ಕಿಡಿಗೇಡಿಗಳ ಸಿಗರೇಟ್‌ ಚಟಕ್ಕೆ 12 ಎಕರೆ ಭತ್ತ ಭಸ್ಮ: ಕಂಗಾಲಾದ ರೈತ

By Kannadaprabha News  |  First Published Dec 13, 2020, 9:47 AM IST

ಸಿಗರೇಟ್‌ ಬೆಂಕಿಗೆ 12 ಎಕರೆ ಭತ್ತ ಭಸ್ಮ| ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಡೆದ ಘಟನೆ| ಸೂಕ್ತ ಪರಿಹಾರ ನೀಡಲು ರೈತರ ಆಗ್ರಹ| ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕಂದಾಯ ನಿರೀಕ್ಷಕ ಸುರೇಶ ಮತ್ತು ಗ್ರಾಮಲೆಕ್ಕಾಧಿಕಾರಿ ಉಮೇಶ| 


ಕಾರಟಗಿ(ಡಿ.13):  ಕಿಡಿಗೇಡಿಗಳು ಸಿಗರೇಟ್‌ ಸೇದಿ ಭತ್ತದ ಗದ್ದೆಯಲ್ಲಿ ಬಿಸಾಡಿದ್ದರಿಂದ ಸುಮಾರು 12 ಎಕರೆ ಪ್ರದೇಶದ ಬೆಳೆದು ನಿಂತು ಕಟಾವಿಗೆ ಬಂದಿದ್ದ ಭತ್ತದ ಪೈರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಬೂದುಗುಂಪಾ ಗ್ರಾಪಂ ವ್ಯಾಪ್ತಿಯ ತಿಮ್ಮಾಪುರದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ತಿಮ್ಮಾಪುರದ ರೈತ ಶರಣಪ್ಪ ಶೀಲವಂತರ ಭತ್ತದ ಪೈರು ಕಳೆದುಕೊಂಡ ನತದೃಷ್ಟರು. ಶನಿವಾರ ಸಂಜೆ ಅಥವಾ ರಾತ್ರಿ ಭತ್ತದ ಪೈರನ್ನು ಕಟಾವು ಮಾಡಲು ಅವರು ನಿರ್ಧರಿಸಿದ್ದರು. ಕಟಾವು ಯಂತ್ರದ ದಾರಿ ಕಾಯುತ್ತಿದ್ದರು. ಸಂಜೆ 4 ಗಂಟೆಗೆ ಕಟಾವು ಯಂತ್ರ ಬರುವುದಾಗಿ ತಿಳಿದಿದ್ದರಿಂದ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

Tap to resize

Latest Videos

ತಿಮ್ಮಾಪುರ ಮುಕ್ಕುಂದಿ ರಸ್ತೆಯಲ್ಲಿನ ರಸ್ತೆ ಬದಿಯಲ್ಲಿಯೇ ಇರುವ ಈ ಜಮೀನಿಗೆ ದಾರಿ ಹೋಕರಾರ‍ಯರೋ ಸೇದಿದ ಸಿಗರೇಟ್‌ನ್ನು ಹಚ್ಚಿ ಎಸೆದು ಹೋಗಿದ್ದಾರೆ. ಅಕ್ಕಪಕ್ಕದ ಜಮೀನಿನಲ್ಲಿ ರಾಶಿ ಮಾಡಿದ್ದ ರೈತರು ಬೆಂಕಿ ಮತ್ತು ಹೊಗೆಯನ್ನು ನೋಡಿ ಬೆಂಕಿ ಆರಿಸಲು ನೀರು, ಮಣ್ಣುಗಳನ್ನು ಎಸೆಯುವಷ್ಟರಲ್ಲಿ ಬೆಂಕಿ ಪ್ರಖರವಾಗುತ್ತ ಇಡೀ ಹೊಲವನ್ನೇ ವ್ಯಾಪಿಸಿತು.

