ಕಾರಿಗೆ ಆ್ಯಂಬುಲೆನ್ಸ್‌ ಡಿಕ್ಕಿ : ಸ್ಥಳದಲ್ಲೇ ಐವರ ಸಾವು

By Web DeskFirst Published May 28, 2019, 8:23 AM IST
Highlights

ಕಾರು ಹಾಗೂ ಆ್ಯಂಬುಲೆನ್ಸ್ ನಡುವೆ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ೖವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಬೆಂಗಳೂರು :  ಅತಿವೇಗವಾಗಿ ಚಾಲನೆ ಮಾಡುತ್ತಿದ್ದ ಆ್ಯಂಬುಲೆನ್ಸ್‌ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಯಲ್ಲಿ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆ ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ಅಸುನೀಗಿರುವ ದಾರುಣ ಘಟನೆ ಬೆಂಗಳೂರಿನ ಯಲಹಂಕದ ಕೋಗಿಲು ಕ್ರಾಸ್‌ ಮೇಲ್ಸೇತುವೆ ಮೇಲೆ ಸಂಭವಿಸಿದೆ.

ಪಶ್ವಿಮ ಬಂಗಾಳದ ಮೂಲದ ದೀಪಾಂಕರ್‌ ಡೇ (46), ಪತ್ನಿ ಸ್ವಾಗತ ಚೌಧರಿ (42), ದಂಪತಿ ಪುತ್ರ ಧ್ರುವ ಡೇ (14) ಹಾಗೂ ಸ್ವಾಗತ ಚೌಧರಿ ಸಹೋದರಿ ಸುಜಯ್‌ (45) ಅವರ ತಾಯಿ ಜಯತಿ (65) ಮೃತರು. ಘಟನೆಯಲ್ಲಿ ಆ್ಯಂಬುಲೆನ್ಸ್‌ ಚಾಲಕ ಚನ್ನಬಸಪ್ಪ ಕೂಡ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಯಲಹಂಕ ಸಂಚಾರಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ದೀಪಾಂಕರ್‌ ಡೇ ಕುಟುಂಬ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಆರ್‌.ಟಿ.ನಗರದಲ್ಲಿ ನೆಲೆಸಿದ್ದರು. ಸ್ವಾಗತ ಚೌಧರಿ ಅವರ ತಾಯಿ ಮತ್ತು ಸಹೋದರಿ ಸುಜಯ್‌ ಅವರ ಕುಟುಂಬ ತಮಿಳುನಾಡಿನ ಚೆನ್ನೈನಲ್ಲಿ ನೆಲೆಸಿದ್ದರು. ದೀಪಾಂಕರ್‌ ಡೇ ಅವರು ನಗರದ ಮಲ್ಟಿಮೀಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಸ್ವಾಗತ ಚೌಧರಿ ಜೈನ್‌ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಅದೇ ಶಾಲೆಯಲ್ಲಿ ಪುತ್ರ ಧ್ರುವ ಡೇ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.

ಸ್ವಾಗತ ಚೌಧರಿ ಅವರ ತಾಯಿ ಜಯತಿ ಅವರಿಗೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ತಾಯಿಗೆ ಚಿಕಿತ್ಸೆ ಕೊಡಿಸಲು ಸುಜಯ್‌ ಅವರು ತಾಯಿಯನ್ನು ಕೆಲ ದಿನಗಳ ಹಿಂದೆ ಬೆಮಗಳೂರಿಗೆ ಕರೆ ತಂದಿದ್ದು, ಸಹೋದರಿ ಮನೆಯಲ್ಲಿ ತಂಗಿದ್ದರು.

ವಿಮಾನ ತಪ್ಪಿತ್ತು:  ದೀಪಾಂಕರ್‌ ಡೇ ಕುಟುಂಬ ಸಮೇತ ಭಾನುವಾರ ರಾತ್ರಿ 11ಕ್ಕೆ ಹೊರಡುವ ವಿಮಾನದಲ್ಲಿ ಚೆನ್ನೈಗೆ ತೆರಳಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಮರುದಿನ ಸೋಮವಾರ ಬೆಳಗ್ಗೆ 6.30ರ ವಿಮಾನದ ಟಿಕೆಟ್‌ ದೊರಕಿತ್ತು. ಈ ಹಿನ್ನೆಲೆಯಲ್ಲಿ ಇಡೀ ಕುಟುಂಬ ತಮ್ಮ ವ್ಯಾಗನರ್‌ ಕಾರಿನಲ್ಲಿ ಆರ್‌.ಟಿ.ನಗರದ ಮನೆಗೆ ತಡರಾತ್ರಿ 1ರ ಸುಮಾರಿಗೆ ವಾಪಸ್‌ ಬರುತ್ತಿತ್ತು. ಬೆಂಗಳೂರಿನಿಂದ ದೇವನಹಳ್ಳಿ ಕಡೆಗೆ ಹೋಗುತ್ತಿದ್ದ ಆ್ಯಂಬುಲೆನ್ಸ್‌ ವೇಗವಾಗಿ ಬಂದಿದ್ದು, ರಸ್ತೆ ವಿಭಕಕ್ಕೆ ಡಿಕ್ಕಿಯಾಗಿ ಎದುರಿಗೆ ಬರುತ್ತಿದ್ದ ವ್ಯಾಗನರ್‌ ಕಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಕಾರಿನಲ್ಲಿದ್ದವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಅಪಘಾತದ ತೀವ್ರತೆಗೆ ವ್ಯಾಗನ್‌ ಕಾರು ಮತ್ತು ಆ್ಯಂಬುಲೆನ್ಸ್‌ ವಾಹನ ಸಂಪೂರ್ಣ ಜಖಂಗೊಂಡಿತ್ತು. ವಾಹನಗಳಿಂದ ಮೃತ ದೇಹಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ಸಿಬ್ಬಂದಿ ಕಾರಿನಲ್ಲಿ ಸಿಲುಕಿಕೊಂಡಿದ್ದ ಶವಗಳನ್ನು ಹೊರ ತೆಗೆದರು.

click me!