪಿಸುತ್ತಿದ್ದಾರೆ. ಒಡಹುಟ್ಟಿದವರನ್ನು ಕಳೆದುಕೊಂಡವರ ಆಕ್ರಂದನ, ತಲೆಯ ಮೇಲಿದ್ದ ಸೂರು ಕಳಚಿಬಿದ್ದವರ ನೋವು, ಕಣ್ಣೆದುರೇ ತೇಲಿಹೋದ ಜಾನುವಾರುಗಳನ್ನು ನೋಡಿ ಯಾತನೆ ಪಟ್ಟವರು ಹೀಗೆ ಎಲ್ಲಿ ನೋಡಿದರೂ ದಾರುಣ ದೃಶ್ಯಗಳೇ ಕಣ್ಣಿಗೆ ಕಾಣಿಸುತ್ತಿವೆ.

ಶನಿವಾರ ಗಂಗಾವಳಿಯ ಅಬ್ಬರಕ್ಕೆ ಗುಳ್ಳಾಪುರ ಸೇತುವೆ ಕೊಚ್ಚಿ ಹೋಗಿ ಡೊಂಗ್ರಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಬಾಹ್ಯ ಜಗತ್ತಿನ ಸಂಪರ್ಕ ಕಡಿದುಕೊಂಡಿವೆ. ಗುಡ್ಡ, ರಸ್ತೆ ಕುಸಿತದಿಂದ ಯಲ್ಲಾಪುರದ ಕಳಚೆ ಗ್ರಾಮ ತತ್ತರಿಸಿದೆ. ಗುಳ್ಳಾಪುರದಿಂದ ಡೊಂಗ್ರಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ಬೃಹತ್‌ಸೇತುವೆ ಶುಕ್ರವಾರ ರಾತ್ರಿ ಗಂಗಾವಳಿಯ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿದೆ. ಇದರಿಂದ ಕಲ್ಲೇಶ್ವರ, ಹೆಗ್ಗಾರ, ಕೈಗಡಿ, ಕೊಂಕಿ, ಕನಕನಹಳ್ಳಿ ಮತ್ತಿತರ ಗ್ರಾಮಗಳು ಬಾಹ್ಯ ಜಗತ್ತಿನೊಂದಿಗೆ ಸಂಪರ್ಕವನ್ನು ಕಡಿದುಕೊಂಡಿದೆ. ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ತೂಗು ಸೇತುವೆ 2019ರ ಭಾರಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿತ್ತು. ಈಗ ಇರುವ ಏಕೈಕ ಸೇತುವೆಯೂ ನೀರು ಪಾಲಾಗಿದ್ದು ಅಲ್ಲಿನ ಸಾವಿರಾರು ಕುಟುಂಬಗಳು ತುಂಬಾ ಸಂಕಷ್ಟದಲ್ಲಿ ಸಿಲುಕುವಂತಾಗಿದೆ.
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!