
ರಿಯಾಜ ಅಹ್ಮದ ಎಂ ದೊಡ್ಡಮನಿ
ಡಂಬಳ: ಮೂವತ್ಮೂರು ಸಾವಿರ ಹೆಕ್ಟೇರ್ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಸಸ್ಯಕಾಶಿ ಕಪ್ಪತ್ತಗುಡ್ಡವನ್ನು ಬೇಸಿಗೆಯ ಅವಧಿಯಲ್ಲಿ ಸಂಭವಿಸಬಹುದಾದ ಅಗ್ನಿ ಅವಘಡಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಮುಂಡರಗಿ ತಾಲೂಕಿನ ಡಂಬಳ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಕಪ್ಪತ್ತಗುಡ್ಡ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ 132ಕ್ಕೂ ಹೆಚ್ಚು ಸೂಕ್ಷ್ಮ ಸ್ಥಳಗಳಲ್ಲಿ ಫೈರ್ ಲೈನ್‌ಗಳನ್ನು ನಿರ್ಮಿಸಲಾಗಿದ್ದು, ಬೆಂಕಿ ತಡೆಯಲು ಇಲಾಖೆ ಸಂಪೂರ್ಣ ಸಿದ್ಧತೆಯಲ್ಲಿದೆ.
ಹಿರೇವಡ್ಡಟ್ಟಿ, ಡೋಣಿ, ಬಾಗೇವಾಡಿ, ಕಲಕೇರಿ ಹಾಗೂ ಡಂಬಳ ಭಾಗದ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ, ವಿಶೇಷವಾಗಿ ಪ್ರಾಣಿಗಳ ವಾಸವಿರುವ ಪ್ರದೇಶಗಳು, ಸೂಕ್ಷ್ಮ ವಲಯಗಳು ಹಾಗೂ ಅರಣ್ಯ ರಸ್ತೆ ಬದಿಗಳಲ್ಲಿ ಫೈರ್ ಲೈನ್‌ಗಳನ್ನು ನಿರ್ಮಿಸಲಾಗಿದೆ. ಕಪ್ಪತ್ತಗುಡ್ಡ ಫ್ಯಾನ್‌ಗಳ ನಿರ್ವಹಣೆಗೆ ನಿರ್ಮಾಣವಾಗಿರುವ ರಸ್ತೆ ಪಕ್ಕದ ಅರಣ್ಯ ವಲಯಗಳಲ್ಲೂ ಬೆಂಕಿ ತಡೆಯುವ ರೇಖೆಗಳನ್ನು ಅಳವಡಿಸಲಾಗಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದರು.
ಕಪ್ಪತ್ತಗುಡ್ಡಕ್ಕೆ ಬೆಂಕಿ ಬೀಳದಂತೆ ತಡೆಯುವ ಉದ್ದೇಶದಿಂದ ವಾಲಿಬಾಲ್ ಪಂದ್ಯಾವಳಿಗಳ ಆಯೋಜನೆ, ಕುರಿಗಾಯಿಗಳಿಗೆ ನೂರಾರು ಹೊಟ್ಟೆ ಚೀಲಗಳು, ಬ್ಯಾಟರಿ, ಸ್ಟೀಲಿನ ನೀರಿನ ಬಾಟಲ್‌ಗಳ ವಿತರಣೆ, ಡಂಬಳ ಹೋಬಳಿ ಹಾಗೂ ಮುಂಡರಗಿ ಭಾಗದ ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗದಗ ಜಿಲ್ಲಾ ಹಿರಿಯ ಅರಣ್ಯ ಅಧಿಕಾರಿ ಸಂತೋಷಕುಮಾರ ಕೆಂಚಪ್ಪನವರ ಮತ್ತು ಮುಂಡರಗಿ ವಲಯದ ಆರ್‌ಎಫ್‌ಒ ಮಂಜುನಾಥ ಮೇಗಲಮನಿ ಅವರ ನೇತೃತ್ವದಲ್ಲಿ ನಡೆದ ಈ ಜಾಗೃತಿ ಅಭಿಯಾನ ಪರಿಸರವೇ ಮನುಷ್ಯನ ಶಕ್ತಿ ಎಂಬ ಸಂದೇಶವನ್ನು ಸಾರುವ ಮೂಲಕ ಜನಮನ್ನಣೆ ಪಡೆದಿದೆ.
ಕಲಕೇರಿ, ಡಂಬಳ, ಬಾಗೇವಾಡಿ ಹಾಗೂ ಹಿರೇವಡ್ಡಟ್ಟಿ ಭಾಗದ 400 ಕುರಿಗಾಹಿಗಳನ್ನು ಒಳಗೊಂಡ ನಾಲ್ಕು ವಾಟ್ಸಪ್ ಗ್ರೂಪ್‌ಗಳನ್ನು ರಚಿಸಲಾಗಿದೆ. ಯಾವುದೇ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಕುರಿಗಾಹಿಗಳು ಮಾಹಿತಿ ನೀಡಿದರೆ, 20ಕ್ಕೂ ಹೆಚ್ಚು ಸಿಬ್ಬಂದಿ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಳ್ಳಲಿದೆ. ಜೊತೆಗೆ ಕಿಡಿಗೇಡಿಗಳನ್ನು ಪತ್ತೆಹಚ್ಚಲು ಆರು ಸದಸ್ಯರ ವಿಶೇಷ ತಂಡದಿಂದ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ.
