ಹೆಮ್ಮೆಯ ಬೀಟ್ ಡ್ಯೂಟಿಗೆ ಮೊದಲ ಯಶಸ್ಸು: 30 ವರ್ಷಗಳಿಂದ ತಲೆ ಮರೆಸಿದ್ದ ಆರೋಪಿ ಸೆರೆ

By Kannadaprabha NewsFirst Published Sep 6, 2019, 11:35 AM IST
Highlights

ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರ ನೂತನ ಹೆಮ್ಮೆಯ ಡ್ಯೂಟಿ ಪೊಲೀಸ್ ಪ್ರಯೋಗಕ್ಕೆ ಮೊದಲ ಯಶಸ್ಸು ಲಭಿಸಿದೆ. ಬೀಟ್‌ ಪೊಲೀಸ್‌ ಹಾಗೂ ನಾಗರಿಕರ ಸಂಪರ್ಕದ ವಾಟ್ಸಾಪ್ ಗ್ರೂಪ್‌ ರಚಿಸಲಾಗಿತ್ತು. ಇದೀಗ ಈ ಗ್ರೂಪ್‌ಗೆ ಮೊದಲ ಯಶಸ್ಸು ಲಭಿಸಿದೆ.

ಮಂಗಳೂರು(ಸೆ.06): ನಗರ ಪೊಲೀಸ್‌ ಕಮಿಷನರ್‌ ಜಾರಿಗೆ ತಂದ ‘ನನ್ನ ಬೀಟ್‌-ನನ್ನ ಹೆಮ್ಮೆ’ ಹೊಸ ಬೀಟ್‌ ವ್ಯವಸ್ಥೆ ಪರಿಣಾಮ 30 ವರ್ಷಗಳಿಂದ ಹಲ್ಲೆ ಪ್ರಕರಣದಲ್ಲಿ ತಲೆಮರೆಸಿದ್ದ ಆರೋಪಿ ಪತ್ತೆ ಸಾಧ್ಯವಾಗಿದೆ. ಇದರೊಂದಿಗೆ ಬೀಟ್‌ ಪೊಲೀಸ್‌ ಹಾಗೂ ನಾಗರಿಕರ ಸಂಪರ್ಕದ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಮೊದಲ ಯಶಸ್ಸು ಲಭಿಸಿದೆ.

ಕಳೆದ ಎರಡು ವಾರದ ಹಿಂದೆ ನಗರದಲ್ಲಿ ಕಾನೂನು, ಸುವ್ಯವಸ್ಥೆ ಪಾಲನೆಗೆ ನಾಗರಿಕರ ಸಹಕಾರಕ್ಕಾಗಿ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಅವರು ‘ನನ್ನ ಬೀಟ್‌-ನನ್ನ ಹೆಮ್ಮೆ’ ಎಂಬ ಹೊಸ ಬೀಟ್‌ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದಿದ್ದರು. ಅಲ್ಲದೆ ಮೊದಲ ದಿನ ಸ್ವತಃ ಕಮಿಷನರ್‌ ಅವರೇ ಬೀಟಿ ಸಿಬ್ಬಂದಿ ಜೊತೆಯಲ್ಲಿ ಬೀಟ್‌ ನಡೆಸಿದ್ದರು.

ಮಂಗಳೂರಿನಲ್ಲಿನ್ನು 'ಹೆಮ್ಮೆಯ ಬೀಟ್ ಡ್ಯೂಟಿ'

ಅಲ್ಲದೆ ಸಿಬ್ಬಂದಿಯ ಬೀಟ್‌ ವ್ಯಾಪ್ತಿಯಲ್ಲಿ ನಾಗರಿಕರನ್ನು ಒಳಗೊಂಡ ವಾಟ್ಸ್‌ಆ್ಯಪ್‌ ಗುಂಪನ್ನು ರಚಿಸಿದ್ದರು. ಈಗಾಗಲೇ ರಚನೆಗೊಂಡ ಈ ಗುಂಪಿನ ಸದಸ್ಯರೇ ತಲೆ ಮರೆಸಿದ್ದ ಆರೋಪಿಯ ಪತ್ತೆಗೆ ನೆರವಾಗಿದ್ದಾರೆ. ಹಾಗಾಗಿ ಈ ಗುಂಪಿನ ಯಶಸ್ಸಿನ ಮೊದಲ ಪತ್ತೆ ಪ್ರಕರಣ ಇದಾಗಿದೆ.