ಆನೆಗೊಂದಿಯಲ್ಲಿ ವಿವಾದಿತ ಪದ್ಮನಾಭ ತೀರ್ಥರ ಆರಾಧನೆ ಆರಂಭ

ಶರಣಪ್ಪ ಶೀಲವಂತರ ಸ್ವಂತ 6 ಎಕರೆ ಮತ್ತು 6 ಎಕರೆ ಬೇರೆಯವರಿಂದ ಗುತ್ತಿಗೆ ಪಡೆದು ಭತ್ತ ಬೆಳೆದಿದ್ದರು. ಎಕರೆಗೆ ಸುಮಾರು 25 ರಿಂದ 30 ಸಾವಿರ ರು. ಸಾಲ ಮಾಡಿದ್ದರು. ಇದೀಗ ಎಲ್ಲವೂ ಅಗ್ನಿಗೆ ಆಹುತಿಯಾದಂತಾಗಿದೆ.
ಸ್ಥಳಕ್ಕೆ ಕಂದಾಯ ನಿರೀಕ್ಷಕ ಸುರೇಶ ಮತ್ತು ಗ್ರಾಮಲೆಕ್ಕಾಧಿಕಾರಿ ಉಮೇಶ ಭೇಟಿ ನೀಡಿ ಪರಿಶೀಲಿಸಿದರು.

ರೈತರ ಮಾಹಿತಿಗೆ ಮೇರೆಗೆ ಬೆಂಕಿ ಹೊತ್ತಿಕೊಂಡ ಭತ್ತದ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಕನಿಷ್ಠ 20 ಗುಂಟೆಯಷ್ಟುಬೆಳೆಹಾನಿಯಾಗಿರುವ ಸಾಧ್ಯತೆ ಇದೆ. ಈ ಕುರಿತು ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಲಾಗುವುದು ಎಂದು ಗ್ರಾಮಲೆಕ್ಕಾಧಿಕಾರಿ ಉಮೇಶ ತಿಳಿಸಿದ್ದಾರೆ. 

ದಿಕ್ಕು ತೋಚುತ್ತಿಲ್ಲ: ರೈತನ ಅಳಲು

ಕಾಲುವೆ ವ್ಯಾಪ್ತಿಯ ಕೊನೆ ನೀರು ತಮ್ಮ ಭಾಗಕ್ಕೆ ಬರುತ್ತದೆ. ಕಷ್ಟಪಟ್ಟು ಭತ್ತ ನಾಟಿ ಮಾಡಿದ್ವಿ. 6 ಎಕರೆ ಸ್ವಂತದ್ದು ಸೇರಿ ಇನ್ನು ಆರು ಎಕರೆ ಗುತ್ತಿಗೆ ಪಡೆದು ಒಟ್ಟು 12 ಎಕರೆ ಭತ್ತ ನಾಟಿ ಮಾಡಲಾಗಿತ್ತು. ಈಗ ಕಟಾವು ಮಾಡುವ ಮುನ್ನವೇ ಬೆಳೆದು ನಿಂತ ಭತ್ತ ಸುಟ್ಟು ಕರಕಲಾಗಿದೆ. ಈಗ ನಮಗೆ ಎಣ್ಣೆ (ಕ್ರಿಮಿನಾಶಕ ಔಷಧಿ) ಕುಡಿಯೊದೊಂದೆ ದಾರಿ. ದಿಕ್ಕು ತೋಚುತ್ತಿಲ್ಲ ಎಂದೆಲ್ಲ ಹೇಳಿ ಶರಣಪ್ಪ ಸೇರಿದಂತೆ ಅತನ ನೆರೆಹೊರೆ ರೈತರು ವಿಡಿಯೋ ಮಾಡಿದ್ದು, ಈಗ ತಾಲೂಕಿನಲ್ಲಿ ವೈರಲ್‌ ಆಗಿದೆ.
 

click me!