ಯುವಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದ ಕಾನ್‌ಸ್ಟೇಬಲ್‌ ವಿರುದ್ಧ ಕೇಸ್‌

By Kannadaprabha NewsFirst Published Mar 2, 2020, 8:56 AM IST
Highlights

ಯುವಕನ ಅಕ್ರಮ ಬಂಧನ: ಕಾನ್‌ಸ್ಟೇಬಲ್‌ ವಿರುದ್ಧ ಕೇಸ್‌| ಕಂಪನಿಯಲ್ಲಿ ಹಣ ದುರ್ಬಳಕೆ ಮಾಡಿದ್ದಾನೆಂದು ಯುವಕನಿಗೆ ಚಿತ್ರಹಿಂಸೆ: ಆರೋಪ|ನ್ಯಾಯಾಲಯ ಸೂಚನೆ ಮೇರೆಗೆ ಕಾನ್‌ಸ್ಟೇಬಲ್‌ ವಿರುದ್ಧ ಎಫ್‌ಐಆರ್‌ ದಾಖಲು|

ಬೆಂಗಳೂರು[ಮಾ.02]: ಯುವಕನನ್ನು ಅಕ್ರಮ ಬಂಧನದಲ್ಲಿರಿಸಿ ಹಲ್ಲೆ ನಡೆಸಿದ ಆರೋಪದ ಮೇರೆಗೆ ಆರ್‌ಎಂಸಿ ಯಾರ್ಡ್‌ ಠಾಣೆ ಕಾನ್‌ಸ್ಟೇಬಲ್‌ ಸೇರಿ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

9ನೇ ಎಸಿಎಂಎಂ ನ್ಯಾಯಾಲಯದ ಆದೇಶದ ಮೇರೆಗೆ ಕಾನ್‌ಸ್ಟೇಬಲ್‌ ಪ್ರಭು ಮತ್ತು ಗಂಗಾ-ಮೀನಾಕ್ಷಿ ಟ್ರೇಡ​ರ್ಸ್ ನ ಮಾಲೀಕ ನಾಗಭೂಷಣ್‌ ಎಂಬುವರ ವಿರುದ್ಧ ಅದೇ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೀರ್ತಿಕ್‌ (24) ಎಂಬ ಯುವಕ ಆರ್‌ಎಂಸಿ ಯಾರ್ಡ್‌ನಲ್ಲಿರುವ ನಾಗಭೂಷಣ ಎಂಬುವರ ಗಂಗಾ-ಮೀನಾಕ್ಷಿ ಎಂಬ ಟ್ರೇಡ​ರ್ಸ್ ನಲ್ಲಿ ಸಹಾಯಕನಾಗಿದ್ದ. 2018ರ ಏ.4ರಂದು ಕಾನ್‌ಸ್ಟೇಬಲ್‌ ಪ್ರಭು, ಕೀರ್ತಿಕ್‌ಗೆ ನಿನ್ನ ವಿರುದ್ಧ ದೂರು ದಾಖಲಾಗಿದೆ ಎಂದು ಠಾಣೆಗೆ ಕರೆ ತಂದಿದ್ದರು. ಮರುದಿನ ಎಸಿಪಿ ಬಳಿ ಕರೆದೊಯ್ದಿದ್ದರು. ಈ ವೇಳೆ ಕಾನ್‌ಸ್ಟೇಬಲ್‌, ನಾಗಭೂಷಣ್‌ ಹಾಗೂ ಎಸಿಪಿ ಅವರು ‘ನೀನು ಅಂಗಡಿಯಲ್ಲಿನ 30 ಲಕ್ಷ ದುರ್ಬಳಕೆ ಮಾಡಿಕೊಂಡಿದ್ದೀಯಾ. ಹಣ ಹಿಂದಿರುಗಿಸಬೇಕು’ ಎಂದು ಎಚ್ಚರಿಕೆ ನೀಡಿದ್ದರು. ನಂತರ ಕಾನ್‌ಸ್ಟೇಬಲ್‌ ಪ್ರಭು ಅವಾಚ್ಯ ಶಬ್ದದಿಂದ ನಿಂದಿಸಿ, ಬೆಲ್ಟ್‌, ಲಾಟಿ ಮತ್ತು ಶೂ ಕಾಲಿನಿಂದ ಹಲ್ಲೆ ನಡೆಸಿದ್ದರು. 

ಪರಿಣಾಮ ಯುವಕನ ಕಾಲು ಹಾಗೂ ಮೈ-ಕೈ ಮೇಲೆ ರಕ್ತ ಗಾಯವಾಗಿತ್ತು. ಬಳಿಕ ಯುವಕನ ಸಂಬಂಧಿಕರೊಬ್ಬರನ್ನು ಕರೆಯಿಸಿ ಮೂರು ದಿನದೊಳಗೆ ಹಣ ಕೊಡದಿದ್ದಲ್ಲಿ ಜೈಲಿಗೆ ಕಳುಹಿಸುವುದಾಗಿ ಬೆದರಿಸಿ ಅವರ ಬಳಿಯಿದ್ದ 30 ಸಾವಿರ ಕಸಿದು ಏ.5ರಂದು ಸಂಜೆ ಬಿಟ್ಟು ಕಳುಹಿಸಿದ್ದರು. ಠಾಣೆಯಿಂದ ಹೋದ ಯುವಕ ಕೆ.ಸಿ.ಜನರಲ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ. ಈ ಸಂಬಂಧ ಯುವಕ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದ. ವಿಚಾರಣೆ ನಡೆಸಿದ ನ್ಯಾಯಾಲಯ ಎಫ್‌ಐಆರ್‌ ದಾಖಲಿಸುವಂತೆ ನೀಡಿದ ಸೂಚನೆ ಮೇರೆಗೆ ಕಾನ್‌ಸ್ಟೇಬಲ್‌ ವಿರುದ್ಧ ಪ್ರಕರಣ ದಾಖಲಾಗಿದೆ.
 

click me!