ಗುಂಪಿನ ಸದಸ್ಯ ನಾಗರಿಕರೊಬ್ಬರು ವಾಟ್ಸ್‌ಆ್ಯಪ್‌ ಮೂಲಕ ತಲೆಮರೆಸಿದ ಆರೋಪಿ ಭಾವಚಿತ್ರವನ್ನು ಖಾಸಗಿಯಾಗಿ ಪೊಲೀಸರಿಗೆ ರವಾನಿಸಿದ್ದರು. ಈ ಮೂಲಕ ಪೊಲೀಸರು ತಲೆಮರೆಸಿದ್ದ ಆರೋಪಿಯನ್ನು ಸುಲಭದಲ್ಲಿ ಬಂಧಿಸಿದ್ದರು. 1981ರಲ್ಲಿ ನಡೆದಿದ್ದ ಹಲ್ಲೆ ಪ್ರಕಣದಲ್ಲಿ ತಲೆಮರೆಸಿಕೊಂಡಿದ್ದ ಉಳ್ಳಾಲದ ಕಿನ್ಯಾ ಬೇಳಂ ನಿವಾಸಿ ಶೇಖಬ್ಬ(50) ಬಂಧಿತ ಆರೋಪಿ.

ಈತನ ವಿರುದ್ಧ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ದೋಷಾರೋಪ ಪಟ್ಟಿಸಲ್ಲಿಸಿ, ನ್ಯಾಯಾಲಯ ವಾರಂಟ್‌ ಹೊಡಿಸಿದ್ದರೂ ಈತ ತಲೆಮರೆಸಿಕೊಂಡಿದ್ದ.

ಆರೋಪಿ ಪತ್ತೆಗೆ ನೆರವಾಯ್ತು ವಾಟ್ಸಾಪ್:

ಕಿನ್ಯಾ ಬೇಳರಿಂಗೆ ಪರಿಸರದ ಬೀಟ್‌ ಸಿಬ್ಬಂದಿ ಸತೀಶ್‌ ಎಂಬವರು ತನ್ನ ಮೈ ಬೀಟ್‌ ಮೈ ಪ್ರೈಡ್‌ ವ್ಯಾಟ್ಸ್‌ ಅಪ್‌ ಗ್ರೂಪ್‌ನ ಸದಸ್ಯರಿಂದ ಬಂದ ಮಾಹಿತಿ ಆಧಾರದಲ್ಲಿ ಆರೋಪಿ ಇರುವಿಕೆಯನ್ನು ಗಮನಿಸಿ ಆತನ ಫೋಟೋ ಸಹಿತ ನಿಯಂತ್ರಣ ಕೊಠಡಿ ಹಾಗೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಆಧಾರದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ಸಲಹೆಯಂತೆ ಕಾರ್ಯಾಚರಣೆ ನಡೆಸಿದ ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮಂಗಳೂರು: ಬೀಟ್‌ ಪೊಲೀಸ್ ಜೊತೆ ಬೀಟ್‌ ನಡೆಸಿದ ಕಮಿಷನರ್‌!

ಹೊಸ ಬೀಟ್‌ ಪದ್ಧತಿಯಿಂದ 30 ವರ್ಷದ ಹಳೆ ಆರೋಪಿಯನ್ನು ಬಂಧಿಸಲು ಸಾಧ್ಯವಾದುದಕ್ಕೆ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಅವರು ಸಿಬ್ಬಂದಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

click me!