ವಿಳಂಬವಾಗಿ ದೂರು ಸಲ್ಲಿಸಿದ್ದಕ್ಕೆ ಎಫ್‌ಐಆರ್‌ ರದ್ದು, ದೂರಿನ ನೈಜತೆ ಬಗ್ಗೆ ಹೈಕೋರ್ಟ್‌ ಅನುಮಾನ

Published : Aug 04, 2022, 08:25 AM IST
ವಿಳಂಬವಾಗಿ ದೂರು ಸಲ್ಲಿಸಿದ್ದಕ್ಕೆ ಎಫ್‌ಐಆರ್‌ ರದ್ದು, ದೂರಿನ ನೈಜತೆ ಬಗ್ಗೆ  ಹೈಕೋರ್ಟ್‌ ಅನುಮಾನ

ಸಾರಾಂಶ

ಸುಲಿಗೆ ಪ್ರಕರಣದಲ್ಲಿ ವಿಳಂಬವಾಗಿ ದೂರು ಸಲ್ಲಿಸಿದ್ದಕ್ಕೆ ಎಫ್‌ಐಆರ್‌ ರದ್ದು ಮಾಡಲಾಗಿದೆ. ಇಂತಹ ಪ್ರಕರಣಗಳಲ್ಲಿ ದೂರು ದಾಖಲು ವಿಳಂಬವಾದರೆ ದೂರಿನ ನೈಜತೆ ಬಗ್ಗೆ ಅನುಮಾನ ಮೂಡುತ್ತದೆ ಎಂದು ಹೈಕೋರ್ಟ್ ಹೇಳಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸುಲಿಗೆ ಆರೋಪ ಸಂಬಂಧ ದೂರು ದಾಖಲಿಸುವುದು ವಿಳಂಬವಾದರೆ ಅದು ದೂರಿನ ನೈಜತೆ ಬಗ್ಗೆ ಅನುಮಾನ ಮೂಡಿಸುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಈ ಸಂಬಂಧ ಪ್ರಕರಣವೊಂದರಲ್ಲಿ ವ್ಯಕ್ತಿಯ ಮೇಲೆ ದಾಖಲಾಗಿದ್ದ ಎಫ್‌ಐಆರ್‌ ರದ್ದುಪಡಿಸಿ ಆದೇಶಿಸಿದೆ. ಸುಲಿಗೆ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾಗಿದ್ದ ಎರಡು ಎಫ್‌ಐಆರ್‌ ರದ್ದು ಕೋರಿ ದಾವಣಗೆರೆಯ ಇಮ್ರಾನ್‌ ಸಿದ್ದಿಕ್ಕಿ ಎಂಬುವರು ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಲ್ಲದೆ, ದೂರು ದಾಖಲಿಸಲು ವಿಳಂಬ ಮಾಡಲಾಗಿದೆ ಎಂಬ ಕಾರಣಕ್ಕೆ ಅರ್ಜಿದಾರರ ವಿರುದ್ಧ ಜೀವ ಬೆದರಿಕೆ, ಸುಲಿಗೆ ಹಾಗೂ ಅವಮಾನ ಮಾಡಿದ ಆರೋಪ ಸಂಬಂಧ ದಾಖಲಿಸಲಾಗಿದ್ದ ಎರಡು ಎಫ್‌ಐಆರ್‌ ರದ್ದುಪಡಿಸಿ ಆದೇಶಿಸಿದೆ. ಅರ್ಜಿದಾರ ಇಮ್ರಾನ್‌ ತನ್ನನ್ನು ಬೆದರಿಸಿ 2 ಲಕ್ಷ ರು. ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿ ಮುಬಾರಕ್‌ ಎಂಬ ವ್ಯಾಪಾರಿ, 2022ರ ಮೇ 1ರಂದು ದೂರು ಸಲ್ಲಿಸಿದ್ದರು. ಅದನ್ನು ಆಧರಿಸಿ ದಾವಣಗೆರೆ ಗ್ರಾಮೀಣ ಠಾಣಾ ಪೊಲೀಸರು ಸಿದ್ದಿಕಿಯನ್ನು ಬಂಧಿಸಿದ್ದರು. ಜಾಮೀನಿನ ಮೇಲೆ ಹೊರಬಂದ ಬಳಿಕ ಅದೇ ಆರೋಪಗಳ ಮೇಲೆ ಮೇ 5ರಂದು ಮತ್ತೊಂದು ದೂರು ನೀಡಲಾಗಿತ್ತು. ಅದರಲ್ಲೂ ಎಫ್‌ಐಆರ್‌ ಆಗಿದ್ದು, ಅವುಗಳನ್ನು ರದ್ದುಪಡಿಸುವಂತೆ ಸಿದ್ದಿಕಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಪ್ರಕರಣದ ಎಲ್ಲ ವಿವರಗಳನ್ನು ಗಮನಿಸಿದರೆ ಅರ್ಜಿದಾರ ವಿರುದ್ಧ ದೂರು ದಾಖಲಿಸುವಲ್ಲಿ 9 ತಿಂಗಳು ವಿಳಂಬ ಮಾಡಲಾಗಿದೆ. ಅರ್ಜಿದಾರರ ವಿರುದ್ಧ ಹಣ ಸುಲಿಗೆ ಆರೋಪ ಹೊರಿಸಡಲಾಗಿದೆ. ಆದರೆ, ಘಟನೆ ನಡೆದ ತಕ್ಷಣವೇ ದೂರು ನೀಡದೆ ಅನಗತ್ಯ ವಿಳಂಬ ಮಾಡಿದರೆ, ಆಗ ದೂರಿನ ನೈಜತೆ ಬಗ್ಗೆ ಅನುಮಾನ ಮೂಡುತ್ತದೆ ಎಂದು ಅಭಿಪ್ರಾಯಪಟ್ಟಿತು.

ಅಲ್ಲದೆ, ದೂರುದಾರರು ಭಯದಿಂದ ದೂರು ನೀಡಲು ವಿಳಂಬವಾಗಿದೆ ಎನ್ನುತ್ತಾರೆ. ಆದರೆ ಅವರಿಗೆ ಯಾವ ರೀತಿಯ ಭಯ ಅಥವಾ ಬೆದರಿಕೆ ಇತ್ತೆಂಬುದಕ್ಕೆ ಯಾವುದೇ ವಿವರಣೆ ನೀಡಿಲ್ಲ. ಮೇಲ್ನೋಟಕ್ಕೆ ಆರೋಪಗಳಲ್ಲಿ ಸತ್ಯಾಂಶವಿಲ್ಲ. ಈ ಪ್ರಕರಣದಲ್ಲಿ ಮುಂದಿನ ತನಿಖೆಗೆ ಅವಕಾಶ ನೀಡಿದರೆ ಅದು ಅರ್ಜಿದಾರರಿಗೆ ಕಿರುಕುಳ ನೀಡಿದಂತಾಗುತ್ತದೆ ಮತ್ತು ಕಾನೂನು ದುರುಪಯೋಗವಾಗುತ್ತದೆ ಎಂದು ತಿಳಿಸಿದ ನ್ಯಾಯಪೀಠ ಅರ್ಜಿದಾರರ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಪಡಿಸಿದೆ.

PREV
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