ಅರಣ್ಯ ರಕ್ಷಕರಿಗೆ ಕಿಟ್ ವಿತರಣೆ
ಬೆಂಕಿ ತಡೆ ಕಾರ್ಯಾಚರಣೆಯಲ್ಲಿ ತೊಡಗಿರುವ ಅರಣ್ಯ ಸಿಬ್ಬಂದಿ ಮತ್ತು ಫೈರ್ ವಾಚರ್‌ಗಳಿಗೆ ರಾತ್ರಿ ಬಳಕೆಗೆ ಬ್ಯಾಟರಿ, ಟೀ ಶರ್ಟ್ ಪ್ಯಾಂಟ್, ನೀರಿನ ಬಾಟಲಿ, ಶೂ ಹಾಗೂ ಬ್ಯಾಗ್‌ಗಳನ್ನು ವಿತರಿಸಲಾಗಿದೆ.
ಸಿ.ಸಿ. ಕ್ಯಾಮೆರಾಗಳ ಕಣ್ಗಾವಲು:ಕಿಡಿಗೇಡಿಗಳು, ಮೌಢ್ಯ ಆಚರಣೆ ಹಾಗೂ ಫ್ಯಾನ್‌ಗಳಿಂದ ಉಂಟಾಗುವ ಅಪಾಯ ಕೆಲವರು ಹರಕೆ ಸಲ್ಲಿಸುವ ನೆಪದಲ್ಲಿ ಅಥವಾ ಮೌಢ್ಯ ಆಚರಣೆಗಳಿಂದ ಬೆಂಕಿ ಹಚ್ಚುವ ಘಟನೆಗಳು ತಡೆಯುವುದಕ್ಕಾಗಿ ಎರಡು ಡ್ರೋನ್‌ಗಳ ಮೂಲಕ ಕಣ್ಗಾವಲು, ಪ್ರಮುಖ ಪ್ರದೇಶಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಗಾಳಿ ವಿದ್ಯುತ್ ಯಂತ್ರಗಳ (ಫ್ಯಾನ್) ಶಾರ್ಟ್ ಸರ್ಕೀಟ್‌ನಿಂದ ಅಗ್ನಿ ಅವಘಡ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ.
ಕಾನೂನು ಕ್ರಮ
ಫೈರ್ ತಡೆ ಸಂಬಂಧ 132 ಸ್ಥಳಗಳಲ್ಲಿ ಪೂರ್ವಸಿದ್ಧತೆ ಕೈಗೊಂಡು ಫೈರ್ ಲೈನ್ ನಿರ್ಮಿಸಲಾಗಿದೆ. ಬೇಸಿಗೆ ಮುಗಿಯುವ ವರೆಗೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಫೈರ್ ವಾಚರ್‌ಗಳು ಹಗಲು-ರಾತ್ರಿ ಎನ್ನದೆ ಕಾರ್ಯನಿರ್ವಹಿಸಲಿದ್ದಾರೆ. ಕಪ್ಪತ್ತಗುಡ್ಡಕ್ಕೆ ಬೆಂಕಿ ತಾಗದಂತೆ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಬೆಂಕಿ ಹಚ್ಚುವ ಕಿಡಿಗೇಡಿಗಳಿಗೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಪ್ಪತ್ತಗುಡ್ಡ ಅರಣ್ಯ ವಲಯ ಅಧಿಕಾರಿ ಮಂಜುನಾಥ ಮೇಗಲಮನಿ ಹೇಳುತ್ತಾರೆ.
ಸಹಕಾರ ಅವಶ್ಯ
ಕಪ್ಪತ್ತಗುಡ್ಡ ಉಳವಿಗಾಗಿ ಅರಣ್ಯ ಇಲಾಖೆ ಮಾತ್ರ ಶ್ರಮಿಸಿದರೆ ಸಾಲದು. ಪರಿಸರವಾದಿಗಳ ಕಾಳಜಿ ಮತ್ತು ಜನತೆಯ ಸಹಕಾರ ಅತ್ಯವಶ್ಯ. ಆಮ್ಲಜನಕದ ಕಾರ್ಖಾನೆ ಎಂದೇ ಖ್ಯಾತಿಯಾದ ಕಪ್ಪತ್ತಗುಡ್ಡದ ಸಸ್ಯ ಸಂಪತ್ತಿನ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಗದಗ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವರ ಹೇಳಿದ್ದಾರೆ.